ಮಾಜಿ ಸಿಎಂ ಸಿದ್ದರಾಮಯ್ಯ ಎದುರಲ್ಲೇ ಹೈಡ್ರಾಮಾ
ನಿಮ್ಮ ಸುದ್ದಿ ಬಾಗಲಕೋಟೆ
ನೂತನವಾಗಿ ಪುರಸಭೆಗೆ ಆಯ್ಕೆಯಾದ ಉಪಾಧ್ಯಕ್ಷೆಯೊಬ್ಬರು ಮುನಿಸಿಕೊಂಡು ಸಭೆಯಿಂದ ಹೊರನಡೆದ ಘಟನೆ ಜಿಲ್ಲೆಯ ನೂತನ ತಾಲೂಕು ಗುಳೇದಗುಡ್ಡ ಪುರಸಭೆಯಲ್ಲಿ ಸೋಮವಾರ ನಡೆದಿದೆ.
ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಎದುರಲ್ಲೇ ಈ ಘಟನೆ ನಡೆದಿದ್ದು ಮುಖಂಡರಿಗೆ ಈ ಘಟನೆ ಇರುಸು ಮುರುಸು ತಂದೊಡ್ಡಿತು.
ಗುಳೇದಗುಡ್ಡ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ಶಿಲ್ಪಾ ಹಳ್ಳಿ, ಉಪಾಧ್ಯಕ್ಷೆಯಾಗಿ ಷರೀಫಾ ಮಂಗಳೂರು ಆಯ್ಕೆ ಆದರು. ಆದರೆ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಭ್ಯರ್ಥಿಗಳಲ್ಲಿ ಅಸಮಾಧಾನ ಸ್ಪೋಟವಾಯಿತು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಷರೀಫಾ ಮಂಗಳೂರು ಮುನಿಸಿಕೊಂಡು ಆಯ್ಕೆ ಘೋಷಿಸುತ್ತಲೇ ಸಭೆಯಿಂದ ಹೊರನಡೆದರು. ಈ ಘಟನೆಯಿಂದ ಕಾಂಗ್ರೆಸ್ ನಾಯಕರು ಉಪಾಧ್ಯಕ್ಷೆಯನ್ನು ಮತ್ತೆ ಸಭೆಗೆ ಕರೆತರಲು ಹರಸಾಹಸ ಪಡಬೇಕಾಯಿತು.
ಬಳಿಕ ಉಪಾಧ್ಯಕ್ಷೆಯನ್ನು ಕರೆಸಿ ಸಮಾಧಾನ ಪಡಿಸಿದ ಸಿದ್ದರಾಮಯ್ಯ ಇನ್ನೂ ೫ ವರ್ಷ ಸಮಯವಿದೆ. ಅಧ್ಯಕ್ಷೆಯನ್ನಾಗಿ ಮಾಡೋಣ. ಚೆನ್ನಾಗಿ ಕೆಲಸ ಮಾಡಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಸಮಾಧಾನಿಸಿದರು.