This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಹೊಸ ಪೀಳಿಗೆಗೆ ಅವಕಾಶ, ಟಿಕೆಟ್ ನಿರಾಕರಣೆ

ಹೊಸ ಪೀಳಿಗೆಗೆ ಅವಕಾಶ, ಟಿಕೆಟ್ ನಿರಾಕರಣೆ

ನಿಮ್ಮ ಸುದ್ದಿ ಹುಬ್ಬಳ್ಳಿ

ಹೊಸ ಪೀಳಿಗೆಗೆ ಅವಕಾಶ ನೀಡಬೇಕು, ಪಕ್ಷದಲ್ಲಿ ಹೊಸ ನಾಯಕತ್ವ ಬೆಳೆಸಬೇಕು ಎಂಬುದು ಪಕ್ಷದ ತೀರ್ಮಾನ. ಅದೇ ಸರಣಿಯಲ್ಲಿ ಶೆಟ್ಟರ್ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ರಾಜ್ಯಗಳಲ್ಲಿ ಈ ರೀತಿಯ ತೀರ್ಮಾನ ಮಾಡಲಾಗಿದೆ. ಯಾರನ್ನೂ ವೈಯಕ್ತಿಯವಾಗಿ ಗುರಿಯಾಗಿಸಿ ಈ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

ಲಿಂಗಾಯತ ಸಮುದಾಯಕ್ಕೆ‌ ಅತಿ‌ ಹೆಚ್ಚು ಸೀಟು ನೀಡಿದ್ದು ಬಿಜೆಪಿ. ಸಮುದಾಯದವರಿಗೆ ಹೆಚ್ಚಿನ ಸಚಿವ ಸ್ಥಾನ ಸಹ ನೀಡಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಮೊ‌ದಲ ಹಂತದ ನಾಯಕತ್ವ ಬೆಳೆದಿದೆ. ಎರಡನೇ ಹಂತದಲ್ಲಿ ಸಿ.ಸಿ.ಪಾಟೀಲ, ಮುರುಗೇಶ‌ ನಿರಾಣಿ, ಬಸನಗೌಡ ಪಾಟೀಲ‌ ಯತ್ನಾಳ, ಶಶಿಕಲಾ‌ಜೊಲ್ಲೆ, ದತ್ತಾತ್ರೇಯ ಪಾಟೀಲ‌ ರೇವೂರ ಅವರಂತಹ ನಾಯಕರಿದ್ದಾರೆ ಎಂದರು.

ಬಿಜೆಪಿಯಲ್ಲಿ ನಮ್ಮ ಸಮುದಾಯದ ಯಡಿಯೂರಪ್ಪ ಅವರ ನಾಯಕತ್ವ ಇದೆ. ಮುಂದೆ ಹಲವರಿಗೆ ಅವಕಾಶಗಳು ಇದ್ದವು. ಶೆಟ್ಟರ್ ನೇತೃತ್ವದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗಿದ್ದರೆ ಚೆನ್ನಾಗಿತ್ತು. ಆದರೆ ಅವರು ಆ ನಿಟ್ಟಿನಲ್ಲಿ ತೀರ್ಮಾನ‌ ಮಾಡಲಿಲ್ಲ. ಆದರೂ ಪಕ್ಷ ಸಂಘಟನೆ, ಚುನಾವಣಾ ರಣನೀತಿಯನ್ನು‌ ಮುಂದುವರಿಸಿಕೊಂಡು ಹೋಗುತ್ತೇವೆ. ಪಕ್ಷವನ್ನು‌ ಗೆಲ್ಲಿಸುತ್ತೇವೆ ಎಂದರು.

ಪಕ್ಷ ಮತ್ತೆ ಪುಟಿದೇಳಲಿದೆ. ಎಲ್ಲ ಕಡೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.

ರಾಜ್ಯ, ಜಿಲ್ಲಾ ಕೋರ್ ಕಮಿಟಿಯಲ್ಲಿ ಅವರ ಹೆಸರಿತ್ತು. ಆ ನಂತರ ಪಕ್ಷ ಈ‌ ನಿರ್ಧಾರ ತೆಗೆದುಕೊಂಡಿದೆ. ಹೀಗಿದ್ದಾಗ ಮುಂಚಿತವಾಗಿ ಅವರಿಗೆ ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.

ಸಿ.ಎಂ.ಸ್ಥಾನ ತಪ್ಪಿಸಲು ಟಿಕೆಟ್ ನೀಡಿಲ್ಲ ಎಂಬ ಶೆಟ್ಟರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಸಿ.ಎಂ.ಸ್ಥಾನಕ್ಕೆ ಹಲವು ಜನ ಹಿರಿಯರು ಇದ್ದಾರೆ ಎಂದರು.

ಶೆಟ್ಟರ್ ಅವರ ಪ್ರಭಾವವನ್ನು ಅಲ್ಲಗಳೆಯುವುದಿಲ್ಲ. ಆದರೆ, ಪಕ್ಷ ಸಶಕ್ತವಾಗಿದೆ. ಇಂತಹ ಹಲವು ಪ್ರಸಂಗಗಳನ್ನು‌ ಎದುರಿಸಿದ್ದೇವೆ. ಡ್ಯಾಮೇಜ್ ಕಂಟ್ರೋಲ್‌ ಮಾಡುತ್ತೇವೆ ಎಂದು ಹೇಳಿದರು.

ನಮಗೆ ಪಕ್ಷದ ಆದರ್ಶಗಳನ್ನು ಹೇಳಿಕೊಟ್ಟವರು ಶೆಟ್ಟರ್. ಅವರು ರಾಜೀನಾಮೆ ನೀಡಿದ್ದು ವೈಯಕ್ತಿಕವಾಗಿ ನೋವು ತಂದಿದೆ ಎಂದರು.

ಜಗದೀಶ ಶೆಟ್ಟರ್ ಈ ಭಾಗದ ಹಿರಿಯ ಮತ್ತು ಪ್ರಮುಖ ನಾಯಕ. ವೈಯಕ್ತಿಕವಾಗಿ ಅವರೊಂದಿಗೆ ಉತ್ತಮ ಸ್ನೇಹ ಇದೆ. ಒಂದು ಬಾರಿ ನಾನು, ಅವರು ಪ್ರತಿಸ್ಪರ್ಧಿಗಳಾಗಿದ್ದೆವು. ಆದರೆ, ನಮ್ಮ‌ಸ್ನೇಹಕ್ಕೆ ಧಕ್ಕೆ ಆಗಿರಲಿಲ್ಲ. ಅವರು ಶಾಸಕ‌ ಸ್ಥಾನ‌‌ ಮತ್ತು ಪಕ್ಷಕ್ಕೆ ರಾಜೀನಾಮೆ‌ ನೀಡಿರುವುದು ನೋವು ತಂದಿದೆ ಎಂದರು.

ಪಕ್ಷ ಹಲವು ಸಂದರ್ಭಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಥಾಪಿತ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬೇರೆ ಬೇರೆ ರಾಜ್ಯಗಳಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡಿದೆ. ಇದೇ ರೀತಿ ಯಡಿಯೂರಪ್ಪ ಅವರು ಮಾದರಿ ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.

ನರೇಂದ್ರ‌‌ ಮೋದಿ ಅವರ ಚಿಂತನೆ, ಯಡಿಯೂರಪ್ಪ ಅವರ ನಡೆ ನಮಗೆ ಆದರ್ಶವಾಗಿದೆ. ಮುಖ್ಯಮಂತ್ರಿ ಆಗಿದ್ದಾಲೆ ಚುನಾವಣಾ ರಾಜಕೀಯದಿಂದ ದೂರ ಇರುವುದಾಗಿ ಹೇಳಿದರು. ಅದೆ ನಡೆಯನ್ನು ಕೆ.ಎಸ್.ಈಶ್ವರಪ್ಪ ಅನುಸರಿಸಿದರು. ಜಗದೀಶ ಶೆಟ್ಟರ್ ಅವರ ಅನುಭವ ಆಧರಿಸಿ ಇದಕ್ಕಿಂತ ದೊಡ್ಡ ಹುದ್ದೆ ನೀಡುತ್ತೇವೆ ಎಂದು ಅಮಿತ್ ಶಾ, ನಡ್ಡಾ ಅವರು ಹೇಳಿದ್ದರು. ಅವರು ಯಾರಿಗೆ ಹೇಳುತ್ತಾರೆ ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಸಹ ಹೇಳಲಾಗಿತ್ತು. ಎಂದರು.

ಬಿಜೆಪಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದೆ. ಹಲವು ವರ್ಷಗಳ ಬೇಡಿಕೆ‌ ಈಡೇರಿಸಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಗೋಪ್ಯ ಮಾತುಕತೆ

ಇಲ್ಲಿನ ಆದರ್ಶ ನಗರದಲ್ಲಿರುವ ಸಿ.ಎಂ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ

ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಗೋವಿಂದ ಕಾರಜೋಳ, ಶಾಸಕ ರಮೇಶ ಜಾರಕಿಹೊಳಿ ಅವರು ಭಾನುವಾರ ಒಂದು ಗಂಟೆಗೂ ಹೆಚ್ಚು ಸಮಯ ಗೋಪ್ಯ ಮಾತುಕತೆ ನಡೆಸಿದರು.

ಜಗದೀಶ ಶೆಟ್ಟರ್ ಅವರು ರಾಜೀನಾಮೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಮೇಲಾಗುವ ಪರಿಣಾಮಗಳು, ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿವೆ ಎಂದು ಮೂಲಗಳು ತಿಳಿಸಿವೆ.

";