ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿಯಲ್ಲಿ ಫಲಾನುಭವಿಗಳಿಗೆ ವಾಹನ ಚಾಲನಾ ಪರವಾನಿಗೆಗೆ ಸಂಬಂಧಿಸಿದಂತೆ ಟೆಂಡರ್ ಆದ ಬಾಕಿ ಹಣ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಚಾಲನಾ ಪರವಾನಿಗೆ ಮಾಲಿಕರು ಧರಣಿ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
2017 ರಲ್ಲಿ ಪಟ್ಟಣ ಪಂಚಾಯಿತಿಯಿಂದ 53 ಜನ ಫಲಾನುಭವಿಗಳಿಗೆ ವಾಹನ ಚಾಲನಾ ಪರವಾನಿಗೆಗಾಗಿ ನೀಡಲು ಟೆಂಡರ್ ಕರೆಯಲಾಗಿತ್ತು. ಇಂಡಿಯನ್ ಡ್ರೈವಿಂಗ್ ಸ್ಕೂಲ್‌ಗೆ ಟೆಂಡರ್ ಆಗಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಅಂದಾಜು ೨.೫೦ ಲಕ್ಷ ರೂ. ಟೆಂಡರ್ ಪ್ರಕ್ರಿಯೆ ಇದಾಗಿತ್ತು. 2018ರ ಅವಧಿಯಲ್ಲಿ 1 ಲಕ್ಷ 700 ರೂ. ನೀಡಿದ ಆಡಳಿತ ಉಳಿದ ಹಣವನ್ನು ನೀಡಲು ಇಲ್ಲಸಲ್ಲದ ಕಾರಣ ಹೇಳುತ್ತಿದೆ ಎಂದು ಆರೋಪಿಸಿದ ಸ್ಕೂಲ್ ಮಾಲಿಕ ಸುಧಾಕರ ಮಮದಾಪೂರ ಮಂಗಳವಾರ ಸಂಜೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಧರಣಿ ಕುಳಿತರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಬಾಕಿ ಹಣ ಪಾವತಿಗಾಗಿ ಅಲೆದಾಡಿಸುತ್ತಿದ್ದಾರೆ. ಮಂಗಳವಾರವೂ ಸಹ ಬೆಳಗ್ಗೆಯಿಂದ ಕೇಳುತ್ತಿದ್ದರೂ ಸಂಜೆಯಾದರೂ ಭರವಸೆಯಲ್ಲೇ ಕಾಲ ಕಳೆದರು. ಹೀಗಾಗಿ ಬಾಕಿ ಹಣ ನೀಡುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಧರಣಿ ಮುಂದುವರೆಸಲು ನಿರ್ಧರಿಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ರಮೇಶ ಸಮಗಾರ ಹಾಗೂ ಪಿಕೆಪಿಎಸ್ ಮಾಜಿ ಅಧ್ಯಕ್ಷ ಅಮರೇಶ ಮಡ್ಡಿಕಟ್ಟಿ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಬುಧವಾರ ಸಂಬಂಧಿಸಿದ ಕಡತ ಪರಿಶೀಲಿಸಿ ಬಾಕಿ ಹಣ ಪಾವತಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಜತೆಗೆ ಧರಣಿ ನಿರತ ವ್ಯಕ್ತಿಯೊಂದಿಗೆ ಸ್ಥಳೀಯ ಠಾಣೆಯ ಸಬ್ ಇನ್ಸಪೆಕ್ಟರ್ ಎಂ.ಜಿ.ಕುಲಕರ್ಣಿ ದೂರವಾಣಿಯಲ್ಲಿ ಮಾತನಾಡಿ ಬುಧವಾರ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು. ಎಸ್‌ಐ ಭರವಸೆ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಯಿತು.