ಮಂಗಳೂರು: ನಿಗೂಢ ಕೆಲಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡವೊಂದು ಸೆರೆಯಾಗಿದ್ದು ಬೆಳಕಿಗೆ ಬಂದಿದೆ.
ಅನುಮಾನಾಸ್ಪ ನಡೆ ಹಿನ್ನೆಲೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಗ್ಯಾಂಗ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಸಿಮ್ಗಳ ಸಾಗಾಟ ಬಯಲಿಗೆ ಬಂದಿದ್ದು, ಐವರಿದ್ದ ಯುವಕ ತಂಡ 42 ಅಕ್ರಮ ಸಿಮ್ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಫೆಬ್ರವರಿ 1 ರಂದು ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್ ಜಪ್ತಿ ಮಾಡಲಾಗಿದ್ದು, ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22) ಮೊಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಯಾಗಿದ್ದು, ಪ್ರಕರಣದಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೂ ಸಿಲುಕಿದ್ದು, ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಆರೋಪಿಗಳು ಸಾಗಿಸುತ್ತಿದ್ದ ನಿಕಲಿ ಸಿಮ್ಗಳು ಬೆಂಗಳೂರಿನಲ್ಲಿರುವ ಆಗಂತುಕರ ಕೈ ಸೇರುತ್ತಿತ್ತಾ ಎನ್ನುವ ಶಂಕೆ ವ್ಯಕ್ತವಾಗಿದ್ದು, ಅಕ್ಬರ್ ಆಲಿ ಮೊದಲಿನಿಂದಲೂ ದುಬೈನಲ್ಲಿ ಇದ್ದುಕೊಂಡೇ ಸಿಮ್ ಕಾರ್ಡ್ ಸಂಗ್ರಹಿಸುತ್ತಿದ್ದನು. ತನ್ನ ಸ್ನೇಹಿತ ಮೊಹಮ್ಮದ್ ಮುಸ್ತಫಾನ ಮೂಲಕ ಸಿಮ್ಗಳನ್ನು ಕಲೆಕ್ಟ್ ಮಾಡುತ್ತಿದ್ದನು.
ಮೊಹಮ್ಮದ್ ಮುಸ್ತಫಾ ತನ್ನ ಸ್ನೇಹಿತರಾಗಿರುವ ರಮೀಝ್ ಮತ್ತು ಮಹಮ್ಮದ್ ಸಾಧಿಕ್ಗೆ ಸಿಮ್ಗಳ ವ್ಯವಸ್ಥೆಗೆ ಸೂಚನೆ ನೀಡುತ್ತಿದ್ದನು. ಎಷ್ಟು ಸಿಮ್ ಕಾರ್ಡ್ ಬೇಕು ಅಷ್ಟುನ್ನು ತಮ್ಮ ಅತ್ಮಿಯರಿಂದ ಕಮಿಷನ್ ಕೊಡಿಸಿ ಕಲೆಕ್ಟ್ ಮಾಡಿ ಮುಸ್ತಫಾನಿಗೆ ನೀಡುತ್ತಿದ್ದು, ಅಕ್ಬರ್ ಅಲಿ ಹೇಳಿದಂತೆ ಸಿಮ್ ಕಾರ್ಡ್ ಮಹಮ್ಮದ್ ಮುಸ್ತಫಾ ಪಡೆದುಕೊಂಡು ಬೆಂಗಳೂರು ವ್ಯಕ್ತಿಗಳಿಗೆ ಖಾಸಗಿ ಬಸ್ ಮೂಲಕ ಕಳುಹಿಸುವ ಕೆಲಸ ಮಾಡುತ್ತಿದ್ದ ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ಮಾಹಿತಿ ಬೆಳಕಿಗೆ ಬಂದಿದೆ.