ದಾವಣಗೆರೆ: ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬರನ್ನು ಮಹಾರಾಷ್ಟ್ರಕ್ಕೆ ಕರೆದೊಯ್ದು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಅಮಾನವೀಯ ಕೃತ್ಯ ನಡೆದಿದೆ. ಈ ಕುರಿತು ಮಹಿಳೆಯ ಸಹೋದರ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಕ್ಯಾಸಿನ ಕೆರೆ ಗ್ರಾಮದ ಮಂಜುನಾಥ್ ಎಂಬುವರ ಜತೆ 5 ವರ್ಷಗಳ ಹಿಂದೆ ಗಂಗಮ್ಮ ಅವರ ವಿವಾಹವಾಗಿದ್ದು, ವರ್ಷದ ಹಿಂದೆ ಪತಿ ಮೃತ ಪಟ್ಟಿದ್ದರು. ಬಳಿಕ ಪುತ್ರನ ಜತೆ ತವರು ಮನೆಯಲ್ಲೇ ವಾಸವಿದ್ದ ಗಂಗಮ್ಮ, ಮದುವೆ, ಮತ್ತಿತರ ಸಮಾರಂಭಗಳಲ್ಲಿ ಅಡುಗೆ ಮಾಡುವ ತಂಡದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಮೇ 12ರಂದು ಭದ್ರಾವತಿಯ ರೋಜಿ ಲೀನಾ ಜತೆ ಭದ್ರಾವತಿಗೆ ಕೆಲಸಕ್ಕೆ ಹೋಗಿ, ಅದೇ ರಾತ್ರಿ ಮನೆಗೆ ಮರಳಿದ್ದರು.
ಹೊನ್ನಾಳಿ ತಾಲೂಕು ಕ್ಯಾಸಿನಕೆರೆ ಗ್ರಾಮದ ಗಂಗಮ್ಮ (30) ಸಂತ್ರಸ್ತೆಯಾಗಿದ್ದು, ಭದ್ರಾವತಿ ಪಟ್ಟಣದ ನಿವಾಸಿಗಳಾದ ರೋಜಿ ಲೀನಾ, ಮಲ್ಲಿಕಾರ್ಜುನ ಮತ್ತು ಲೋಕೇಶ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೇ 13 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆ ಬಳಿ ಬಂದ ಆರೋಪಿಗಳಾದ ರೋಜಿ ಲೀನಾ, ಮಲ್ಲಿಕಾರ್ಜುನ ಹಾಗೂ ಲೋಕೇಶ, ಗಂಗಮ್ಮ ಅವರನ್ನು ಕರೆದೊಯ್ದಿದ್ದರು. ಮೂರು ದಿನ ಬಳಿಕ ರೂಪಾ ಎಂಬುವವರ ಮೊಬೈಲ್‌ನಿಂದ, ಸಹೋದರಿ ಶಾರದಾಗೆ ಕರೆ ಮಾಡಿದ ಗಂಗಮ್ಮ, ‘ಮಹಾರಾಷ್ಟ್ರದಲ್ಲಿ ಒಳ್ಳೆ ಕೆಲಸ ಇದೆ ಎಂದು ಹೇಳಿದ ರೋಜಿ ಲೀನಾ, ಮಲ್ಲಿಕಾರ್ಜುನ ಮತ್ತು ಲೋಕೇಶ ನನ್ನನ್ನು ಮಹಾರಾಷ್ಟ್ರಕ್ಕೆ ಕರೆ ತಂದು, ಸೊಲ್ಲಾಪುರದ ಒಂದು ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.
ಈಗ ಈ ಮನೆಯವರು, ಒಂದು ಲಕ್ಷ ರೂ. ಗೆ ನಿನ್ನನ್ನು ಮಾರಾಟ ಮಾಡಿದ್ದಾರೆ. ನೀನು ಇಲ್ಲಿಂದ ಹೋಗಬೇಕೆಂದರೆ ಒಂದು ಲಕ್ಷ ರೂ. ಕೊಡು ಎನ್ನುತ್ತಿದ್ದಾರೆ, ನನಗೆ ಹೆದರಿಕೆ ಆಗುತ್ತಿದೆ’ ಎಂದು ಹೇಳಿದ್ದಾರೆಂದು ಗಂಗಮ್ಮ ಅವರ ಸಹೋದರ ದೂರಿನಲ್ಲಿ ವಿವರಿಸಿದ್ದಾರೆ.