ಬೆಳಗಾವಿ:ಬೆಳಗಾವಿ ಜಿಲ್ಲೆಯಾದ್ಯಂತ ಈ ಬಾರಿ ಕಬ್ಬು ಬೆಳೆಯು ಹುಲುಸಾಗಿ ಬೆಳೆದಿದ್ದರೂ, ಈಗ ಕಬ್ಬಿನ ಮೇಲೆ ತುರಾಯಿ ಕಾಣಿಸಿಕೊಂಡಿರುವುದು ರೈತರಲ್ಲಿ (Farmer) ಹೊಸ ಆತಂಕ ಮೂಡಿಸಿದೆ. ಉತ್ತಮ ಹವಾಮಾನ ಹಾಗೂ ಸಮರ್ಪಕ ನೀರಾವರಿ ಸಿಗುವುದರಿಂದ ಉತ್ತಮ ಇಳುವರಿ ದೊರೆಯಲಿದೆ ಎಂಬ ಭರವಸೆ ಇದು. ತುರಾಯಿ ಬಿದ್ದ ಪರಿಣಾಮ ಕಬ್ಬಿನ ತೂಕ ಮತ್ತು ಸಕ್ಕರೆ (Sugar) ಪ್ರಮಾಣ ಕುಸಿಯುವ ಭೀತಿ ಎದುರಾಗಿದೆ.
ಹೆಚ್ಚುತ್ತಿದೆ ತುರಾಯಿ ಸಮಸ್ಯೆ
ಕೃಷ್ಣಾ, ದೂಧಗಂಗಾ, ವೇದಗಂಗಾ ಹಾಗೂ ಘಟಪ್ರಭಾ ನದಿ ತಟದ ಸಾವಿರಾರು ಎಕರೆ ಪ್ರದೇಶಗಳಲ್ಲಿ ಈ ವರ್ಷ ರೈತರು ಕಬ್ಬು ನಾಟಿ ಮಾಡಿದ್ದರು. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಗೋಕಾಕ, ಮೂಡಲಗಿ, ರಾಯಬಾಗ, ಅಥಣಿ ಮತ್ತು ಕಾಗವಾಡ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಕಬ್ಬು ಕಟಾವು ಆರಂಭವಾಗಿದ್ದರೂ, ತುರಾಯಿ ಸಮಸ್ಯೆ ಹೆಚ್ಚುತ್ತಿರುವುದು ಆರ್ಥಿಕ ಹಿನ್ನಡೆಯ ಸೂಚನೆ ನೀಡುತ್ತಿದೆ.
ಕೆಲಸಕ್ಕೂ ಸಿಗುತ್ತಿಲ್ಲ ಕಾರ್ಮಿಕರು
ಸಾಮಾನ್ಯವಾಗಿ ಮಹಾರಾಷ್ಟ್ರದಿಂದ ಸಾವಿರಾರು ಕಬ್ಬು ಕಟಾವು ಕಾರ್ಮಿಕರು ಜಿಲ್ಲೆಗೆ ಬಂದು ಕೆಲಸ ಮಾಡುತ್ತಿದ್ದರು. ಪ್ರತಿ ಗ್ರಾಮಕ್ಕೂ ನಾಲ್ಕು-ಐದು ತಂಡಗಳು ಸುಲಭವಾಗಿ ಲಭ್ಯವಿದ್ದವು. ಆದರೆ ಈ ಬಾರಿ ಮಹಾರಾಷ್ಟ್ರದಲ್ಲೇ ಕಾರ್ಮಿಕರ ಕೊರತೆಯಿಂದ ಗ್ಯಾಂಗ್‍ಗಳು ಬಾರದಿರುವುದು, ಕಟಾವಣೆ ವಿಳಂಬಗೊಳಿಸಿ ತುರಾಯಿ ಸೋಂಕು ಹೆಚ್ಚುವ ಸ್ಥಿತಿಗೆ ಕಾರಣವಾಗಿದೆ.
ನಷ್ಟದ ಭೀತಿ ವ್ಯಾಪಕ
ಗೊಬ್ಬರ, ಸಾಲ, ನೀರಾವರಿ ಮತ್ತು ಕಾರ್ಮಿಕ ವೆಚ್ಚ ಸೇರಿ ರೈತರು ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಹೂಡಿಕೆ ಮಾಡಿದ್ದಾರೆ. ಈಗ ತುರಾಯಿ ಸಮಸ್ಯೆ ಮತ್ತು ಕಟಾವು ವಿಳಂಬ ಎರಡೂ ಸೇರಿ ರೈತರ ಶ್ರಮ ಹಾಗೂ ಹೂಡಿಕೆಗಳಿಗೆ ಭಾರಿ ಹೊಡೆತ ಬೀರುತ್ತಿವೆ. ಇಳುವರಿ ಕುಸಿತ ಹಾಗೂ ನಷ್ಟದ ಭೀತಿ ವ್ಯಾಪಕವಾಗಿದೆ.ಕಬ್ಬು ಕಾರ್ಖಾನೆಗಳು ತಕ್ಷಣ ಕಟಾವು ತಂಡಗಳನ್ನು ಹೆಚ್ಚಿಸಬೇಕು ಹಾಗೂ ಯಂತ್ರಗಳ ಸಂಖ್ಯೆಯನ್ನು ವೃದ್ಧಿಸಿ ಅಗತ್ಯವಿದ್ದರೆ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ತರಲು ವ್ಯವಸ್ಥೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.