ಚರ್ಚೆಗೆ ಗ್ರಾಸವಾದ ಮುಖ್ಯಾಧಿಕಾರಿ ನಡೆ
ನಿಮ್ಮ ಸುದ್ದಿ ಬಾಗಲಕೋಟೆ
ಸ್ಥಳೀಯ ಸಂಸ್ಥೆಯೂ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ತಿಂಗಳಿಗೊಮ್ಮೆ ನಡೆಯುವ ಸಾಮಾನ್ಯ ಸಭೆಗೆ ಮಾಧ್ಯಮದವರನ್ನು ಕರೆಯುವುದು ವಾಡಿಕೆ. ಆದರೆ ಜಿಲ್ಲೆಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯೊಬ್ಬರ ನಡೆ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಸಾಮಾನ್ಯಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನವಿಲ್ಲ ಎಂಬ ಅಲ್ಲಿನ ಮುಖ್ಯಾಧಿಕಾರಿ ನಡೆ ಸದ್ಯ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸದಸ್ಯರು ಹಾಗೂ ಮುಖ್ಯಾಧಿಕಾರಿ ಮಧ್ಯೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಯೂ ನಡೆದಿದೆ ಎನ್ನಲಾಗಿದೆ.
೨೦೧೬ರಲ್ಲಿ ಪಪಂ ರಚನೆ ನಂತರ ಜತೆಗೆ ಈ ಹಿಂದೆ ಗ್ರಾಮ ಪಂಚಾಯಿತಿ ರಚನೆ ಇದ್ದಾಗಲೂ ಇಂತಹ ಯಾವುದೇ ಪ್ರಕ್ರಿಯೆಗೆ ಬ್ರೇಕ್ ಬಿದ್ದಿರಲಿಲ್ಲ. ಪ್ರತಿ ಸಾಮಾನ್ಯ ಸಭೆಗೂ ಮಾಧ್ಯಮದವರನ್ನು ಆಹ್ವಾನಿಸಲಾಗುತ್ತಿತ್ತು. ಆದರೆ ಕಳೆದ ೬ ತಿಂಗಳ ಹಿಂದೆ ಆಗಮಿಸಿದ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಇತ್ತೀಚೆಗೆ ನಡೆದ ವಾರ್ಷಿಕ ಬಜೆಟ್ ಸಭೆ ಹಾಗೂ ಮಾರ್ಚ್ ೨೬ರಂದು ನಡೆದ ಸಾಮಾನ್ಯಸಭೆಗೆ ಮಾಧ್ಯಮದವರನ್ನು ಆಹ್ವಾನಿಸದಿರುವುದು ಆಡಳಿತ ಹಾಗೂ ವಿರೋಧ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದೆ.
ಮಾರ್ಚ್ ೨೬ರಂದು ನಡೆಯುವ ಸಾಮಾನ್ಯಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸುವಂತೆ ಪಪಂ ಅಧ್ಯಕ್ಷ ಸಂಗಪ್ಪ ತಳವಾರ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದರು. ಆದರೆ ಸಭೆಗೆ ಮಾಧ್ಯಮದವರು ಬಾರದೆ ಇರುವುದನ್ನು ಗಮನಿಸಿದ ಸದಸ್ಯರು ಹೀಗೆಕೆ? ಅಧ್ಯಕ್ಷರೂ ಸೂಚಿಸಿದ್ದರೂ ಅವರ ಸೂಚನೆಯನ್ನು ಧಿಕ್ಕರಿಸುವುದರ ಹಿನ್ನೆಲೆ ಏನು ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಅವರು ಸಭೆಗೆ ಮಾಧ್ಯದವರನ್ನು ಕರೆಯಬೇಕೆಂದು ನಿಯಮವಿಲ್ಲ ಎಂದು ತಿಳಿಸಿದ್ದಾರೆಂದು ತಿಳಿದಿದೆ. ಈ ಹಿಂದೆ ಇರದ ನಿಯಮ ಈಗ ಯಾಕೆ ಎಂದು ಪ್ರಶ್ನಿಸಿದ ಸದಸ್ಯರು ಸಭೆಯ ಅಜೆಂಡಾದಲ್ಲಿ ಮುಖ್ಯಾಧಿಕಾರಿ ಕಾರ್ಯ ವೈಖರಿಯ ಕುರಿತು ಚರ್ಚೆ ಇದೆಯಲ್ಲಾ ಅದಕ್ಕೆ ಕರೆದಿಲ್ಲವೆ ಎಂದು ಮರು ಪ್ರಶ್ನಿಸಿದ್ದಾರೆ. ಆದರೆ ಇಲಾಖೆ ನಿಯಮದಲ್ಲಿದೆ ಎಂದು ತಿಳಿಸಿದ ಮುಖ್ಯಾಧಿಕಾರಿ ಸಂಜೆವರೆಗೆ ಮಾಧ್ಯಮದವರನ್ನು ಕರೆಯದಿರುವ ಕುರಿತು ಯಾವುದೇ ಆದೇಶ ತೋರಿಸದಿರುವುದು ಮುಖ್ಯಾಧಿಕಾರಿಗೆ ನಡೆ ಸಂಶಯಕ್ಕೆ ಕಾರಣವಾಗಿದೆ.
ಸಭೆಗೆ ಮಾಧ್ಯಮದವರನ್ನು ಕರೆಯದಿರುವು ಕುರಿತು ಜಿಲ್ಲೆಯ ನಗರಸಭೆ ಆಯುಕ್ತರೊಬ್ಬರನ್ನು ಮಾಧ್ಯಮದವರು ಸಂಪರ್ಕಿಸಿ ಕೇಳಿದಾಗ ಸಭೆಯಲ್ಲಿ ಚರ್ಚಿತವಾದ ವಿಷಯಗಳು ಜನರಿಗೆ ತಿಳಿಯುವುದಾದರೂ ಹೇಗೆ? ಮಾಧ್ಯಮದರನ್ನು ಹೊರಗಿಟ್ಟು ಸಭೆ ಮಾಡಿದರೆ ಸರಿಯಲ್ಲ. ಸಾಮಾನ್ಯಸಭೆ ಎಲ್ಲರಿಗೂ ಮುಕ್ತವಾಗಿರುತ್ತವೆ. ಅಲ್ಲಿನ ಅಜೆಂಡಾಗಳು ತೆರಿದಿಟ್ಟು ಪುಸ್ತಕದಂತೆ. ಚರ್ಚೆ ಒಳಗೊಳಗೆ ನಡೆದ ಸಭೆಯ ಅವಶ್ಯಕತೆಯೇ ಇರುವುದಿಲ್ಲ ಎಂದು ತಿಳಿಸಿದರು.