ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಕೆರೆಯಲ್ಲಿ ಸಂಗ್ರಹಿಸಿಟ್ಟಿದ್ದ ಕಳ್ಳಭಟ್ಟಿ ತಯಾರಿಕೆಗೆ ಬಳಸುವ ಬೆಲ್ಲದ ರಾಸಾಯನಿಕವನ್ನು ಅಮೀನಗಡ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಳ್ಳಭಟ್ಟಿ ತಯಾರಿಕೆಗಾಗಿ ಸ್ಥಳಿಯ ಕೆರೆಯಲ್ಲಿ ಬೆಲ್ಲದ ರಾಸಾಯನಿಕ ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ ನೇತೃತ್ವದಲ್ಲಿ ಬುಧವಾರ ಸಂಜೆ ಪೊಲೀಸ್ ಸಿಬ್ಬಂದಿಯೊಂದಿಗೆ ತಪಾಸನೆ ನಡೆಸಿ ೨೨ ಪ್ಲಾಸ್ಟಿಕ್ ಕೊಡಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಸಿಬ್ಬಂದಿಯೊಂದಿಗೆ ಕೆರೆಗೆ ತೆರಳಿ ನೀರಲ್ಲಿ ಹುಡುಕಾಡಿದಾಗ ೧೫ ಲೀಟರ್ ಸಾಮರ್ಥ್ಯದ ೨೨ ಕೊಡ ಕಂಡು ಬಂದಿವೆ. ೩ ಸಾವಿರ ಮೌಲ್ಯದ ೩೩೦ ಲೀಟರ್ ಬೆಲ್ಲದ ರಾಸಾಯನಿಕ ದೊರೆತಿದೆ. ಕಳ್ಳಭಟ್ಟಿ ಸಾರಾಯಿ ನಿಷೇಧವಿದ್ದರೂ ಅನಧಿಕೃತವಾಗಿ ಸಾರಾಯಿ ತಯಾರಿಯಲ್ಲಿ ತೊಡಗಿರುವ ಆರೋಪಿಗಳು ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿರುವ ಎಸ್‌ಐ ಕಳ್ಳಭಟ್ಟಿಗೆ ಸಂಬಂಸಿದಂತೆ ದೂರು ದಾಖಲಿಸಿಕೊಂಡಿದ್ದಾರೆ.
ಫೆ.೨೨ರಂದು ಡಿಸಿ ಅಧ್ಯಕ್ಷತೆಯಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಬಕಾರಿ ಉಪಆಯುಕ್ತ ರಮೇಶಕುಮಾರ.ಎಚ್., ಅವರು ಅಮೀನಗಡದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹೆಚ್ಚಾಗಿದ್ದು ಕೆರೆ ನೀರಲ್ಲಿ ಅಕ್ರಮವಾಗಿ ಬೆಲ್ಲದ ಕೊಳೆ ಸಂಗ್ರಹ ನಡೆಯುತ್ತಿದೆ ಎಂಬುದನ್ನು ಪ್ರಸ್ತಾಪಿಸಿದ್ದನ್ನು ಇಲ್ಲಿ ಗಮನಿಸಬಹುದು.