ನಿಮ್ಮ ಸುದ್ದಿ ಬೆಳಗಾವಿ
ಇಡೀ ಬೆಂಗಳೂರು ಹಾಳಾಗಲು ಕಾಂಗ್ರೆಸ್ಸಿಗರೇ ಕಾರಣ. ಮಾಡಿದ ತಪ್ಪುಮುಚ್ಚಿಕೊಳ್ಳಲು ಪ್ರತಿಭಟನೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸರಕಾರಿ ಭೂಮಿ ಅತಿಕ್ರಮಣಕ್ಕೆ ದಾರಿ ಮಾಡಿಕೊಟ್ಟಿದ್ದೆ ಕಾಂಗ್ರೆಸ್ ಪಕ್ಷ. ಕೆರೆ, ರಾಜಕಾಲುವೆಗಳನ್ನು ನುಂಗಿ ಹಾಕಿದ್ದಾರೆ. ರಾಜಕಾಲುವೆ ಹೆಸರಿನಲ್ಲಿ ಭ್ರಷ್ಟಾಚಾರ ಸೇರಿದಂತೆ ಹತ್ತುಹಲವು ಅವ್ಯವಹಾರಗಳು ಅವರ ಕಾಲದಲ್ಲಿ ನಡೆದಿವೆ. ಅವುಗಳೆಲ್ಲವನ್ನು ಮುಚ್ಚಿಹಾಕಲು ಈ ರೀತಿ ಕೇವಲ 10 ರಿಂದ 15 ಜನರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಎರಡೂ ಅವಿಭಾಜ್ಯ ಅಂಗಗಳು. ಕಾಂಗ್ರೆಸ್ ನಾಯಕರೆಲ್ಲರೂ ಭ್ರಷ್ಟಾಚಾರ ದಲ್ಲಿ ಪಿಎಚ್ ಡಿ ಪಡೆದುಕೊಂಡಿದ್ದಾರೆ. ಇದೆಲ್ಲವನ್ನೂ ಮರೆಮಾಸಲು ಪ್ರತಿಭಟನೆ ನಾಟಕ ಆಡುತ್ತಿದ್ದಾರೆ. ಒಂದೇ ಕಡೆ ಪ್ರತಿಭಟನೆಗೆ ಕರೆ ನೀಡಿದರೆ ಜನ ಸೇರುವುದಿಲ್ಲ ಎನ್ನುವ ಕಾರಣಕ್ಕೆ ನೂರಾರು ಕಡೆ ಪ್ರತಿಭಟನೆಗೆ ಕರೆ ನೀಡಿದ್ದಾರೆ ಎಂದರು.
ತನಿಖೆ ಮಾಡಿಸುತ್ತೇವೆ : ಸಂವಿಧಾನಾತ್ಮ ಪ್ರತ್ಯೇಕ ಸಂಸ್ಥೆ ಎನಿಸಿಕೊಂಡಿದ್ದ ಲೋಕಾಯುಕ್ತವನ್ನೆ ಮುಚ್ಚಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದೆ ಕಾಂಗ್ರೆಸ್. ತಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಮುಚ್ಚಿಹಾಕಿದ್ದರು. ಆದರೆ, ದೂರು ಕೊಟ್ಟಿರುವ ಎಲ್ಲ ಪ್ರಕರಣಗಳನ್ನು ಅದೇ ಲೋಕಾಯುಕ್ತರಿಗೆ ಕೊಟ್ಟು ತನಿಖೆ ಮಾಡಿಸುತ್ತೇವೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಮಾತೆತ್ತಿದರೆ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆ ಎನ್ನುವ ಕಾಂಗ್ರೆಸ್ ವರ್ತನೆಯೇ ಹಾಸ್ಯಾಸ್ಪದವಾಗಿದೆ. ಬೆಂಗಳೂರಿನಲ್ಲಿ ಚರ್ಚೆಗೆ ಬಾರದೆ ಓಡಿ ಹೋದವರು ಬೆಳಗಾವಿಯ ಅಧಿವೇಶನದಲ್ಲೂ ಬರಲಿಲ್ಲ. ಸದನದ ಒಳಗೂ-ಹೊರಗೂ ಅವರನ್ನು ಎದುರಿಸುವ ಶಕ್ತಿ ಬಿಜೆಪಿ ಪಕ್ಷಕ್ಕಿದೆ ಎಂದರು.
ಕಳಸಾ ಬಂಡೂರಿ ಯೋಜನೆ ಡಿಪಿಆರ್ ಆಗಿದ್ದು, ಅರಣ್ಯ ಇಲಾಖೆ ಅನುಮತಿ ಸಿಕ್ಕ ತಕ್ಷಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಸುತ್ತೇವೆ ಎಂದ ಸಿಎಂ ಬೊಮ್ಮಾಯಿ, ಯೋಜನೆ ವಿವಾದ ವಿಷಯವಾಗಿ ನ್ಯಾಯಾಧೀಕರಣ ರಚನೆಗೊಂಡು ಅಲ್ಲಿ ಚರ್ಚೆ ನಡೆದು ತೀರ್ಪು ಬಂದಿರುವಾಗ ಗೋವಾ ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ. ನಾವು ಕಾನೂನು ಬದ್ಧವಾಗಿದ್ದೇವೆ ಎಂದರು.
ಜ.28 ಕ್ಕೆ ಕೇಂದ್ರ ಸಚಿವ ಅಮಿತ್ ಶಾ ಬೆಳಗಾವಿ ಮತ್ತು ಹುಬ್ಬಳ್ಳಿ ಗೆ ಭೇಟಿ ನೀಡಲಿದ್ದು, ಬೆಳಗಾವಿಯಲ್ಲಿ ಸಾರ್ವಜನಿಕ ಸಭೆ ಮತ್ತು ಪಕ್ಷದ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
….
‘ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಅಗ್ರೆಸ್ಸಿವ್ ಆಗಿ ಮಾತನಾಡುತ್ತಿಲ್ಲ ಎಂದಿರುವ ಸಚಿವ ಮಾಧುಸ್ವಾಮಿ ಮೊದಲು ಅವರೇ ಆ ಕೆಲಸ ಮಾಡಲಿ’.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
……