ಸಂಶೋಧನೆಗಳ ಫಲ ರೈತರಿಗೆ ತಲುಪಲಿ:ಗದ್ದಿಗೌಡರ
ನಿಮ್ಮ ಸುದ್ದಿ ಬಾಗಲಕೋಟೆ
ಸಂಶೋಧನೆ ಮಾಡಿದ ವಿವಿಧ ತಳಿಗಳು ರೈತರ ಜಮೀನಿಗೆ ತಲುಪಿಸಿ ಅದರ ಫಲ ಪಡೆದು ಆರ್ಥಿಕವಾಗಿ ಸದೃಡವಾಗುವಂತೆ ಮಾಡಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.
ತೋವಿವಿಯ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ವಿಜ್ಞಾನಿಗಳು ಭೂಮಿಯ ಗುಣಧರ್ಮಕ್ಕೆ ತಕ್ಕಂತ ಬೆಳೆಗಳ ಮಾಹಿತಿಯನ್ನು ರೈತರಿಗೆ ನೀಡಬೇಕು. ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಆರೋಗ್ಯ ದೃಷ್ಠಿಯಿಂದ ಒಂದು ಕಡೆ ಲಾಭವಾದರೆ, ಆರ್ಥಿಕವಾಗಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತಿದ್ದು, ಈ ಬಗ್ಗೆ ರೈತರಲ್ಲಿ ಒಲವು ಹೆಚ್ಚಿಸುವ ಕೆಲಸವಾಗಬೇಕೆಂದು ತಿಳಿಸಿದರು.
ತೋವಿವಿಯು ತೋಟಗಾರಿಕೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿಜ್ಞಾನಿಗಳು ಹೊಸ ಹೊಸ ತಳಿಗಳನ್ನು ಸಂಶೋಧನೆ ಮಾಡಿದ್ದಾರೆ. ರೈತರಲ್ಲಿ ಆತ್ಮ ವಿಶ್ವಾಸಿ ಹೆಚ್ಚಿಸುವ ಮೂಲಕ ಸಂಶೋಧನೆಗಳ ಮಾಹಿತಿ ವಿನಿಮಯವಾಗುವ ಕೆಲಸವಾಗಬೇಕು. ಕೃಷಿಕರ ಜೀವನ ಬದಲಾವಣೆಗೆ ಕೇಂದ್ರ ಸರಕಾರ ಕಿಸಾನ ಸಮ್ಮಾನ್, ಫಸಲ್‌ಭೀಮಾ ಯೋಜನೆಯಂತಹ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಅಭಿವೃದ್ದಿಗೆ ಹೆಚ್ಚು ಒಲವು ತರಲು ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ ಮಾತನಾಡಿ ಒಕ್ಕಲುತನ ಉತ್ಪನ್ನ ಹರಾಜಿನ ಮೂಲಕ ಮಾರಾಟವಾಗುತ್ತಿದ್ದರೆ, ಕಾರ್ಖಾನೆಗಳು ಉತ್ಪಾಧಿಸಿದ ವಸ್ತುಗಳು ಮಾತ್ರ ನಿಗದಿತ ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಜಗತ್ತೆ ಒಂದು ಮಾರುಕಟ್ಟೆಯಾದಾಗ ಬೇಡಿಕೆಯ ಇದ್ದ ವಸ್ತು ಹಾಗೂ ಬೆಳೆ ಬೆಳೆಯಲು ಮುಂದಾಗಬೇಕಿದೆ. ಈ ಮೊದಲು ಆಹಾರ ಧಾನ್ಯಗಳ ಕೊರತೆ ಇತ್ತು, ಆದರೆ ಈಗ ಉತ್ಪಾದನೆ ಹೆಚ್ಚಾಗುತ್ತಿದೆ. ಅದಕ್ಕೆ ಸೂಕ್ತ ಮಾರುಕಟ್ಟೆ ದರ ಸಿಗದಂತಾಗಿದೆ. ಆದ್ದರಿಂದ ರೈತರು ಸ್ವಿಇಚ್ಚೆ ಇಲ್ಲಿ ಮುಖ್ಯವಾಗುತ್ತದೆ. ವಿವಿಯ ಸಂಶೋಧನೆಗಳು ರೈತರಿಗೆ ಫಲಿ ನೀಡಿದಾಗ ಮಾತ್ರ ಆ ಸಂಶೋಧನೆಗೆ ಅರ್ಥ ಬರುತ್ತದೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ ಮನುಷ್ಯನ ಜೀವನ ಶೈಲಿ ಬದಲಾಗಬೇಕು. ಯಾಂತ್ರಿಕ ಜೀವನದಿಂದ ಹೊರಬರಬೇಕು ಇಲ್ಲವಾದಲ್ಲಿ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಸದಾ ಕಾಲ ಚೈತನ್ಯದ ಬೀಡಾಗಬೇಕು. ಜೀವನ ಶೈಲಿಯ ಜೊತೆಗೆ ಆಹಾರ ವಿಧಾನದಲ್ಲಿ ಬದಲಾವಣೆ ಆಗಬೇಕು. ಅಂದರೆ ಪರಿಶ್ರಮದ ಮೂಲಕ ಸ್ಟೆöÊಲ್ ತೋರಿಸುವ ಕೆಲಸವಾಗಬೇಕು ಎಂದರು.
ನಮ್ಮಲ್ಲಿ ಬ್ಯೂಟಿನೆಸ್ ಹೆಚ್ಚಾಗಿ ಡ್ಯೂಟಿನೆಸ್ ಕಡಿಮೆಯಾಗುತ್ತಿದೆ. ಉತ್ಕೃಷ್ಟವಾದ ಜೀವನ ಶೈಲಿ ಬೆಳೆಸಿಕೊಳ್ಳಬೇಕು. ಅಸನ ವಸನ ಮತ್ತು ಪಚನ ಈ ಮೂರು ಕ್ರಿಯೆಗಳು ಆರೋಗ್ಯಕ್ಕೆ ಮುಖ್ಯವಾಗಿದ್ದು, ಯಾವುದೇ ರೀತಿಯ ಕಾಯಿಲೆ ಬರುವದಿಲ್ಲ. ಸಮತೋಲನ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕು. ೮೦ ಗ್ರಾಂ ಹಣ್ಣು ಹಂಪಲ, ೭೫ ರಿಂದ ೧೦೫ ಗ್ರಾಂ ವಿವಿಧ ಸೊಪ್ಪು ಹಾಗೂ ೮೫ ಗ್ರಾಂ ದಷ್ಟು ಇತರೆ ತರಕಾರಿ ಸೇವಿಸಬೇಕು. ಆಹಾರವೇ ಔಷಧಿಯಾಗಬೇಕೇ ಹೊರತು ಔಷಧಿಯೇ ಆಹಾರವಾಗಬಾರದು. ಇದರ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.
ತೋವಿವಿಯ ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜೇಂದ್ರ ಪ್ರಸಾದ, ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಫೌಜಿಯಾ ತರನ್ನುಮ್, ಬೀದರ ಕ.ಪ.ಪ.ಮೀ.ವಿವಿಯ ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ತೋವಿವಿಯ ವಿಸ್ತರಣಾಧಿಕಾರಿ ಡಾ.ವೈ.ಕೆ.ಕೋಟಿಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.