ಕಾರಾಗೃಹದ ಬಂಧಿಗಳಿಗೆ ಸಾಕ್ಷರತಾ ಕಾರ್ಯಕ್ರಮ
ನಿಮ್ಮ ಸುದ್ದಿ ಬಾಗಲಕೋಟೆ
ಜೀವನದಲ್ಲಿ ತಿಳಿದು ತಿಳಿಯದೇ ತಪ್ಪು ಮಾಡಿ ಶಿಕ್ಷೆಗೆ ಒಳಗಾಗದವರು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ಬದುಕು ಸಾಗಿಸಲು ಸಾಕ್ಷರತೆ ಅವಶ್ಯವಾಗಿದೆ ಎಂದು ಜಿಪಂ ಸಿಇಒ ಟಿ.ಭೂಬಾಲನ್ ಹೇಳಿದರು.
ನವನಗರದ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಲೋಕ ಶಿಕ್ಷಣ ನಿರ್ದೇಶನಾಲಯ, ಜಿಪಂ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸಹಯೋಗದಲ್ಲಿ ಅನಕ್ಷರಸ್ಥ ಕೈದಿಗಳಿಗೆ ಹಮ್ಮಿಕೊಂಡ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ ತಿಳಿವಳಿಕೆ, ಜ್ಞಾನ ಅತಿ ಮುಖ್ಯವಾಗಿದೆ. ಶಿಕ್ಷಣ ಪಡೆಯದ ಕಾರಣ ಅಪರಾಧ ತಿಳಿದೋ ತಿಳಿಯದೆಯೋ ಮಾಡಿರುತ್ತಿರಿ. ಈಗ ಶಿಕ್ಷಣ ಪಡೆಯುವ ಅವಕಾಶ ನಿಮ್ಮೆಲ್ಲರಿಗೂ ಒದಗಿ ಬಂದಿದ್ದು, ೨ ತಿಂಗಳ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಜ್ಞಾನ ನೀಡಲು ಲೋಕ ಶಿಕ್ಷಣ ಸಮಿತಿ ಮುಂದಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಪಾಲಕ ಎಸ್.ವೈ.ಕಬ್ಬೂರ, ಸ್ವಚ್ಛತೆ ಪಾಲಿಸುವುದರ ಜೊತೆಗೆ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಬೇಕು. ಎರಡು ತಿಂಗಳ ಕಾಲ ಉತ್ತಮ ಶಿಕ್ಷಣ ಪಡೆದು ಬಿಡುಗಡೆಯಾದ ನಂತರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು. ಕಾರ್ಯಾಗೃಹ ಇಲಾಖೆ ಈಗ ಕಾರಾಗೃಹ ಸುಧಾರಣಾ ಸೇವೆ ಎಂದಾಗಿದ್ದು, ನಿಮ್ಮ ಸುಧಾರಣೆಯೇ ನಮ್ಮ ದ್ಯೇಯವಾಗಿದೆ. ನಿಮ್ಮ ಮನ ಪರಿವರ್ತಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎನ್.ಬಿ.ಗೊರವರ್, ಕಾರಾಗೃಹದಲ್ಲಿರುವ ಕೈದಿಗಳಲ್ಲಿ ೬೫ ಜನ ಅನಕ್ಷರಸ್ಥರಿದ್ದು, ಅವರನ್ನು ಸಾಕ್ಷರರನ್ನಾಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಾಠದೊಂದಿಗೆ ಸಾಮಾಜಿಕ ನೀತಿ, ಕಲಿಕೆ, ಲೆಕ್ಕಾಚಾರ ಹಾಗೂ ಸಂಸ್ಕಾರ ಕಲಿಸಿ ಕೊಡಲಾಗುತ್ತದೆ. ಆರೋಗ್ಯ ಶಿಕ್ಷಣ, ಸ್ವಚ್ಛತೆಯ ಜೊತೆಗೆ ನೀತಿ ಪಾಠಗಳನ್ನು ಹೇಳಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಎರಡು ತಿಂಗಳ ಕಾಲ ಪಾಠ-ಬೋಧನೆ ಮಾಡಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸಾದ ಕೈದಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಪ್ರಮಾಣ ಪತ್ರ ಪಡೆದವರು ನೇರವಾಗಿ ೭ನೇ ತರಗತಿ ಬಾಹ್ಯ ವಿದ್ಯಾರ್ಥಿಯಾಗುವುದರ ಮೂಲಕ ಸೌಲಭ್ಯ ಪಡೆದುಕೊಳ್ಳಬಹುದು. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಹ ಬಾಹ್ಯ ವಿದ್ಯಾರ್ಥಿಯಾಗಿ ಪಾಸಾದರೆ ಉತ್ತಮ ಉದ್ಯೋಗ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾಳಿನ ಬೆಳಕು ಪುಸ್ತಕವನ್ನು ಅನಕ್ಷರಸ್ಥ ಕೈದಿಗಳಿಗೆ ವಿತರಿಸಲಾಯಿತು. ಜಿಲ್ಲಾ ಕಾರಾಗೃಹದ ಪಾಲಕ ಕುಂಬಾರ ಇತರರು ಇದ್ದರು. ನಂತರ ಜಿಲ್ಲಾ ಕಾರಾಗೃಹವನ್ನು ಜಿ.ಪಂ ಸಿಇಓ ಟಿ.ಭೂಬಾಲನ್ ವೀಕ್ಷಿಸಿದರು.