ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ರಾಮಥಾಳ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಮೇಲಿಂದ ನದಿಗೆ ಹಾರಿದ್ದ ಮಹಿಳೆಯನ್ನು ರಾಮಥಾಳ ಗ್ರಾಮದ ಯುವಕರು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.
ಗುಳೇದಗುಡ್ಡದ ಅನ್ನಪೂರ್ಣ ಬಸವರಾಜ ನಾಗರಾಳ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.
ಮಧ್ಯಾಹ್ನದ ವೇಳೆ ಸೇತುವೆಗೆ ಬ್ಯಾಗ್‌ನ್ನು ಕರ್ಚಿಪ್ ನಿಂದ ಕಟ್ಟಿದ ನಂತರ ರಭಸವಾಗಿ ಹರಿಯುತ್ತಿದ್ದ ನದಿಗೆ ಹಾರಿದ್ದಾಳೆ. ಆದರೆ ಮತ್ತೆ ಬದುಕಬೇಕೆಂಬ ಆಸೆಯಿಂದ ಜಮೀನಿನಲ್ಲಿದ್ದ ಗಿಡದ ಆಸರೆ ಪಡೆದು ರಕ್ಷಣೆಗಾಗಿ ಕೂಗಿದ್ದಾಳೆ. ಇದನ್ನು ಗಮನಿಸಿದ ರಾಮಥಾಳದ ಯಮನಪ್ಪ ಗೌಡರ, ಶೇಖಪ್ಪ ಮಾದರ, ವೆಂಕಟೇಶ ಗೌಡರ, ದೇವರಾಜ ಗೌಡರ, ಭೀಮಪ್ಪ ಕುರಿ,ಯಲಗೂರ ಗೌಡರ ತಮ್ಮ ಜೀವದ ಹಂಗುತೊರೆದು ಈಜುತ್ತ ಹೋಗಿ ಮಹಿಳೆಯನ್ನು ರಕ್ಷಿಸಿ ದಡ ಸೇರಿಸಿದ್ದಾರೆ.
ಅಮೀನಗಡ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ ತಮ್ಮ ವಾಹನದಲ್ಲಿ ಮಹಿಳೆಯನ್ನು ಕರೆದುಕೊಂಡು ಕಮತಗಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಮಹಿಳೆಯ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಎಎಸ್‌ಐ ಎಂ.ಎಲ್. ಭಜಂತ್ರಿ, ಪೇದೆಗಳಾದ ಈರಣ್ಣ ಕಾಖಂಡಕಿ, ಗಣಪತಿ ಪಮಾರ ಇದ್ದರು.
ಬುದ್ಧಿವಾದ ಹೇಳಿದ ಪಿಎಸೈ: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಗೆ ಪಿಎಸ್ ಐ ಮಲ್ಲಿಕಾರ್ಜುನ ಕುಲಕರ್ಣಿ ಸಿದ್ದಿವಾದ ಹೇಳುವುದರ ಮೂಲಕ ಕುಟುಂಬದ ಸದಸ್ಯರೊಂದಿಗೆ ಕಳುಹಿಸಿಕೊಟ್ಟರು. ರಾಮಥಾಳ ಗ್ರಾಮದ ಯುವಕರು ಜೀವದ ಹಂಗು ತೊರೆದು ಮಹಿಳೆಯನ್ನು ರಕ್ಷಿಸಿದ್ದಕ್ಕೆ ಪಿಎಸೈ ಪ್ರಶಂಸೆ ವ್ಯಕ್ತಪಡಿಸಿದರು.