ದೂರು ಹಿಂಪಡೆಯಲು ದೂರುದಾರರ ನಿರ್ಧಾರ
ನಿಮ್ಮ ಸುದ್ದಿ ಬೆಂಗಳೂರು
ರಮೇಶ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಭಾನುವಾರ ಬಿಗ್ ಟ್ವಿಟ್ಸ್ ದೊರೆತಿದ್ದು ದೂರುದಾರರೇ ತಮ್ಮ ದೂರನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ರಾಸಲೀಲೆ ಪ್ರಕರಣದ ಕುರಿತು ದೂರು ನೀಡಿ ಭಾರಿ ಸುದ್ದಿಗೆ ಒಳಗಾಗಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ ಕಲಹಳ್ಳಿ ಸದ್ಯ ತಾವು ರಮೇಶ ಜಾರಕಿಹೊಳಿ ಅವರ ವಿರುದ್ಧ ನೀಡಿದ ದೂರನ್ನು ವಾಪಸ್ ಪಡೆಯಲು ನಿರ್ಧರಿಸಿದ್ದು ಯೂ ಟರ್ನ್ ಹೊಡೆದಂತಾಗಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ ಜಾರಕಿಹೊಳಿ ಅವರ ವಿರುದ್ಧ ನೀಡಿದ ದೂರನ್ನು ತಮ್ಮ ವಕೀಲರ ಮೂಲಕ ವಾಪಸ್ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೆ ತಮ್ಮ ವಕೀಲರ ಮೂಲಕ ಪೊಲೀಸ್ ಠಾಣೆಗೆ ಪತ್ರ ಕಳುಹಿಸಿದ್ದು ವಕೀಲರು ಅದನ್ನು ಸ್ಪಷ್ಟಪಡಿಸಿದ್ದಾರೆ.
ಯುವತಿಯೊಬ್ಬಳಿಗೆ ಕೆಲಸ ಕೊಡಿಸುವುದಾಗಿ ಹೇಳಿದ್ದ ರಮೇಶ ಜಾರಕಿಹೊಳಿ ಅವರು ಯುವತಿಗೆ ಲೈಂಗಿಕ ಕಿರುಕುಳ ನೀಡಿ ಶೋಷಣೆ ಮಾಡಿದ್ದಾರೆ ಎಂದು ವಿಡಿಯೋ ಸಹಿತ ಮಾ.೨ರಂದು ದಿನೇಶ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಯುವತಿಯ ಸಂಬಂಧಿಕರ ಮಾಹಿತಿ ಮೇರೆಗೆ ದೂರು ನೀಡಿದ್ದು, ಇದೀಗ ವಕೀಲರ ಸಲಹೆ ಮೇರೆಗೆ ದೂರು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ಈ ಪ್ರಕರಣದಲ್ಲಿ ೫ ಕೋಟಿ ವ್ಯವಹಾರವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಇದರಿಂದ ಮನಸ್ಸಿಗೆ ನೋವಾಗಿದೆ ಎಂದು ತಿಳಿಸಿರುವ ದಿನೇಶ ಕಲಹಳ್ಳಿ ದೂರು ವಾಪಸ್ ಪಡೆಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.