ಅನಧಿಕೃತ ಧ್ವನಿವರ್ಧಕ ಬಳಕೆ ನಿರ್ಬಂಧಕ್ಕೆ ಆಗ್ರಹ
ನಿಮ್ಮ ಸುದ್ದಿ ಬಾಗಲಕೋಟೆ
ಅನಧಿಕೃತ ಮೈಕ್ ಹಾವಳಿ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವಲ್ಲಿ ಸರಕಾರ ಹಾಗೂ ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿ ಶ್ರೀರಾಮ ಸೇನೆಯಿಂದ ಜೂ.೮ರಂದು ರಾಜ್ಯದ ಎಲ್ಲ ಶಾಸಕರ ಮನೆ ಮುಂದೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮ ಸೇನಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಗಾಂವಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಬ್ದ ಮಾಲಿನ್ಯ ತಡೆಯವಲ್ಲಿ ಅನಧಿಕೃತ ಮೈಕ್‌ಗಳ ತೆರವಿಗಾಗಿ ಶ್ರೀರಾಮ ಸೇನೆ ಕಳೆದ ೮ ತಿಂಗಳಿನಿಂದ ಹೋರಾಟ ಆರಂಭಿಸಿತ್ತು. ಮೇ ೯ರಂದು ಹಿಂದು ದೇವಸ್ಥಾನಗಳಲ್ಲಿ ಸುಪ್ರಭಾತ ಕೇಳಿಸುವ ಪ್ರಕ್ರಿಯೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತ ಸರಕಾರ ಮೇ ೧೦ರಂದು ನೋಟಿಸ್ ಜಾರಿಗೊಳಿಸಿ ಅನಧಿಕೃತ ಮೈಕ್‌ಗಳ ತೆರವಿಗೆ ೧೫ ದಿನದ ಕಾಲಾವಕಾಶ ನೀಡಿದ್ದರೂ ಇಂದಿಗೂ ಮೈಕ್‌ಗಳ ಹಾವಳಿ ನಿಂತಿಲ್ಲ ಎಂದು ದೂರಿದರು.
ಆದೇಶ ಪಾಲನೆಗೆ ಪೊಲೀಸ್ ಇಲಾಖೆಗೆ ಜವಾಬ್ದಾರಿ ವಹಿಸಿದ್ದರೂ ಸರಕಾರದ ಆದೇಶ ಪಾಲಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ಸರಕಾರವೂ ಸಹ ಆದೇಶ ಮಾಡಿ ಸುಮ್ಮನೆ ಕುಳಿತಂತೆ ಕಾಣುತ್ತಿದೆ. ಗಡುವು ಮುಗಿದರೂ ರಾಜ್ಯದ ಸಾಕಷ್ಟು ಕಡೆ ಇಂದಿಗೂ ಮೈಕ್ ಹಾವಳಿ ನಿಂತಿಲ್ಲ. ಸರಕಾರ ಕಾಟಾಚಾರದ ಆದೇಶ ಮಾಡಿದ್ದು ಕಟ್ಟುನಿಟ್ಟಿನ ಕ್ರಮ ಎಂಬುದು ಹೇಳಿಕೆಯಲ್ಲೇ ಇದ್ದಂತೆ ಕಾಣುತ್ತಿದೆ ಎಂದು ತಿಳಿಸಿದರು.
ಸರಕಾರ ಹಾಗೂ ಪೊಲೀಸ್ ಇಲಾಖೆ ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಅನಧಿಕೃತ ಮೈಕ್‌ಗಳ ತೆರವಿಗಾಗಿ ಠಾಣೆಯಲ್ಲಿ ನಡೆದ ಸಭೆಗಳು ಕೇವಲ ತೋರಿಕೆಗಾಗಿ ಎಂಬಂತಿವೆ. ಈಗಲಾದರೂ ಸರಕಾರ ಎಚ್ಚೆತ್ತು ಅನಕೃತ ಮೈಕ್‌ಗಳಿಗೆ ಕಡಿವಾಣ ಹಾಕಬೇಕು. ಉತ್ತರಪ್ರದೇಶದ ಸಿಎಂ ಆದಿತ್ಯನಾಥ ಯೋಗಿ ಅವರ ನಿರ್ಧಾರಗಳನ್ನು ರಾಜ್ಯದಲ್ಲೂ ಜಾರಿಗೊಳಿಸಲು ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಜೂ.೮ರಂದು ರಾಜ್ಯದ ಎಲ್ಲ ಶಾಸಕರ ಮನೆ ಮುಂದೆ ಶ್ರೀರಾಮ ಸೇನೆ ಹಾಗೂ ಹಿಂದು ಪರ ಸಂಘಟನೆಗಳು ಸೇರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಿದ್ದು ಬಾಲರಡ್ಡಿ, ಆನಂದ ಜಂಬಗಿಮಠ, ಗಣಪತಿ ಮನಗೂಳಿ ಇದ್ದರು.