ನಿಮ್ಮ ಸುದ್ದಿ ಬಾಗಲಕೋಟೆ
ಭಾನುವಾರ ಜಿಲ್ಲೆಯಲ್ಲಿ ನಡೆದ ಪೊಲೀಸ್ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ಪರೀಕ್ಷಾರ್ಥಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.
ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಶ್ರೀಮಂತ ಭೂಪಾಲ ಸದಲಗಿ ಬಂಧಿತ ಪರೀಕ್ಷಾರ್ಥಿ. ಭಾನುವಾರ ವಿದ್ಯಾಗಿರಿಯ ಸಿಬಿಎಸ್‌ಸಿ ಶಾಲೆಯಲ್ಲಿ ನಡೆದ ಕೆಎಸ್‌ಆರ್‌ಪಿ/ಐಆರ್‌ಬಿ ಕಾನ್ಸಟೇಬಲ್ ಲಿಖಿತ ಪರೀಕ್ಷೆಯಲ್ಲಿ ಹಾಜರಾಗಿ ಮಾಸ್ಕ್ ಒಳಗಿನ ಬಾಜು ಪಟ್ಟಿಯಲ್ಲಿ ಅಂಟಿಸಿರುವ ಎಲೆಕ್ಟಾçನಿಕ್ ಸಾಧನದಿಂದ ಮತ್ತು ಕಿವಿಯೊಳಗೆ ಇದ್ದ ಮತ್ತೊಂದು ಸಾಧನದ ಸಹಾಯದಿಂದ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳನ್ನು ಮತ್ತೊಬ್ಬರಿಗೆ ಓದಿ ಹೇಳಿ ಅವರಿಂದ ಉತ್ತರ ತಿಳಿದುಕೊಂಡು ಮೋಸತನದಿಂದ ಪರೀಕ್ಷೆ ಬರೆಯುತ್ತಿದ್ದಾಗ ದಸ್ತಗಿರಿ ಮಾಡಲಾಗಿದೆ. ಜತೆಗೆ ಅವರ ಸಹಚರರನ್ನು ಬಂಧಿಸಲು ಜಾಲ ಬೀಸಲಾಗಿದೆ. ನವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಸಶಸ್ತçಪಡೆ ಹಾಗೂ ಮೀಸಲು ಪಡೆಯ ಕಾನ್ಸಟೇಬಲ್ ಹುದ್ದೆಯ ಪರೀಕ್ಷೆಗಳು ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ೧೩ ಪರೀಕ್ಷೆ ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆದವು. ಒಟ್ಟು ೧೦ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು.
ನಗರದ ಹಳೆ ಬಾಗಲಕೋಟೆಯ ಬವಿವ ಸಂಘದ ನಾನಾ ಕಾಲೇಜ್‌ಗಳಲ್ಲಿ ನಡೆದ ಪರೀಕ್ಷೆಯಲ್ಲಿ ೮,೮೦೦ ಹಾಗೂ ವಿದ್ಯಾಗಿರಿ ಸಿಬಿಎಸ್‌ಸಿ ಶಾಲೆಯಲ್ಲಿ ೨,೮೦೦ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು. ಪೊಲೀಸ್ ಇಲಾಖೆಯೇ ನೇರವಾಗಿ ಪರೀಕ್ಷೆ ಉಸ್ತುವಾರಿ ವಹಿಸಿಕೊಂಡಿತ್ತು.