ಬೆಂಗಳೂರು: 2006ರ ನಂತರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇರ್ಪಡೆಯಾಗಿರುವ ಅಂದಾಜು 13 ಸಾವಿರ ನೌಕರರನ್ನು ಹಳೇ ಪಿಂಚಣಿ ವ್ಯಾಪ್ತಿಗೆ ಸೇರಿಸಿ ರಾಜ್ಯ ಸರ್ಕಾರ ಜ. 25ರಂದು ಆದೇಶ ಹೊರಡಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಸರ್ಕಾರದ ಆದೇಶವನ್ನು ಟೀಕಿಸಿದ್ದು, ಅಲ್ಲದೆ, ಈಗಾಗಲೇ ಕೇಂದ್ರ ಸರ್ಕಾರ ತನ್ನಲ್ಲಿ ಈ ಆದೇಶ ಜಾರಿಗೊಳಿಸಿದ್ದು, ಅದರಿಂದ ಒತ್ತಡಕ್ಕೆ ಸಿಲುಕಿರುವ ರಾಜ್ಯ ಸರ್ಕಾರ, ತರಾತುರಿಯಲ್ಲಿ ಆದೇಶ ಹೊರಡಿಸಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ, ಜನರಿಗೆ ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ ಮುಂದುವರಿಸಿದ್ದು, ಹಳೇ ಪಿಂಚಣಿ ಕುರಿತಂತೆ ಗೌರವಾನ್ವಿತ ಸುಪ್ರಿಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಈಗಾಗಲೇ ಪಾಲಿಸಿದೆ. ಈ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ (OPS) ಬಗ್ಗೆ ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರಕಾರಿ ನೌಕರರ ಮೇಲೆ ಪ್ರೀತಿ ಉಕ್ಕಿ ಅಲ್ಲ’’ ಎಂದು ಹೇಳಿದರು.
ಅಲ್ಲದೆ, “ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರಕಾರವು 2006ರ ಏ. 1ಕ್ಕೂ ಮೊದಲು ಅಧಿಸೂಚನೆಯಾಗಿ ನೇಮಕಗೊಂಡವರಿಗೆ OPS ಕೊಟ್ಟಿದ್ದು, ಎಲ್ಲಾ ರಾಜ್ಯಗಳು ಈ ಆದೇಶ ಜಾರಿ ಮಾಡುತ್ತಿವೆ. ಕರ್ನಾಟಕದಲ್ಲೂ ಆಗಿದೆ ಅಷ್ಟೇ. ಇದರಲ್ಲಿ ಸರಕಾರದ ಘನಂದಾರಿ ಸಾಧನೆ ಏನೂ ಇಲ್ಲ’’ ಎಂದು ವಿವರಿಸಿದರು.