ಕಿಸಾನ್ ಸಮ್ಮಾನ್‌ನಡಿ ಕೋಟಿ ರೈತರಿಗೆ ೧.೩೪ ಲಕ್ಷ ಕೋಟಿ ರೂ. ಸಹಾಯಧನ
ನಿಮ್ಮ ಸುದ್ದಿ ಬಾಗಲಕೋಟೆ
ಹಿಂದಿನ ಸರ್ಕಾರಗಳು ಕೇವಲ ೨೧ ಸಾವಿರ ಕೋಟಿ ರೂ. ನೀಡಲಾಗುತ್ತಿದ್ದ ಕೃಷಿ ಬಜೆಟ್ ಅನ್ನು ನಮ್ಮ ಸರ್ಕಾರ ೨೦೨೦ ರಲ್ಲಿ ೧.೩೪ ಲಕ್ಷ ಕೋಟಿ ರೂ. ಗಳಿಗೆ ಹೆಚ್ಚಿಸಿದ್ದಲ್ಲದೆ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ೯ ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ೧.೧೩ ಲಕ್ಷ ಕೋಟಿ ರೂ. ಗಳನ್ನು ಜಮಾ ಮಾಡುವ ಮೂಲಕ ರೈತರಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ರೈತರಿಗೆ ಸಮರ್ಪಿತಗೊಂಡಿರುವ ಸರ್ಕಾರವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಅವರು ಹೇಳಿದರು.
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮ ಬಳಿಯ ಸಾಯಿಪ್ರಿಯ ಶುಗರ್ಸ್ ಲಿ. ಯೂನಿಟ್ ಆವರಣದಲ್ಲಿ ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆ ವತಿಯಿಂದ ಭಾನುವಾರದಂದು ಏರ್ಪಡಿಸಿದ ಸಮಾರಂಭದಲ್ಲಿ ನೂತನ ಕಾರ್ಖಾನೆ ಗಳ ಉದ್ಘಾಟನೆ, ನಿರಾಣಿ ಸಮೂಹ ದಿಂದ ೭೫ ಸಾವಿರ ಟಿಸಿಡಿ ಕಬ್ಬು ನುರಿಸುವ, ೨೬೦ ಮೆ.ವ್ಯಾ. ಸಹ ವಿದ್ಯುತ್, ೨೬ ಲಕ್ಷ ಲೀ. ಇಥೆನಾಲ್ ಪ್ರತಿದಿನ ಬಯೋ ಸಿ.ಎನ್.ಜಿ. & ಸಿಒ೨ ಉತ್ಪಾದನೆ ಗಳ ವಿಸ್ತರಣೆ ಯೋಜನೆಗಳಿಗೆ ಭೂಮಿಪೂಜೆ ಹಾಗೂ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ಮಾತ್ರವಲ್ಲ, ಇಡೀ ವಿಶ್ವದ ನೇತೃತ್ವ ವಹಿಸುವ ದಿಸೆಯತ್ತ ಸಾಗುತ್ತಿದ್ದಾರೆ. ಇದರಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಮಹತ್ವದ್ದಾಗಿದೆ. ದೇಶದಲ್ಲಿ ಜರುಗುತ್ತಿರುವ ಎಲ್ಲ ಹಂತಗಳ ಚುನಾವಣೆಗಳಲ್ಲಿ ದೇಶದ ಜನತೆ ನಮಗೆ ಬೆಂಬಲ ವ್ಯಕ್ತಪಡಿಸುತ್ತ ನಮ್ಮ ಸರ್ಕಾರವನ್ನು ಬಲಪಡಿಸುತ್ತಿದ್ದಾರೆ. ದೇಶವನ್ನು ನಮ್ಮ ಸರ್ಕಾರ ಆತ್ಮನಿರ್ಭರಗೊಳಿಸುವತ್ತ ಸಾಗಿದೆ. ದೇಶದಲ್ಲಿ ಪೆಟ್ರೋಲ್ ಆಮದಿಗಾಗಿ ಸರ್ಕಾರದ ಬಹಳಷ್ಟು ಆದಾಯ ವಿದೇಶಿ ವಿನಿಮಯಕ್ಕೆ ಖರ್ಚಾಗುತ್ತಿದೆ. ಕಬ್ಬು ಬೆಳೆಯ ಸಹ ಉತ್ಪನ್ನವಾಗಿರುವ ಇಥೆನಾಲ್ ಇದೀಗ ದೇಶದ ಇಂಧನ ಕ್ಷೇತ್ರದಲ್ಲಿ ಪೆಟ್ರೋಲ್‌ಗೆ ಪರ್ಯಾಯ ಇಂಧನವಾಗಿ ಬಳಸಲಾಗುತ್ತಿದ್ದು, ದೇಶದ ಅಗತ್ಯತೆಯನ್ನು ಪೂರೈಸಲು ಸಹಕಾರಿಯಾಗಿದೆ ಎಂದರು.
ಇಥೆನಾಲ್ ಉತ್ಪಾದನೆ ಹಾಗೂ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಉತ್ತೇಜನ ನೀಡುತ್ತಿದ್ದಾರೆ. ಸಕ್ಕರೆ ಉತ್ಪಾದನೆಯ ಜೊತೆ ಜೊತೆಗೆ ಇಥೆನಾಲ್ ಉತ್ಪಾದನೆಗೆ ಅವಕಾಶವಿದ್ದು, ಇದರಿಂದ ರೈತರಿಗೂ ಅನುಕೂಲವಾಗಲಿದೆ ಅಲ್ಲದೆ ಸಕ್ಕರೆ ಕಾರ್ಖಾನೆಗಳಿಗೂ ಲಾಭದಾಯಕವಾಗಲಿದೆ. ಇಥೆನಾಲ್ ಹೆಚ್ಚಿನ ಉತ್ಪಾದನೆ ಹಾಗೂ ಬಳಕೆಯಿಂದ ಇಂಧನ ಕ್ಷೇತ್ರದಲ್ಲಿ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಆರ್ಥಿಕವಾಗಿಯೂ ದೇಶಕ್ಕೆ ವಿದೇಶಿ ವಿನಿಮಯದಲ್ಲಿ ಉಳಿಕೆಯಾಗಲಿದೆ. ನಿರಾಣಿ ಸಮೂಹದ ಉದ್ಯಮವು ಇದೀಗ ತನ್ನ ಕಾರ್ಖಾನೆ ಘಟಕವನ್ನು ವಿಸ್ತರಿಸುತ್ತಿರುವುದರಿಂದ ಸುಮಾರು ೧೦ ಸಾವಿರ ಉದ್ಯೋಗ ಸೃಷ್ಟಿಸಿದಂತಾಗಿದೆ. ೨೦೧೫ ರಲ್ಲಿ ಇಥೆನಾಲ್ ಉತ್ಪಾದನೆಗೆ ಸುಂಕ ಕಡಿತಗೊಳಿಸಲಾಗಿದೆ. ಇಥೆನಾಲ್‌ಗೆ ಶೇ. ೧೮ ರಷ್ಟು ಇದ್ದ ಜಿಎಸ್‌ಟಿ ಯನ್ನು ಇದೀಗ ಶೇ. ೫ ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.
ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು ೨೦೨೨ ರೊಳಗೆ ಶೇ. ೧೦ ರಷ್ಟು ಹಾಗೂ ೨೦೨೫ ರ ವೇಳೆಗೆ ಶೇ. ೨೫ ರಷ್ಟು ಕಡಿತಗೊಳಿಸಲಾಗುವುದು. ಇಂಧನಕ್ಕಾಗಿ ಗಲ್ಫ್ ರಾಷ್ಟಗಳಿಗೆ ನಮ್ಮ ದೇಶದಿಂದ ಹೆಚ್ಚಿನ ಹಣ ಬಳಕೆಯಾಗುತ್ತಿದ್ದು, ಇದೀಗ ಪ್ರಮಾಣ ಕಡಿತದಿಂದ ಉಳಿಯುವ ಹಣವನ್ನು ನಾವು ರೈತರ ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಸಹಾಯಕವಾಗಿದೆ. ಭಾರತೀಯ ಆಹಾರ ನಿಗಮದದಲ್ಲಿ ಲಭ್ಯವಾಗುವ ಮೆಕ್ಕೆಜೋಳ, ಅಕ್ಕಿ ಧಾನ್ಯವನ್ನು ಇಥೆನಾಲ್ ಉತ್ಪಾದನೆಗೆ ಬಳಸಿಕೊಳ್ಳಲು ನೀತಿಯೊಳಗೆ ಸೇರಿಸಿಕೊಳ್ಳಲಾಗಿದೆ. ಈ ನೂತನ ನೀತಿಯಿಂದಾಗಿ ರೈತರಿಗೂ ಅನುಕೂಲವಾಗಲಿದೆ. ರೈತರಿಗೆ ಆರ್ಥಿಕ ಲಾಭದ ಜೊತೆಗೆ ಉದ್ಯೋಗ ಸೃಷ್ಟಿಗೂ ಅನುಕೂಲವಾಗಲಿದೆ.
ಇಥೆನಾಲ್ ಪರಿಸರ ಸ್ನೇಹಿಯಾಗಿದೆ. ನಮ್ಮ ಸರ್ಕಾರ ಪ್ರಾಥಮಿಕ ಆದ್ಯತೆಯನ್ನು ರೈತರಿಗೆ ನೀಡುತ್ತಿದ್ದು, ಆದಾಯ ದ್ವಿಗುಣಗೊಳಿಸುವತ್ತ ಕ್ರಮ ಕೈಗೊಂಡಿದೆ. ೨೦೧೩-೧೪ ರಲ್ಲಿ ೨೧ ಸಾವಿರ ಕೋಟಿ ರೂ. ಇದ್ದ ಕೃಷಿ ಬಜೆಟ್ ಅನ್ನು ನಮ್ಮ ಸರ್ಕಾರ ೨೦೨೦ ರ ಬಜೆಟ್‌ನಲ್ಲಿ ೧.೩೪ ಲಕ್ಷ ಕೋಟಿ ರೂ. ಗಳನ್ನು ಕೃಷಿ ಕ್ಷೇತ್ರಕ್ಕಾಗಿ ಮೀಸಲಿಡುವ ಮೂಲಕ ರೈತ ಪರ ಸರ್ಕಾರ ಎಂಬುದನ್ನು ನಿರೂಪಿಸಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನಮ್ಮ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ ೬ ಸಾವಿರ ರೂ. ಗಳನ್ನು ಜಮಾ ಮಾಡುತ್ತಿದೆ. ಡಿಸೆಂಬರ್ ವರೆಗೆ ಸುಮಾರು ೯ ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗೆ ೧.೧೩ ಲಕ್ಷ ಕೋಟಿ ರೂ.ಗಳನ್ನು ಜಮಾ ಮಾಡಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ೫೦ ಲಕ್ಷ ಹೆ. ಭೂಮಿಗೆ ಸೂಕ್ಷö್ಮ ನೀರಾವರಿ ಸೌಲಭ್ಯ ಕಲ್ಪಿಸಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ೫ ವರ್ಷ ಪೂರ್ಣಗೊಳಿಸಿದ್ದು, ೯೦ ಸಾವಿರ ಕೋಟಿ ರೂ. ಈ ವಿಮೆ ಯೋಜನೆಯಡಿ ರೈತರಿಗೆ ಪಾವತಿಯಾಗಿದೆ. ಎಪಿಎಂಸಿ ಗಳಲ್ಲಿ ಆನ್‌ಲೈನ್ ವ್ಯವಹಾರ ಒದಗಿಸುವ ಮೂಲಕ ರೈತರಿಗೆ ಲಾಭದಾಯಕವಾಗುವಂತೆ ಮಾಡಲಾಗಿದೆ. ಹಿಂದಿನ ಸರ್ಕಾರ ೬ ಲಕ್ಷ ಕೋಟಿ ರೂ. ರೈತರಿಗೆ ಸಾಲ ನೀಡುತ್ತಿತ್ತು. ನಮ್ಮ ಸರ್ಕಾರ ೧೩.೨೨ ಲಕ್ಷ ಕೋಟಿ ರೂ. ಗಳನ್ನು ರೈತರಿಗೆ ಸಾಲ ನೀಡುವ ಮೂಲಕ ನೆರವಾಗಿದೆ. ೧೦ ಸಾವಿರಕ್ಕೂ ಹೆಚ್ಚು ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸಲಾಗಿದ್ದು, ೭ ಸಾವಿರ ಕೋಟಿ ರೂ. ಗಳನ್ನು ಸರ್ಕಾರ ಇದಕ್ಕಾಗಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ೧.೬ ಕೋಟಿ ರೈತರಿಗೆ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರ ರೈತರ ಪರವಾಗಿದ್ದು, ರೈತ ಪರವಾದ ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ರೈತರಿಗೆ ಸಮರ್ಪಿತವಾಗಿರುವ ಸರ್ಕಾರ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಕರ್ನಾಟಕ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ರೈತರು ಇದೀಗ ತಮ್ಮ ಬೆಳೆಯನ್ನು ಹೆಚ್ಚು ಲಾಭದಾಯಕವಾಗುವ ರೀತಿಯಲ್ಲಿ ಯಾವುದೇ ಅಡ್ಡಿಯಿಲ್ಲದೆ ಮಾರಾಟ ಮಾಡುವಂತಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಅವರು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಕರ್ನಾಟಕ ಉದ್ಯಮ ಸ್ನೇಹಿ ರಾಜ್ಯವಾಗಿದ್ದು, ಉತ್ತಮ ಕೈಗಾರಿಕಾ ನೀತಿ ಜಾರಿ ಮಾಡುವ ಮೂಲಕ ದೊಡ್ಡ ದೊಡ್ಡ ಪ್ರಮಾಣದ ಉದ್ಯಮಗಳನ್ನು ರಾಜ್ಯಕ್ಕೆ ತಂದು ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ವರುಣ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಮುಂಬರುವ ೨ ವರ್ಷ ಕಬ್ಬು ಬೆಳೆಗಾರರರಿಗೆ ನೀರಿನ ತೊಂದರೆ ಆಗಲಿಕ್ಕಿಲ್ಲ ಎಂದರು. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ರೈತರು ನೆಮ್ಮದಿಯ ಜೀವನ ನಡೆಸಲು ಶ್ರಮಿಸುವೆ. ಕೊರೊನಾ ಸಂದರ್ಭದಲ್ಲಿ ರಾಜ್ಯ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು, ಆದರೂ ರಾಜ್ಯದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ ಎಂದರು.
ಮುರುಗೇಶ್ ನಿರಾಣಿಯವರು ಸಕ್ಕರೆ ಕಾರ್ಖಾನೆ ಆರಂಭಿಸಿ, ೧೦ ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಕಬ್ಬಿನ ರಸದಿಂದ ಇಥೆನಾಲ್ ತಯಾರಿಸಿ ಪರಿಸರ ಸಂರಕ್ಷಣೆ ಮಾಡುತ್ತಿದ್ದಾರೆ. ದೇವರು ಅವರಿಗೆ ಇನ್ನಷ್ಟು ಉದ್ಯೋಗ ಸೃಷ್ಟಿಸುವ ಶಕ್ತಿ ನೀಡಲಿ. ದೇಶಕ್ಕೆ ವಲ್ಲಬಾಯಿ ಪಟೇಲ್ ನಂತರ ಅಮಿತ ಶಾ ಅವರು ಉತ್ತಮ ಗೃಹ ಸಚಿವರಾಗಿ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ೧೫೦ ಸ್ಥಾನ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಳಪಡಿಸಲಾಗುವುದು ಎಂದು ಅವರಿಗೆ ಈ ವೇದಿಕೆಯ ಮೂಲಕ ಭರವಸೆ ನೀಡುವೆ ಎಂದರು.
ನೂತನ ಸಚಿವರು ಹಾಗೂ ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಮುರುಗೇಶ್ ನಿರಾಣಿಯವರು ಸ್ವಾಗತಿಸಿ, ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದು, ನಮ್ಮ ಸಮೂಹ ಸಂಸ್ಥೆಗಳು ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸುಮಾರು ೭೫ ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದೆ. ಇಥೆನಾಲ್ ಉತ್ಪಾದಿಸುವ ಮೂಲಕ ನಮ್ಮ ಸಂಸ್ಥೆ ಪ್ರಧಾನಮಂತ್ರಿಗಳು ಜಾರಿಗೊಳಿಸಿದ ಆತ್ಮನಿರ್ಭರ್ ಯೋಜನೆಯನ್ನು ಸಾಕಾರಗೊಳಿಸುವತ್ತ ಹೆಜ್ಜೆಯಿರಿಸಿದೆ ಎಂದರು.
ಉಪಮುಖ್ಯಮಂತ್ರಿಗಳು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ ಕಾರಜೋಳ, ನೂತನ ಸಚಿವರಾದ ಮುರುಗೇಶ್ ನಿರಾಣಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ,ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವರಾದ ಆರ್. ಶಂಕರ್, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್, ವಿಜಯಪುರ ಸಂಸದ ಪರಮೇಶ ಜಿಗಜಿಣಗಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್, ಮಹಾರಾಷ್ಟç ರಾಜ್ಯದ ಸಾಂಗ್ಲಿ ಸಂಸದ ಸಂಜಯ್ ಪಾಟೀಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.