ಮಾ.೩೦ರ ವರೆಗೆ ತಡೆಯಾಜ್ಞೆ
ನಿಮ್ಮ ಸುದ್ದಿ ಬೆಂಗಳೂರು
ಮಾನಹಾನಿಕರ ವರದಿ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ಸರಕಾರದ ೬ ಜನ ಸಚಿವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ನಂತರ ಇನ್ನೂ ಹಲವು ಸಚಿವರ ಸಿಡಿಗಳಿವೆ ಎಂಬ ಗುಮಾನಿ ರಾಜ್ಯಾದ್ಯಂತ ಹಬ್ಬಿತ್ತು. ಜತೆಗೆ ಹಲವು ಸಾಮಾಜಿಕ ಕಾರ್ಯಕರ್ತರು ತಮ್ಮ ಬಳಿ ಇನ್ನೂ ಕೆಲ ಸಚಿವರ ಸಿಡಿಗಳಿವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಹೀಗಾಗಿ ರಮೇಶ ಜಾರಕಿಹೊಳಿ ಅವರೊಂದಿಗೆ ಗುರ್ತಿಸಿಕೊಂಡಿದ್ದ ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾದ ಡಾ.ಕೆ.ಸುಧಾಕರ, ಎಚ್.ಟಿ.ಸೋಮಶೇಖರ, ಭೈರತಿ ಬಸವರಾಜ, ಬಿ.ಸಿ.ಪಾಟೀಲ ಹಾಗೂ ಶಿವರಾಮ ಹೆಬ್ಬಾರ ಅವರು ತಮ್ಮ ವಿರುದ್ಧ ಯಾವುದೇ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ತಡೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಶನಿವಾರ ಅರ್ಜಿಯ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ನ ನ್ಯಾಯಾಧೀಶ ಬಿ.ಎಸ್.ವಿಜಯಕುಮಾರ ಅವರ ನ್ಯಾಯಪೀಠ ೬ ಸಚಿವರ ಅರ್ಜಿಯನ್ನು ಪುರಸ್ಕರಿಸಿ ಮಾರ್ಚ್ ೩೦ರವರೆಗೆ ಮಾನಹಾನಿ ವರದಿ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದೆ.
ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ನಂತರ ಇನ್ನು ಹಲವು ಸಚಿವರ ಸಿಡಿ ಬಿಡುಗಡೆಯಾಗಲಿವೆ ಎಂದು ಹೇಳಲಾಗಿತ್ತು. ಇದೇ ಸಂದರ್ಭದಲ್ಲಿ ತಮ್ಮ ತೇಜೋವಧೆಗಾಗಿ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿ ಸಚಿವರು ಕೋರ್ಟ್ ಮೊರೆ ಹೋಗಿದ್ದರು.