ಹುಬ್ಬಳ್ಳಿ: ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ದಿನಗಳಿಂದ ಈ ವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿಷಯಾಧಾರಿತ ಚರ್ಚೆಗೆ ನಾವು ಸಿದ್ಧರಿದ್ದು, ಬೇಕಾದರೆ ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳ ಅವಧಿಯಲ್ಲಿ ಸಾಲ ಏಕೆ ಹೆಚ್ಚಾಯಿತು? 1947ರಿಂದ 2014ರ ವರೆಗೆ ಸಾಕಷ್ಟು ಪ್ರಧಾನಿಗಳು ಬಂದು ಹೋಗಿದ್ದಾರೆ. ಆ ಅವಧಿಯಲ್ಲಿ ದೇಶದ ಸಾಲ ಕೇವಲ 55 ಲಕ್ಷ ಕೋಟಿ ಇದ್ದು, 2014ರ ನಂತರದಲ್ಲಿ 165 ಲಕ್ಷ ಕೋಟಿ ಸಾಲವಾಗಿದೆ. ಈ ಬಗ್ಗೆ ಸ್ವತಃ ನಿರ್ಮಲಾ ಸೀತಾರಾಮನ್ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ಶೇ. 211ರಷ್ಟು ಹೆಚ್ಚು ಸಾಲ ಮಾಡಿದೆ. ನಮ್ಮ ಅವಧಿಯಲ್ಲಿ ₹50-60ಗೆ ಡೀಸೆಲ್, ಪೆಟ್ರೋಲ್ ನೀಡಿದ್ದೇವೆ. ಜನರಿಕ್ ಮೆಡಿಸನ್ ದರ ಹೆಚ್ಚಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಬಿಜೆಪಿ ನಾಯಕರು ಚರ್ಚೆಗೆ ಸಿದ್ಧರಿದ್ದಾರಾ ಎಂದು ಸವಾಲು ಹಾಕಿದರು.