ಪರಿಷತ್ ಚುನಾವಣೆ:19 ನಾಮಪತ್ರ ಸಲ್ಲಿಕೆ
ನಿಮ್ಮ ಸುದ್ದಿ ವಿಜಯಪುರ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ನ.23 ರಂದು 13 ಅಬ್ಯರ್ಥಿಗಳಿಂದ 19 ನಾಮಪತ್ರ ಸಲ್ಲಿಕೆಯಾಗಿವೆ.
ಕಾಂಗ್ರೆಸ್‌ನಿಂದ ಸುನಿಲಗೌಡ ಪಾಟೀಲ್, ಬಿಜೆಪಿಯಿಂದ ಮಾಜಿ ಶಾಸಕ ಪಿ.ಎಚ್.ಪೂಜಾರ್ ಪೂಜಾರ ತಮ್ಮ ಪಕ್ಷದ ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಅವಳಿ ಜಿಲ್ಲೆ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ 2ನೇ ಬಾರಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈವರೆಗೆ ಒಟ್ಟು 19 ನಾಮಪತ್ರ ಸಲ್ಲಿಕೆಯಾದಂತಾಗಿದೆ.
ನಾಮಪತ್ರ ಸಲ್ಲಿಕೆಗೆ ಒಂದೇ ದಿನ ಬಾಕಿಯಿರುವಂತೆ ಕಾಂಗ್ರೆಸ್ ಸುನಿಲಗೌಡ ಪಾಟೀಲ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದ ಬೆನ್ನಲ್ಲೇ ಅವಳಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಜಿಲ್ಲಾ ಚುನಾಣಾಧಿಕಾರಿ ಪಿ. ಸುನಿಲಕುಮಾರ ಅವರಿಗೆ ಪ್ರತ್ಯೇಕವಾಗಿ 2 ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುನಿಲಗೌಡ ಅವರಿಗೆ ಮಾಜಿ ಸಚಿವ ಎಂ.ಬಿ.ಪಾಟೀಲ, ಶಾಸಕ ಆನಂದ ನ್ಯಾಮಗೌಡ ಸಾಥ್ ನೀಡಿದರು.
ಎಸ್ಸಾರ್ ಬೆಂಬಲ
ಬಳಿಕ ಮಾತನಾಡಿದ ಅವರು ಹಿರಿಯರಾದ ಎಸ್.ಆರ್.ಪಾಟೀಲರು ಬೆಂಬಲ ನೀಡಿದ್ದಾರೆ. ನಾನು ಹಿಂದಿನ ಅವಧಿಯಲ್ಲಿ ಅವಳಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸ್ಥಳೀಯ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರು ಹಲವು ಸಮಸ್ಯೆ ಎದುರಿಸುತ್ತಿದ್ದು ಗ್ರಾಪಂ ಸದಸ್ಯರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದೇನೆ.
ಸದಸ್ಯರಿಗೆ 3 ಸಾವಿರ ಹಾಗೂ ಅಧ್ಯಕ್ಷರಿಗೆ 5 ಸಾವಿರ ವೇತನ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ, ಬಾಗಲಕೋಟೆ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಾಜಿ ಸಚಿವ ಅಪ್ಪಾಜಿ ನಾಡಗೌಡ, ಅಜಯಕುಮಾರ ಸರನಾಯಕ, ಎಂ.ಬಿ. ಪಾಟೀಲ, ಶಾಸಕ ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಾಜಿ ಶಾಸಕರಾದ ವಿಠ್ಠಲ ಕಟಕದೊಂಡ, ವಿಜಯಾನಂದ ಕಾಶಪ್ಪನವರ, ವೀಣಾ ಕಾಶಪ್ಪನವರ, ಅಬ್ದುಲ್‌ಹಮೀದ್ ಮುಶ್ರಪ್, ಅಶೋಕ ಮನಗೂಳಿ, ಎನ್.ಎಸ್. ಅಳ್ಳೊಳ್ಳಿ, ಬಿ.ಎಸ್. ಪಾಟೀಲ ಯಾಳಗಿ, ಐ.ಸಿ. ಪಟ್ಟಣಶೆಟ್ಟಿ, ಮಲ್ಲಣ್ಣ ಸಾಲಿ, ಇಲಿಯಾಸ್ ಬೋರಮನಿ ಮತ್ತಿತರರಿದ್ದರು.
ಪಿ.ಎಚ್.ಪೂಜಾರ ದ್ವಿತೀಯ ಬಾರಿ ಬಿಜೆಪಿ ಅಭ್ಯರ್ಥಿ
ಬಿಜೆಪಿ ಅಬ್ಯರ್ಥಿ ಪಿ.ಎಚ್.ಪೂಜಾರ ನ.21ರಂದು ಎರಡು ನಾಮಪತ್ರ ಸಲ್ಲಿಸಿದ್ದರು. ಮಂಗಳವಾರ ಮತ್ತೆ ಪಕ್ಷ ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು.
ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತಿತರರಿದ್ದರು.
ನಾಮಪತ್ರ ಸಲ್ಲಿಸಿದ ಪಕ್ಷೇತರರು
ಮಾರುತಿ ಜಮೀನ್ದಾರ, ದುರಗಪ್ಪ ಸಿದ್ದಾಪುರ, ಮಲ್ಲಿಕಾರ್ಜುನ ಕೆಂಗನಾಳ, ಗುರುಲಿಂಗಪ್ಪ ಅಂಗಡಿ, ಮಲ್ಲಿಕಾರ್ಜುನ ಲೋಣಿ, ಕಾಂತು ಇಂಚಗೇರಿ, ಶ್ರೀಮಂತ ಬಾರಿಕಾಯಿ, ತುಳಸಪ್ಪ ದಾಸರ, ಗೊಲ್ಲಾಳಪ್ಪಗೌಡ ಪಾಟೀಲ, ಬಸವರಾಜ ಯರನಾಳ, ಕಾಶೀಂಪಟೇಲ್ ಪಟೇಲ್.
ಚುನಾವಣೆಯಲ್ಲಿ ಜೆಡಿಎಸ್ ಅಬ್ಯರ್ಥಿಗಳಿಲ್ಲ
ಪ್ರಾದೇಶಿಕ ಪಕ್ಷ ಜೆಡಿಎಸ್ ಈ ಚುನಾವಣೆಗೆ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಚುನಾವಣೆಯಿಂದ ದೂರ ಉಳಿದಿದೆ.
ಸಲ್ಲಿಕೆಯಾದ ನಾಮಪತ್ರ ಪರಿಶೀಲನೆ ನ.24ರಂದು ನಡೆಯಲಿದೆ. ನ.26 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ಸುನಿಲಕುಮಾರ ತಿಳಿಸಿದ್ದಾರೆ.