This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ರಂಗೇರಲಿದೆ ಚುನಾವಣೆ ಅಖಾಡ:ಕಾಂಗ್ರೆಸ್‌ಗೆ ಬಂಡಾಯಗಾರದ್ದೇ ಬಿಸಿ

ಕಾಂಗ್ರೆಸ್‌ಗೆ ಬಂಡಾಯಗಾರದ್ದೇ ಬಿಸಿ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯಿತಿ ಚುನಾವಣೆ ರಣಕಣ ರಂಗೇರಿದ್ದು ಡಿ.೨೭ರಂದು ನಡೆಯುಲಿರುವ ಚುನಾವಣೆಗೆ ಅಖಾಡ ಸಿದ್ದವಾಗಿದೆ.

ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ಆಗಿ ಪರಿವರ್ತನೆ ಆದ ನಂತರ ನಡೆಯಲಿರುವ ೨ನೇ ಚುನಾವಣೆ ಇದಾಗಿದ್ದು ಪ್ರಮುಖ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರ ಸ್ಪರ್ಧೆಯಿಂದ ಮತ್ತಷ್ಟು ರಂಗು ಬಂದಂತಾಗಿದೆ. ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡು ಪಪಂ ಕಚೇರಿಯಲ್ಲೇ ಗಿರಕಿ ಹೊಡೆಯುತ್ತಿರುವ ಸದಸ್ಯ ಆಕಾಂಕ್ಷಿಗಳು ಸ್ಪರ್ಧಿಸಿದ ವಾರ್ಡ್ನತ್ತ ಚಿತ್ತ ಹರಿಸಲಿದ್ದಾರೆ.

ಸಿಹಿ ಖಾದ್ಯ ಕರದಂಟಿಗೆ ಹೆಸರಾದ ಪಟ್ಟಣದಲ್ಲಿ ಮುಂಚಿನಿಂದಲೂ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆಯೇ ನೇರ ಹಣಾಹಣಿ. ಹಲವು ವರ್ಷದ ಹಿಂದೆ ಬಹುತೇಕ ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷದವರೇ ಆಗಿರುತ್ತಿದ್ದರು. ಇತ್ತೀಚಿನ ವರ್ಷದಲ್ಲಿ ಬಿಜೆಪಿಗರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ ಎರಡೂ ಪಕ್ಷಗಳು ಸಮಬಲ ಸಾಧಿಸಿ ಅಧಿಕಾರದ ರುಚಿ ಅನುಭವಿಸಿದ್ದವು.

ಬಿಜೆಪಿಯ ಒಳಜಗಳದಿಂದಾಗಿ ಈ ಬಾರಿ ಕ್ಷೇತ್ರದ ಶಾಸಕರು ಅಷ್ಟು ತಲೆ ಹಾಕಲು ಮುಂದಾಗಿರಲಿಲ್ಲ. ಇದರ ಲಾಭ ಪಡೆಯಲು ಕಾಂಗ್ರೆಸ್ ಆರಂಭದಲ್ಲಿ ಮುಂದಾಗಿದ್ದರೂ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಲು ಮೀನಾಮೇಶ ಮಾಡಿದ್ದರಿಂದ ರೆಬಲ್‌ಗಳು ಸಿಡಿದೆದ್ದು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದು ಬಹಿರಂಗ ಸತ್ಯ. ಸದ್ಯ ಎರಡೂ ಪಕ್ಷಗಳು ಪ್ರಬಲ ಪೈಪೋಟಿ ನಡೆಸುತ್ತಿದ್ದು ಪಕ್ಷೇತರರೂ ಪ್ರಬಲರಾಗಿದ್ದೇವೆ ಎಂದು ತೋರ್ಪಡಿಸಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ನೇರ ಹಣಾಹಣಿ
ವಾರ್ಡ್ ೨, ೩, ೬, ೮, ೯, ೧೦, ೧೩ ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ನಡೆದರೆ, ೪, ೭ ರಲ್ಲಿ ಪಕ್ಷೇತರರೇ ಮೇಲುಗೈ ಸಾಧಿಸಲಿದ್ದಾರೆ. ವಾರ್ಡ್ ೧, ೫, ೧೧, ೧೨, ೧೪, ೧೫ ರಲ್ಲಿ ಪಕ್ಷೇತರರು ಪೈಪೋಟಿ ನೀಡಲಿದ್ದಾರೆ. ವಾರ್ಡ್ ೧೬ರಲ್ಲಿ ಬಿಜೆಪಿಗೆ ಅವರದ್ದೇ ಪಕ್ಷದಿಂದ ಉಚ್ಚಾಟಿತಗೊಂಡವರು ಕಣದಲ್ಲಿದ್ದು ಕುತೂಹಲ ಮೂಡಿಸಿದೆ.

ಸಮಸ್ಯೆಗಳಿಗಿಲ್ಲ ಪರಿಹಾರ
೧೭,೦೫೩ ಜನಸಂಖ್ಯೆ ಹೊಂದಿದ ಪಟ್ಟಣದಲ್ಲಿ ಜಾನುವಾರು ಸಂತೆ ಮೂಲಕ ಕೋಟ್ಯಂತರ ವಹಿವಾಟು ನಡೆಯುತ್ತಿದ್ದರೂ ಶಿಸ್ತುಬದ್ಧ ಯೋಜನೆ ರೂಪಿಸದೆ ಹಲವು ಸಮಸ್ಯೆಗಳು ಜೀವಂತವಾಗಿರುವುದಕ್ಕೆ ನಾಗರಿಕರ ವಲಯದಲ್ಲಿ ತೀವ್ರ ಅಸಮಾಧಾನವಿದೆ. ಒಳಚರಂಡಿ, ಸ್ಮಶಾನ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ ಘಟಕ, ಕೆರೆ ಮೂಲೆಗುಂಪು, ಒಳರಸ್ತೆಗಳಲ್ಲಿ ಸುಧಾರಣೆ ಕಾಣದಿರುವುದು, ಮಳೆಗಾಲದಲ್ಲಿ ತೊಂದರೆಗೊಳಗಾಗುವ ಜನವಸತಿ ಪ್ರದೇಶ ಹೀಗೆ ಹಲವು ಸಮಸ್ಯೆಗಳಿದ್ದರೂ ಪರಿಹಾರವಾಗುತ್ತಿಲ್ಲ ಎಂಬ ದೂರುಗಳಿದ್ದು ನೂತನ ಆಡಳಿತ ಮಂಡಳಿ ಇವುಗಳತ್ತ ಗಮನಿಸಬೇಕು ಎಂಬುದು ಜನರ ಆಶಯವಾಗಿದೆ.

ಹೊಸ ವರ್ಷಕ್ಕೆ ಹೊಸ ಹುರುಪಿನೊಂದಿಗೆ ಹೊಸ ಯೋಚನೆ-ಯೋಜನೆಯೊಂದಿಗೆ ನೂತನ ಸದಸ್ಯರು ಬರುವಂತಾಗಲಿ. ಚುನಾವಣೆ ಗುಂಗಿನಿಂದ ಹೊರಬಂದು ಪಟ್ಟಣದ ನಾಗರಿಕರಿಗೆ ಮೂಲ ಸೌಲಭ್ಯ ಒದಗಿಸುವತ್ತ ಚಿಂತನೆ ನಡೆಸಲಿ. ಅಧಿಕಾರದ ಆಸೆಗೆ ಕಚ್ಚಾಡದೆ, ಸಭೆಯ ಕಲಾಪಗಳನ್ನು ಕಳೆದ ೫ ವರ್ಷದಲ್ಲಿ ವ್ಯರ್ಥ ಮಾಡಿದಂತಾಗದೆ ಅಭಿವೃದ್ಧಿಪರ ಕೆಲಸ ಮುಂದುವರೆಯಲಿ. ಆಡಳಿತಕ್ಕೆ ಅಧಿಕಾರಿ ವರ್ಗ ಸಾಥ್ ನೀಡಲಿ ಎಂಬುದು ನಾಗರಿಕರ ಮಾತಾಗಿದೆ.

ಹಿರಿ, ಕಿರಿಯರ ಸಮ್ಮಿಳನ
ಪಟ್ಟಣದಲ್ಲಿನ ೧೬ ವಾರ್ಡ್ಗಳಿಂದ ಬಿಜೆಪಿಯ ೧೫, ಕಾಂಗ್ರೆಸ್‌ನಿಂದ ೧೩, ಜೆಡಿಎಸ್‌ನಿಂದ ೧ ಹಾಗೂ ಪಕ್ಷೇತರರು ೧೨ ಜನ ಕಣದಲ್ಲಿದ್ದಾರೆ. ಇವರಲ್ಲಿ ಅತಿ ಕಿರಿಯ ವಯಸ್ಸಿನವರೆಂದರೆ ವಾರ್ಡ್ ೧೧ ಹಾಗೂ ೧೨ಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳು. ಅತಿ ಹಿರಿಯ ಜೀವಿ ಎಂದರೆ ವಾರ್ಡ್ ೧೧ಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಅಂದಾನಪ್ಪ ಗುಡ್ಡದ. ಇದರೊಂದಿಗೆ ೧೮ ಸ್ಪರ್ಧಿಗಳು ೩೦-೪೦ ವಯಸ್ಸಿನವರಿದ್ದರೆ, ಐವರು ಮಧ್ಯ ವಯಸ್ಕರಾಗಿದ್ದಾರೆ. ಉಳಿದಂತೆ ೫೦-೭೦ ವರ್ಷದೊಳಗಿನ ೬ ಜನ ಆಕಾಂಕ್ಷಿಗಳು ಕಣದಲ್ಲಿ ಉಳಿದಿದ್ದಾರೆ.

ರೆಬಲ್ ಆದ ತತ್ರಾಣಿ ಕುಟುಂಬ
ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪಪಂ ಅಧ್ಯಕ್ಷ ಗಾದಿಗೇರಿದ ಸುಜಾತಾ ತತ್ರಾಣಿ, ಅವರ ಅತ್ತೆ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ತತ್ರಾಣಿ ಹಾಗೂ ಪುತ್ರ ಮಹಾಂತೇಶ ತತ್ರಾಣಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸಿಡಿದೆದ್ದು ಪಕ್ಷೇತರರಾಗಿ ಕಣದಲ್ಲಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿ ವೈ.ಎಸ್.ಬಂಡವಡ್ಡರ ಸಹ ಕಣದಲ್ಲಿ ಉಳಿದಿದ್ದು ಫಲಿತಾಂಶದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನಲಾಗಿದೆ. ೧೩ ವಾರ್ಡ್ಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳಿದ್ದು ಕನಿಷ್ಟ ೧೨ ಸ್ಥಾನ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ಗೆ ಬಂಡಾಯ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.

ಅದೃಷ್ಠ ಪರೀಕ್ಷೆಗಿಳಿದ ಮಾಜಿಗಳು
ಮೂವರು ಗ್ರಾಪಂ ಮಾಜಿ ಅಧ್ಯಕ್ಷರು, ಒಬ್ಬ ಮಾಜಿ ಸದಸ್ಯ, ಇಬ್ಬರು ಪಪಂ ಮಾಜಿ ಅಧ್ಯಕ್ಷರು, ಒಬ್ಬ ಪಪಂ ಸದಸ್ಯ, ಕಳೆದ ಬಾರಿ ಸ್ಪರ್ಧಿಸಿ ಪರಾಜಿತಗೊಂಡ ಇಬ್ಬರು ಅಭ್ಯರ್ಥಿಗಳು ಈ ಬಾರಿ ಅದೃಷ್ಠದ ಪರೀಕ್ಷೆಗಿಳಿದಿದ್ದಾರೆ. ಇವರಲ್ಲಿ ಮೂವರು ಮಾಜಿಗಳು ಕಾಂಗ್ರೆಸ್ ಪಕ್ಷದ ಸೂಚಿತ ಅಭ್ಯರ್ಥಿಗಳ ವಾರ್ಡ್ನಲ್ಲಿ ಕಣಕ್ಕಿಳಿದಿರುವುದು ಕಾಂಗ್ರೆಸ್‌ಗೆ ತಲೆಬಿಸಿಯಾಗಿದೆ ಎನ್ನಲಾಗಿದೆ.

ಕಳೆದ ಚುನಾವಣೆಯಲ್ಲಿ ಕೊನೆಯ ಅವಧಿಯಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ದೊರೆಯಿತು. ಜನ ನೀಡಿದ ಸ್ಪಲ್ಪ ಅವಧಿಯಲ್ಲಿ ಶಾಸಕರ ಕಾಳಜಿ ಮೇರೆಗೆ ಜನತೆಗೆ ಮೂಲ ಸೌಲಭ್ಯ ಒದಗಿಸಿದ್ದೇವೆ. ಈ ಬಾರಿಯೂ ಜನ ನಮ್ಮ ಮೇಲೆ ವಿಶ್ವಾಸವಿಟ್ಟು ಪೂರ್ಣ ಬಹುಮತ ನೀಡುತ್ತಾರೆ ಎಂಬ ವಿಶ್ವಾಸವಿದೆ.
ಯಮನಪ್ಪ ನಾಗರಾಳ, ಅಧ್ಯಕ್ಷರು, ನಗರ ಬಿಜೆಪಿ ಘಟಕ.

";