ಧರ್ಮಾಪುರಿ: ದಲಿತ ಮಹಿಳೆಯರಿಗೆ ತೆಂಗಿನ ಕಾಯಿ ಚಿಪ್ಪಿನಲ್ಲಿ ಚಹಾ ನೀಡುವ ಮೂಲಕ ತಾರತಮ್ಯ ಎಸಗಿದ ಆರೋಪದಲ್ಲಿ ತಮಿಳುನಾಡಿನ ಧರ್ಮಪುರಿಯಲ್ಲಿ ಗೌಂಡರ್ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಶುಕ್ರವಾರ ಬಂಧಿಸಲಾಗಿದೆ.
ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.ಮಾರಪ್ಪನಾಯ್ಕನಪಟ್ಟಿ ನಿವಾಸಿಗಳಾದ ಚಿನ್ನತಾಯಿ (60) ಮತ್ತು ಆಕೆಯ ಸೊಸೆ ಬಿ ಧರಣಿ (32) ಬಂಧಿತರು. ಕಂಬೈನಲ್ಲೂರು ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆಪೊಲಂಪಾಳ್ಯಂ ಮೂಲದ 50 ವರ್ಷದ ದಲಿತ ಮಹಿಳೆ ಜಿ ಸೆಲ್ಲಿ ನೀಡಿದ ದೂರಿನ ಅನ್ವಯ ಅತ್ತೆ ಸೊಸೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಲ್ಲಿ ಅವರು ಅವರು ಪೊಲಂಪಾಳ್ಯಂ ನಿವಾಸಿಗಳಾದ ಆರ್ ಶ್ರೀಪ್ರಿಯಾ (38), ವಿ ವೀರಮ್ಮಾಳ್ (55) ಮತ್ತು ಕೆ ಮಾರಿಯಮ್ಮಾಳ್ (60) ಜತೆ ಚಿನ್ನತಾಯಿ ಕುಟುಂಬದ ಕೃಷಿ ಭೂಮಿಯಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
“ಗುರುವಾರದಂದು ಅವರಿಬ್ಬರೂ ನಮಗೆ ತೆಂಗಿನ ಗೆರಟೆಯಲ್ಲಿ ಟೀ ನೀಡಿದ್ದರು. ಈ ಹಿಂದೆ ಕೂಡ ಇದೇ ರೀತಿ ನಮಗೆ ಚಹಾ ಕೊಟ್ಟಿದ್ದರು” ಎಂದು ಸೆಲ್ಲಿ ಆರೋಪಿಸಿದ್ದಾರೆ.ಶುಕ್ರವಾರ ದೂರು ದಾಖಲಾದ ಕೂಡಲೇ ಅಂದೇ ವಿಚಾರಣೆ ನಡೆಸಿದ್ದೆವು ಎಂದು ಕಂಬೈನಲ್ಲೂರು ಪೊಲೀಸ್ ಇನ್‌ಸ್ಪೆಕ್ಟರ್ ಪಿ ಕಾಳಿಯಪ್ಪನ್ ತಿಳಿಸಿದ್ದಾರೆ. “ದೂರಿನಲ್ಲಿ ಸತ್ಯವಿದೆ ಎಂದು ಕೆಲವು ಸ್ಥಳೀಯರು ಖಚಿತಪಡಿಸಿದ್ದರು.
ಚಿನ್ನತಾಯಿ ಮತ್ತು ಅವರ ಸೊಸೆ ಧರಣಿ ಅವರು, ತಮ್ಮ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ದಲಿತ ಮಹಿಳೆಯರಿಗೆ ತೆಂಗಿನ ಕಾಯಿ ಚಿಪ್ಪುಗಳಲ್ಲಿ ಟೀ ನೀಡಿದ್ದರು” ಚಿನ್ನತಾಯಿ ಮತ್ತು ಧರಣಿ ವಿರುದ್ಧ ಎಸ್‌ಸಿ ಎಸ್‌ಟಿ ಕಾಯ್ದೆ, 2015ರ ಸೆಕ್ಷನ್ 3 (1) (r) ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.