ಸುಜಾತಾ ತತ್ರಾಣಿ ಬಿಜೆಪಿ ಸೇರ್ಪಡೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಪಕ್ಷೇತರ ಸದಸ್ಯೆ ಸುಜಾತಾ ತತ್ರಾಣಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಹಲವು ವರ್ಷದಿಂದ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾದ ಅವರು 2016ರಲ್ಲಿ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆ ಆಗಿದ್ದಲ್ಲದೆ ಪಟ್ಟಣ ಪಂಚಾಯಿತಿಯ ಪ್ರಥಮ ಅಧ್ಯಕ್ಷೆಯಾದ ದಾಖಲೆ ಇವರ ಹೆಸರಲ್ಲಿತ್ತು.
ಆದರೆ 2021ರ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧೆ ಬಯಸಿದಾಗ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲು ನಿರಾಕರಿಸಿತು. ಇದನ್ನೇ ಚಾಲೇಂಜ್ ಆಗಿ ತೆಗೆದುಕೊಂಡ ಸುಜಾತಾ ತತ್ರಾಣಿ ವಾರ್ಡ್ 12ಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಬೀಗಿದ್ದರು.
ಇದೀಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯೊಂದಿಗೆ ಅಮೀನಗಡ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ ಎಂಬ ಮಾತು ಕೇಳಿ ಬಂದಿದೆ.
ಚುನಾವಣೆ ನಡೆದು ಒಂದೂವರೆ ವರ್ಷ ಗತಿಸುತ್ತಿದ್ದರೂ ಇಂದಿಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಘೋಷಣೆಯಾಗಿಲ್ಲ. ಮುಂದಿನ ಹಂತದಲ್ಲಿ ಯಾವ ಮೀಸಲಾತಿ ಬರಬಹುದು, ಯಾರು ಅಧ್ಯಕ್ಷರಾಗಬಹುದು ಎಂಬುದು ಮತ್ತಷ್ಟು ಕುತೂಹಲ ಮೂಡಿಸಿದೆ. ನಿನ್ನೆಯಷ್ಟೆ ಪಪಂ ಪಕ್ಷೇತರ ಸದಸ್ಯ ಸಂಜಯ ಐಹೊಳ್ಳಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ಬಿಜೆಪಿ ಸೇರ್ಪಡೆ ಕುರಿತಂತೆ ಕಳೆದೊಂದು ತಿಂಗಳಿನಿಂದ ನಡೆದ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಆರಂಭದಲ್ಲಿ ಸುಜಾತಾ ತತ್ರಾಣಿ ಅವರ ಸೇರ್ಪಡೆಗೆ ಪರ, ವಿರೋಧ ಅಭಿಪ್ರಾಯ ಕೇಳಿ ಬಂದಿತ್ತು. ಕೊನೆಗೂ ಬಿಜೆಪಿ ಸೇರ್ಪಡೆ ಯೋಗ ಕೂಡಿ ಬಂದಿದ್ದು ಇದೀಗ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ವೀರಣ್ಣ ಚರಂತಿಮಠ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಾ.ಎಂ.ಎಸ್.ದಡ್ಡೇನವರ, ರಾಜು ರೇವಣಕರ, ಸುರೇಶ ಕೊಣ್ಣೂರ, ರಾಜು ಮುದೇನೂರ,ಪಪಂ ಸದಸ್ಯರಾದ ವಿಜಯಕುಮಾರ ಕನ್ನೂರ, ಬಾಬು ಛಬ್ಬಿ, ಗುರುನಾಥ ಚಳ್ಳಮರದ, ಶಂಕ್ರಯ್ಯ ರೇವಣಕಿಮಠ, ಇತರರು ಇದ್ದರು.