ಕಾಂಗ್ರೆಸ್-ಬಿಜೆಪಿಗೆ ಪ್ರತಿಷ್ಠೆಯ ಕಣ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಕ್ಷೇತ್ರದ ಬ್ಯಾಂಕ್ ಎಂದೆನಿಸಿಕೊಂಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶನ ಸ್ಥಾನಗಳ ಚುನಾವಣೆ ರಣಕಣ ರಂಗೇರಿದ್ದು ನವೆಂಬರ್ ೫ರಂದು ಚುನಾವಣೆ ನಡೆಯಲಿದೆ.
ಬ್ಯಾಂಕ್‌ನ ಆಡಳಿತ ಮಂಡಳಿಯ ೧೩ ನಿರ್ದೇಶಕ ಸ್ಥಾನಗಳಲ್ಲಿ ಈಗಾಗಲೆ ಬಾಗಲಕೋಟೆ ಪಿಕೆಪಿಎಸ್ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಅಜಯಕುಮಾರ ಸರನಾಯಕ ಹಾಗೂ ಟಿಎಪಿಸಿಎಂಎಸ್ ಕ್ಷೇತ್ರದಿಂದ ನಂದಕುಮಾರ ಪಾಟೀಲ ಅವಿರೋಧ ಆಯ್ಕೆ ಆಗಿದ್ದು ಇನ್ನುಳಿತ ೧೧ ಕ್ಷೇತ್ರಗಳಿಂದ ೨೫ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಸತತ ಕಾಂಗ್ರೆಸ್ ವಶದಲ್ಲಿರುವ ಬಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಮೂಲಕ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಭಾರಿ ತಂತ್ರಗಾರಿಕೆಯೇ ನಡೆದಿದೆ ಎನ್ನಲಾಗಿದೆ. ಎಲ್ಲರೂ ತಮ್ಮ ತಮ್ಮ ಗೆಲುವಿಗೆ ರಣತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದು ಗುರುವಾರ ಸಂಜೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಹಾಲಿ ಸದಸ್ಯರಾದ ರಾಮಣ್ಣ ತಳೇವಾಡ, ಹಣಮಂತ ನಿರಾಣಿ, ಶಾಸಕರಾದ ಸಿದ್ದು ಸವದಿ, ಅನಂದ ನ್ಯಾಮಗೌಡ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ ಹಲವು ಘಟಾನುಘಟಿಗಳು ಈ ಬಾರಿ ಕಣದಲ್ಲಿದ್ದಾರೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸ್ಪರ್ಧಿಸಿರುವ ಹುನಗುಂದ ಕ್ಷೇತ್ರದ ಮತದಾನದ ಹಕ್ಕಿನ ಕುರಿತು ಇನ್ನೂ ಗೊಂದಲ ಮುಂದುವರೆದಿದ್ದು ಯಾರ ಮತ ಸಿಂಧುತ್ವಗೊಳ್ಳಲಿದೆ ಎಂಬುದಕ್ಕೆ ಈವರೆಗೂ ಸ್ಪಷ್ಟತೆ ದೊರೆತಿಲ್ಲ.
ಪಿಕೆಪಿಎಸ್ ಕ್ಷೇತ್ರಗಳು
ಬಾದಾಮಿ: ಕುಮಾರಗೌಡ ಜನಾಲಿ, ಹಣಮಂತಗೌಡ ಗೌಡ್ರ, ಮಲ್ಲಪ್ಪ ಕಿತ್ತಲಿ
ಹುನಗುಂದ: ವಿಜಯಾನಂದ ಕಾಶಪ್ಪನವರ, ವೀರೇಶ ಉಂಡೋಡಿ
ಇಳಕಲ್: ಮಹಾಂತೇಶ ನರಗುಂದ, ಶಿವನಗೌಡ ಅಗಸಿಮುಂದಿನ
ಬೀಳಗಿ: ಈರಣ್ಣ ಗಿಡ್ಡಪ್ಪಗೋಳ, ಎಸ್.ಆರ್.ಪಾಟೀಲ
ಮುಧೋಳ: ಮಹಾಂತೇಶ ಉದುಪುಡಿ, ರಾಮಣ್ಣ ತಳೇವಾಡ
ಜಮಖಂಡಿ: ಆನಂದ ನ್ಯಾಮಗೌಡ, ಯೋಗಪ್ಪ ಸವದಿ
ರಬಕವಿ-ಬನಹಟ್ಟಿ: ಸಿದ್ದು ಸವದಿ, ಭೀಮಶೀ ಮಗದುಮ್, ಬಸವರಾಜ ಪಾಟೀಲ
ಪಟ್ಟಣ ಸಹಕಾರಿ ಸಂಘ ಮತ್ತು ಬಿನ್ ಶೇತ್ಕಿ ಸಂಘಗಳು: ಶಿವಾನಂದ ಉದುಪುಡಿ, ಪ್ರಕಾಶ ತಪಶೆಟ್ಟಿ
ಇತರೆ ಸಹಕಾರಿ ಸಂಘಗಳು: ಮಲ್ಲಿಕಾರ್ಜುನ ಕುರಿ, ಹಣಮಂತ ನಿರಾಣಿ
ನೇಕಾರ ಸಹಕಾರಿ ಸಂಘಗಳ ಕ್ಷೇತ್ರ: ಡಾ.ಎಂ.ಎಸ್.ದಡ್ಡೇನವರ, ಮುರುಗೇಶ ಕಡ್ಲಿಮಟ್ಟಿ, ಮಲ್ಲಿಕಾರ್ಜುನ ಬಣಕಾರ.
ಉಣ್ಣೆ ನೇಕಾರರ ಸಹಕಾರಿ ಸಂಘಗಳ ಕ್ಷೇತ್ರ: ಸದಾಶಿವ ಇಟಕನ್ನವರ, ಎಚ್.ವೈ.ಮೇಟಿ
ಕ್ಷೇತ್ರವಾರು ಮತದ ವಿವರ
ಬಾದಾಮಿ ಪಿಕೆಪಿಎಸ್-೫೧, ಬೀಳಗಿ ಪಿಕೆಪಿಎಸ್-೩೯ ಕ್ಷೇತ್ರಗಳು, ಹುನಗುಂದ ಪಿಕೆಪಿಎಸ್-೨೫, ಜಮಖಂಡಿ ಪಿಕೆಪಿಎಸ್-೩೫, ಮುಧೋಳ ಪಿಕೆಪಿಎಸ್-೩೭, ರಬಕವಿ-ಬನಹಟ್ಟಿ ಪಿಕೆಪಿಎಸ್-೨೭, ಇಳಕಲ್ ಪಿಕೆಪಿಎಸ್-೧೭, ಪಟ್ಟಣ ಸಹಕಾರಿ ಮತ್ತು ಬಿನ್‌ಶೇತ್ಕಿ ಸಹಕಾರಿ ಸಂಘಗಳ ಕ್ಷೇತ್ರ-೩೧೩, ನೇಕಾರ ಸಹಕಾರ ಸಂಘಗಳ ಕ್ಷೇತ್ರ-೮೪, ಉಣ್ಣೆ ಉತ್ಪಾದಕರ ನೇಕಾರ ಸಹಕಾರ ಸಂಘಗಳ ಕ್ಷೇತ್ರ-೪೨, ಇತರೇ ಸಹಕಾರ ಸಂಘಗಳು-೨೩೯ ಮತಗಳು.