ನಾಳೆ ಹುಲ್ಯಾಳ ಗ್ರಾಮದಲ್ಲಿ ಡಿಸಿ ರಾಜೇಂದ್ರ ಗ್ರಾಮವಾಸ್ತವ್ಯ
ನಿಮ್ಮ ಸುದ್ದಿ ಬಾಗಲಕೋಟೆ
ಸರಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಫೆಬ್ರವರಿ 20 ರಂದು ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಹಳ್ಳಿಗಳ ಸಮಸ್ಯೆ ಅರಿತು ಅರ್ಜಿ ಪಡೆಯುವದ ಜೊತೆಗೆ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಇಡೀ ದಿನ ಗ್ರಾಮದಲ್ಲಿ ವ್ಯಾಸ್ತವ್ಯ ಮಾಡಲಿದ್ದಾರೆ.
ಇವರ ಜೊತೆಗೆ ಭೂದಾಖಲೆಗಳ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಭೇಟಿ ಸಂದರ್ಭದಲ್ಲಿ ನೀಡಲಾಗಿರುವ ಕಾರ್ಯಸೂಚಿಯನ್ವಯ ಫಲಾನುಭವಿಗಳ ಅರ್ಜಿಗಳನ್ನು ಸಂಗ್ರಹಿಸಿ, ಅರ್ಜಿಗಳ ಮೇಲೆ ಯಾರ ಹಂತದಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ಮೊದಲೇ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಲೇವಾರಿಯಾಗಿರುವ ಬಗ್ಗೆ ಸಂಬಂಧಿಸಿದ ಫಲಾನುಭವಿಗಳಿಗೆ ತಿಳಿಸಲಾಗುತ್ತದೆ. ಅರ್ಜಿಗಳ ಮೇಲೆ ಬೇರೆ ಬೇರೆ ಹಂತದಲ್ಲಿ ವಿಚಾರಣೆಯ ಅವಶ್ಯಕತೆ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಗ್ರಾಮದಲ್ಲಿನ ಎಲ್ಲ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಆಕಾರ್ ಬಂದ್ ತಾಳೆಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತದೆ. ಎಲ್ಲ ಪಹಣಿಗಳಲ್ಲಿಯೂ ಕೂಡಾ ಕಾಲಂ 3 ಮತ್ತು ಕಾಲಂ 9 ರಿಂದ ಸೂಕ್ತ ನಿರ್ದೇಶನ ಹೊರಡಿಸಲಾಗುತ್ತದೆ. ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9 ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ವಹಿಸಲಾಗುತ್ತದೆ. ಅರ್ಹ ವ್ಯಕ್ತಿಗಳಿಗ ಪಿಂಚಣಿ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಲಾಗುತ್ತದೆ. ಬಿಟ್ಟು ಹೋದ ಪ್ರಕರಣಗಳು ಇದ್ದಲ್ಲಿ ಸ್ಥಳದಲ್ಲಿಯೇ ಆದೇಶ ನೀಡಲಾಗುತ್ತದೆ.
ಗ್ರಾಮದಲ್ಲಿನ ಸ್ಮಶಾನ ಲಭ್ಯತೆ ಬಗ್ಗೆ ಪರಿಶೀಲನೆ, ಸ್ಮಶಾನ ಇಲ್ಲದಿದ್ದಲ್ಲಿ ಸರಕಾರದ ಆದೇಶದಂತೆ ಕ್ರಮವಹಿಸಲಾಗುತ್ತದೆ. ಆಶ್ರಯ ಯೋಜನೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನು ಕಾಯ್ದಿರಿಸಲು ಕ್ರಮ ವಹಿಸಲಾಗುತ್ತದೆ. ಸರಕಾರಿ ಜಮೀನು ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ, ಆಧಾರ ಕಾರ್ಡಿನ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಆನ್‍ಲೈನ್ ಮುಖಾಂತರ ಸಂಬಂಧಪಟ್ಟ ನಾಡ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಸರಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು, ಮತದಾರರ ಪಟ್ಟಿ ಪರಿಷ್ಕರಣೆ, ಪ್ರವಾಹ ಹಾನಿ ತಪ್ಪಿಸಲು ಸಲಹೆ ಸೂಚನೆ, ಅತಿವೃಷ್ಠಿ, ಅನಾವೃಷ್ಟಿ ಎದುರಿಸಲು ಮುಂಜಾಗ್ರತಾ ಕ್ರಮ, ಹದ್ದು ಬಸ್ತು, ಪೋಡಿ ಮುಕ್ತ ಗ್ರಾಮ, ದರಕಾಸ್ತು ಪೋಡಿ, ಕಂದಾಯ ಗ್ರಾಮಗಳ ರಚನೆ, ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾ ಕ್ರಮದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅರ್ಹ ಕುಟುಂಬಗಳಿಗ ಬಿಪಿಎಲ್ ಕಾರ್ಡ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಸೇರಿದಂತೆ ಇತರೆ ಕೆಲಸ ಮಾಡಲಾಗುತ್ತದೆ.
ಗ್ರಾಮ ವಾಸ್ತವ್ಯಕ್ಕೆ ಆಯ್ಕೆಯಾದ ಗ್ರಾಮಗಳ ವಿವರ
ಈ ತಿಂಗಳ 3ನೇ ಶನಿವಾರವಾದ ಫೆಬ್ರವರಿ 20 ರಂದು ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಗ್ರಾಮ ವಾಸ್ತವ್ಯ ಮಾಡಿದರೆ, ಬಾಗಲಕೋಟೆ ತಾಲೂಕಿನ ಬಿಲ್‍ಕೆರೂರ ಗ್ರಾಮದಲ್ಲಿ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ಬಾದಾಮಿ ತಾಲೂಕಿನ ಬೇಡರ ಬೂದಿಹಾಳ ಗ್ರಾಮದಲ್ಲಿ ತಹಶೀಲ್ದಾರ ಸುಹಾಸ ಇಂಗಳೆ, ಹುನಗುಂದ ತಾಲೂಕಿನ ಬೇವಿನಮಟ್ಟಿ ಹಾಗೂ ಗುಳೇದಗುಡ್ಡದ ಕಟಗೇರಿ ಗ್ರಾಮದಲ್ಲಿ ತಹಶೀಲ್ದಾರ ಗುರುರಾಜ ಕುಲಕರ್ಣಿ, ಇಲಕಲ್ಲ ತಾಲೂಕಿನ ಗಡಿಸುಂಕಾಪೂರ ಗ್ರಾಮದಲ್ಲಿ ನಿಂಗಪ್ಪ ಬಿರಾದಾರ, ಮುಧೋಳ ತಾಲೂಕಿನ ಮಾಲಾಪೂರ ಗ್ರಾಮದಲ್ಲಿ ತಹಶೀಲ್ದಾರ ಸಂಗಮೇಶ ಬಾಡಗಿ, ಬೀಳಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಭೀಮಪ್ಪ ಅಜ್ಜೂರ, ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಪ್ರಶಾಂತ ಚನಗೊಂಡ ವಾಸ್ತವ್ಯ ಮಾಡಲಿದ್ದಾರೆ.