ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರ ಆಗ್ರಹ
ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯ ಹೆದ್ದಾರಿ ಪಕ್ಕದ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸಬೇಡಿ ಎಂದು ಅಮೀನಗಡ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಮುಖ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಕಿರು ಸಾಲ ಮೇಳದಲ್ಲಿ ಈ ಕುರಿತಂತೆ ಆಗ್ರಹಿಸಿದ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಬಿ.ಎಸ್.ನಿಡಗುಂದಿ, ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವವರನ್ನು ತೆರವುಗೊಳಿಸುವುದು ಬೇಡ ಎಂದು ಆಗ್ರಹಿಸಿದರು.
ದಿನ ನಿತ್ಯದ ದುಡಿಮೆಗೆ ಸಣ್ಣ ಪುಟ್ಟ ವ್ಯಾಪಾರ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಅವರನ್ನು ಪಾದಚಾರಿ ಮಾರ್ಗದಿಂದ ತೆರವುಗೊಳಿಸುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಹೀಗಾಗಿ ಅಧಿಕಾರಿಗಳು ಸೂಕ್ಷö್ಮ ವಿಷಯ ಅರಿತು ಮುನ್ನಡೆಯಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ಪಾದಚಾರಿ ಮಾರ್ಗ ಒತ್ತುವರಿ ಆಗಿದ್ದರಿಂದ ಪಟ್ಟಣ ಪಂಚಾಯಿತಿ ಆಡಳಿತ ಜನೇವರಿ ೨೯ರಂದು ಸಂಬಂಧಿಸಿದವರಿಗೆ ನೋಟೀಸ್ ಜಾರಿಗೊಳಿಸಿತ್ತು. ವಾರದೊಳಗೆ ಅತಿಕ್ರಮಣಕ್ಕೆ ಸೂಕ್ತ ಉತ್ತರ ಕೊಡಬೇಕು. ಅತಿಕ್ರಮಿಸಿಲ್ಲವೆಂದಾದರೆ ಆಸ್ತಿ ಹಕ್ಕುದಾರಿಕೆ ದಾಖಲೆ ನೀಡಬೇಕು. ಇಲ್ಲವಾದರೆ ೭ ದಿನದೊಳಗೆ ಅತಿಕ್ರಮಣ ಪ್ರದೇಶ ತೆರವುಗೊಳಿಸಬೇಕು ಎಂದು ನೋಟೀಸ್ ನೀಡಿದ್ದರು.
ಪಟ್ಟಣ ಪಂಚಾಯಿತಿ ಆಡಳಿತ ನೋಟೀಸ್ ನೀಡಿ ಸದ್ಯ ಈಗಾಗಲೆ ೧೨ ದಿನ ಗತಿಸಿವೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯರೊಬ್ಬರ ಹೇಳಿಕೆ ಕುತೂಹಲ ಪಡೆದಿದೆ. ಸದಸ್ಯರ ಮಾತಿಗೆ ಮುಖ್ಯಾಧಿಕಾರಿ ಮಣೆ ಹಾಕುತ್ತಾರೋ? ಅಥವಾ ನೋಟೀಸ್‌ನಲ್ಲಿ ತಿಳಿಸಿದಂತೆ ಕ್ರಮಕ್ಕೆ ಮುಂದಾಗುತ್ತಾರೋ ಕಾದು ನೋಡಬೇಕಿದೆ.