ಎರಡು ದಿನಗಳಲ್ಲಿ ಸೂಕ್ತ ನಿರ್ಣಯ : ಸಿ.ಸಿ.ಪಾಟೀಲ
ನಿಮ್ಮ ಸುದ್ದಿ ಬಾಗಲಕೋಟೆ
ಕಬ್ಬು ದರ ನಿಗದಿ ಕುರಿತಂತೆ ಸಕ್ಕರೆ ಕಾರ್ಖಾನೆ ಮತ್ತು ರೈತರ ನಡುವೆ ಉಂಟಾದ ಸಮಸ್ಯೆಗೆ ಇನ್ನೆರಡು ದಿನಗಳಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಬ್ಬು ದರ ನಿಗದಿ ಕುರಿತು ಸುದೀರ್ಘವಾಗಿ ಚರ್ಚೆ ಮಾಡಲಾಗಿ ಒಂದು ಹಂತಕ್ಕೆ ಬಂದರೂ ಸಹ ಕೊನೆಯಲ್ಲಿ ಕಾರ್ಖಾನೆ ಮಾಲಿಕರು ಹೆಚ್ಚಿನ ದರ ನೀಡಲು ಒಪ್ಪಲಿಲ್ಲ. ಈ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ತಾಳ್ಮೆಯಿಂದ ಇರಲು ರೈತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇಲ್ಲಿಯ ಘಟನಾವಳಿಯ ಬಗ್ಗೆ ಮಾಹಿತಿ ನೀಡಿ ರೈತರ ಪರವಾಗಿ ನಿರ್ಣಯ ತೆಗೆದುಕೊಳ್ಳಲಾಗುವುದೆಂದು ಸಚಿವರು ತಿಳಿಸಿದರು.
ಈಗಾಗಲೇ ರೈತರ ಸಹಕಾರಿ ಸಕ್ಕರೆ (ರನ್ನ) ಕಾರ್ಖಾನೆಯವರು ಎಚ್.ಎನ್.ಟಿ ಕಡಿತಗೊಳಿಸಿ ಪ್ರತಿ ಟನ್‍ಗೆ 2900 ರೂ. ಕೊಡುವುದಾಗಿ ಘೋಷಿಸಿದ್ದಾರೆ. ಇದೇ ದರವನ್ನು ಉಳಿದ ಎಲ್ಲ ಕಾರ್ಖಾನೆಯವರು ನೀಡುವಂತೆ ರೈತರ ಬೇಡಿಕೆ ಇತ್ತು. ಕಾರ್ಖಾನೆ ಮಾಲಿಕರು ತಾವುಗಳು ಘೋಷಿಸಿದ ದರಕ್ಕಿಂತ ಹೆಚ್ಚಿಗೆ ದರ ನೀಡಲು ಒಪ್ಪಲಿಲ್ಲ. ಆದರೂ ಸಹ ಕಾರ್ಖಾನೆಗಳ ಜೊತೆ ಇನ್ನೊಂದು ಸುತ್ತಿನ ಮಾತುಕತೆ ಮಾಡಿ ರೈತರಗೆ ಹಚ್ಚಿನ ದರ ಕೊಡಿಸುವುದಾಗಿ ತಿಳಿಸಿದರು.
ನಾನು, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಸೇರಿ ಮುಖ್ಯಮಂತ್ರಿಗಳ ಚರ್ಚೆ ಮಾಡಿ ಎರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸಕ್ಕರೆ ಸಚಿವ ಶಂಕರ ಪಾಟೀಲ ಮಾತನಾಡಿ ರಾಜ್ಯದ ಮಂಡ್ಯ, ಮೈಸೂರು ಹಿಡಿದು ಬೀದರ, ಬೆಳಗಾವಿ ಕಾರವಾರದ ಹಾಗೂ ಎಲ್ಲ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಮತ್ತು ಕಾರ್ಖಾನೆಗಳ ಮದ್ಯ ಉಂಟಾದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಬಾಗಲಕೋಟೆಗೆ ಆಗಮಿಸಿ ಸಭೆ ನಡೆಸಲಾಗಿದೆ. ಕಬ್ಬು ಬೆಳೆದ ರೈತರ ಸಮಸ್ಯೆಗೆ ಸ್ಪಂಧಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದರು.
ಎಫ್‍ಆರ್‍ಪಿ ದರ ನಿಗದಿ ಮಾಡಿಸಿ, ಇವತ್ತು ಈಡೀ ಭಾರತದಲ್ಲಿ 19634.88 ಕೋಟಿ ರೂ.ಗಳನ್ನು ಎಲ್ಲ ರೈತರಿಗೆ ಕೊಡಿಸುವ ಕೆಲಸ ಮಾಡಲಾಗಿದೆ. ಆದರೆ ಬಾಗಲಕೋಟೆಯಲ್ಲಿ ಎಫ್.ಆರ್.ಪಿ ದರಕ್ಕಿಂತ ಹೆಚ್ಚಿನ ನೀಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಈ ಕಾರಣದಿಂದ ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಸಲಾಗಿದೆ. ಸರಕಾರ ರೈತರ ಹಿತರಕ್ಷಣೆ ಕಾಪಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ ಹಾಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ರೈತರ ಪರವಾಗಿ ನಿರ್ಣಯ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ರೈತರ ಮತ್ತು ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಸಿ ಎರಡು ಕಡೆಗಳಿಂದ ಅವರ ನಿಲುವುಗಳನ್ನು ಪಡೆಯಲಾಯಿತು. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ ರೈತರು ಮತ್ತು ಕಾರ್ಖಾನೆಗಳು ಒಂದೇ ಕುಟುಂಬ ಇದ್ದಹಾಗೆ, ಕುಟುಂಬದಲ್ಲಿ ಬರುವ ಬಿನ್ನಾಭಿಪ್ರಾಯಗಳನ್ನು ಬಗೆಹರಿಸುಕೊಳ್ಳುವ ಹಾಗೆ ಪರಸ್ಪರ ಮಾತುಕತೆಯ ಮೂಲಕ ಒಂದು ನಿರ್ಣಯಕ್ಕೆ ಬಂದು ಕಾರ್ಖಾನೆ ಪ್ರಾರಂಭಿಸುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ರೈತರ ಬೇಡಿಕೆ ಹಾಗೂ ಕಾರ್ಖಾನೆಗಳು ಘೋಷಿದ ದರಗಳ ಮಾಹಿತಿಯನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ದಿ ನಿಗದಮ ಅಧ್ಯಕ್ಷ ಸಿದ್ದು ಸವದಿ, ಸುಗರ್ ಕೇನ್ ಆಯುಕ್ತ ಶಿವಾನಂದ ಕಲಕೇರಿ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗಣೇಶ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಸಿದ್ದು ಹುಳ್ಳೊಳ್ಳಿ, ಶ್ವೇತಾ ಬೀಡಿಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ ಸೇರಿದಂತೆ ರೈತರ ಮುಖಂಡರು, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಉಪಸ್ಥಿತರಿದ್ದರು.