ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಗೂಡ್ಸ್ ಶೆಡ್ ಕುರಿತು ಪಪಂ ಸದಸ್ಯರೊಬ್ಬರು ಸೇರಿದಂತೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದು ಸೂಕ್ತ ಪರಿಶೀಲನೆಗೆ ಆಗ್ರಹಿಸಿದ್ದಾರೆ.
2018-19ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿ ಅನುದಾನದಲ್ಲಿ 4.59 ಲಕ್ಷ ರೂ. ವೆಚ್ಚದಲ್ಲಿ ಪಟ್ಪಣ ಪಂಚಾಯಿತಿ ಕಚೇರಿ ಪಕ್ಕದಲ್ಲೇ ಗೂಡ್ಸ್ ಶೆಡ್ ನಿರ್ಮಾನ ಕಾಮಗಾರಿ ನಡೆದಿದೆ. ಇತ್ತೀಚೆಗೆ ಕಟ್ಟಡ ಪೂರ್ಣಗೊಂಡಿದ್ದು ಪ್ಲಾಸ್ಟರ್ ಮಾಡಿದ ಎರಡೇ ದಿನದಲ್ಲಿ ಬಣ್ಣ ಬಳಿಯಲು ಮುಂದಾಗಿದ್ದ ಗುತ್ತಿಗೆದಾರರ ಕಾರ್ಯ ವೈಖರಿ ಕುರಿತು ಸಾರ್ವಜನಿಕರೊಬ್ಬರು ಆಕ್ಷೇಪವೆತ್ತಿದ್ದಾರೆ.
ಈ ಕುರಿತ ವಿಚಾರಿಸಲಾಗಿ ಪಪಂ ಸದಸ್ಯ ಗುರುನಾಥ ಚಳ್ಳಮರದ ಅವರು, ಕಟ್ಟಡದ ತಳಪಾಯದಿಂದಲೇ ವೈಫಲ್ಯದ ಕುರಿತು ಸಂಬಂಧಿಸಿದ ಆಡಳಿತ, ತಾಂತ್ರಿಕ ವರ್ಗದ ಗಮನಕ್ಕೆ ತರಲಾಗಿದೆ. ಆದರೆ ಪಟ್ಟಣ ಪಂಚಾಯಿತಿ ಜೆಇ ಎಲ್ಲವೂ ಸರಿಯಿದೆ. ಬೇಕಿದ್ದರೆ ಹತ್ತಾರು ಜನರನ್ನು ಕರೆಸಿ ವಿಚಾರಿಸಿ ಎಂಬ ಸಬೂಬು ಹೇಳುತ್ತಾರೆ. ಶಾಸಕರ ಗಮನಕ್ಕೂ ತರಲಾಗಿ ಅವರೂ ಸಹ ಕಟ್ಟಡ ನಿರ್ಮಾಣದ ವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರೂ ಕ್ಯಾರೆ ಎನ್ನದೆ ಕಾಮಗಾರಿ ಮುಂದುವರೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕಟ್ಟಡಕ್ಕೆ ಪ್ಲಾಸ್ಟರ್ ಮಾಡಿದ ಒಂದೆರಡು ದಿನದಲ್ಲೇ ಬಣ್ಣ ಬಳಿಯುತ್ತಿರುವುದು ಗಮನಕ್ಕೆ ಬಂದ ನಿವಾಸಿ ಶಿವಶಂಕರ ಹಿರೇಮಠ, ಇಷ್ಟೊಂದು ತರಾತುರಿ ಏಕೆ? ಕಟ್ಟಡ ಕ್ಯೂರಿಂಗ್ ಆಗದಿದ್ದರೆ ಬಿರುಕು ಬಿಡುತ್ತದೆ. ನಂತರದಲ್ಲಿ ಇದರ ಹೊಣೆ ಯಾರು? ಪಪಂ ಕಚೇರಿ ಆವರಣದಲ್ಲಿನ ಕಟ್ಟಡದ ಪರಿಸ್ಥಿತಿ ಹೀಗಾದರೆ ಹೇಗೆ? ಎಂದು ಎಂಜಿನಿಯರ್ ಅವರನ್ನು ಪ್ರಶ್ನಿಸಿದ್ದಾರೆ. ಜತೆಗೆ ಮುಖ್ಯಾಕಾರಿ ಗಮನಕ್ಕೂ ತರಲಾಗಿದೆ. ಆದರೂ ಯಾವುದಕ್ಕೂ ಗಮನ ಕೊಡದೆ ಕಟ್ಟಡ ಕಾಮಗಾರಿ ನಿರಾತಂಕವಾಗಿ ಸಾಗಿದ್ದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.
ಪಟ್ಟಣ ಪಂಚಾಯಿತಿ ಆವರಣದಲ್ಲಿನ ಗೂಡ್ಸ್ ಶೆಡ್ ನಿರ್ಮಾಣದಲ್ಲಿ ನಿಯಮ ಪಾಲಿಸಿಲ್ಲ ಎಂಬ ದೂರು ನನಗೂ ಕೇಳಿ ಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ.
–ಎಂ.ಜಿ.ಕಿತ್ತಲಿ, ಎಇಇ, ಪಿಡಿ.
ಗೂಡ್ಸ್ ಶೆಡ್ ನಿರ್ಮಾಣದಲ್ಲಿ ಹಂತಗಳನ್ನು ಸೂಕ್ತ ಪರಿಶೀಲನೆ ಮಾಡಲಾಗುವುದು. ನಂತರದಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಸಲಾಗುವುದು.
-ಗುರುರಾಜ ಚೌಕಿಮಠ, ಮುಖ್ಯಾಧಿಕಾರಿ.
ಕಟ್ಟಡದ ಆರಂಭದ ಹಂತದಿಂದಲೇ ಕಳಪೆ ಕುರಿತು ಸೂಕ್ತ ಮುನ್ನೆಚ್ಚರಿಕೆ ನೀಡುತ್ತಿದ್ದರೂ ಸಂಬAಧಿಸಿದವರು ಯಾರ ಮಾತು ಕೇಳುತ್ತಿಲ್ಲ. ಶಾಸಕರ ಗಮನಕ್ಕೂ ತರಲಾಗಿದೆ.
–ಗುರುನಾಥ ಚಳ್ಳಮರದ, ಪಟ್ಟಣ ಪಂಚಾಯಿತಿ ಸದಸ್ಯ.