ನಿಮ್ಮ ಸುದ್ದಿ ಬಾಗಲಕೋಟೆ
ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಮಗ್ರ ನೀರಾವರಿ ಅಭಿವೃದ್ದಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಲ್ಲಿ ಹೆರಕಲ್ ದಕ್ಷಿಣ ಏತ ನೀರಾವರಿ ಯೋಜನೆಯ ಪಶ್ಚಿಮ ಮುಖ್ಯ ಕಾಲುವೆಯಡಿಯಲ್ಲಿ ಬರುವ ವಿತರಣಾ ಉಪ ಕಾಲುವೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಹೆರಕಲ್ ಏತ ನೀರಾವರಿ ಯೋಜನೆಯ ಮುಂದುವರಿದ ಭಾಗವಾದ ಈ ಉಪ ಕಾಲುವೆಗಳ ನಿರ್ಮಾಣ ಕಾಮಗಾರಿಯಿಂದ 20 ಗ್ರಾಮಗಳಿಗೆ ಒಟ್ಟು 10 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಒದಗಲಿದೆ. ಇದಕ್ಕಾಗಿ 71.89 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ ಎಂದರು.
ಈ ಕಾರ್ಯ ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ನೀರಾವರಿ ಸಚಿವರಾಗಿದ್ದಾಗ ಜನವರಿ 7, 2013 ರಂದು ಮಂಜೂರು ಮಾಡಲಾಗಿತ್ತು. ಅನಿವಾರ್ಯ ಕಾರಣದಿಂದ ಸ್ಥಗಿತಗೊಂಡಿದ್ದು, ನಂತರ 2019ರಲ್ಲಿ ನಮ್ಮ ಸರಕಾರ ಬಂದಾಗ ಸಂಕಟಗಳ ಸರಮಾಲೆಯಿಂದಾಗಿ ಒಂದೆಡೆ ಪ್ರವಾಹ, ಬರ, ಕೊರೋನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಕೂಡಾ ಅಭಿವೃದ್ದಿ ಕಾರ್ಯಗಳು ನಿರಂತರವಾಗಿ ನಡೆದಿವೆ. ರಾಜ್ಯದ ನೀರಾವರಿ ಸಮಗ್ರ ಅಭಿವೃದ್ದಿಗಾಗಿ 1 ಲಕ್ಷ 5 ಸಾವಿರ ಕೋಟಿ ರೂ.ಗಳ ಕಾಮಗಾರಿಗೆ ಹಿಂದಿನ ಸರಕಾರ ಹಾಗೂ ಇಂದಿನ ಸರಕಾರ ಮಂಜೂರಾತಿ ನೀಡಿದ್ದವು. ಸಮಗ್ರ ನೀರಾವರಿಗೆ ರಾಜ್ಯದಲ್ಲಿ ಲಭ್ಯವಿರುವ ನೀರನ್ನು ಉಪಯೋಗ ಮಾಡಿಕೊಳ್ಳಬೇಕಾದರೆ ನಮಗೆ 2.5 ಲಕ್ಷ ಕೋಟಿ ರೂ.ಗಳು ಬೇಕಾಗುತ್ತದೆ. ಆಗ 20 ಲಕ್ಷ ಹೆಕ್ಟೆರ್ ಭೂಮಿ ನೀರಾವರಿಯಾಗಲಿದೆ ಎಂದರು.
ಕೃಷ್ಣಾ ಮೇಲ್ದಂಡ ಯೋಜನೆಗೆ ಸಂಬಂಧಿಸಿದಂತೆ ನೀರು ಹಂಚಿಕೆ ವಿಷಯದಲ್ಲಿ ಮಹಾರಾಷ್ಟ್ರ, ಆಂದ್ರ, ತೆಲಂಗಾಣದವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕೋರ್ಟಿನಲ್ಲಿ ಪ್ರಕರಣ ಇರುವದರಿಂದ 130 ಟಿ.ಎಂ.ಸಿ ನೀರನ್ನು ಸಂಪೂರ್ಣ ಬಳಕೆ ಮಾಡುತ್ತಿಲ್ಲ. ಆದರೆ ತೀರ್ಪು ನಮ್ಮಪರ ಬರುವದೆಂಬ ಆಶೆಭಾವನೆ ವ್ಯಕ್ತಪಡಿಸಿದರು. 130 ಟಿ.ಎಂ.ಸಿ ನೀರನ್ನು ಸಂಪೂರ್ಣ ಬಳಕೆ ಮಾಡಿದಲ್ಲಿ 15 ಲಕ್ಷ ನೀರಾವರಿಗೆ ಒಳಪಡಲಿದೆ ಎಂದರು.
ಬೊಮ್ಮಾಯಿ ಅವರು ನೀರಾವರಿ ಮಂತ್ರಿಯಾಗಿದ್ದ ನೀರಾವರಿ ಬಗ್ಗೆ ವಿಶೇಷ ಕಳಕಳಿ ಇರುವದರಿಂದ ನೀರು ನಿಲ್ಲಿಸಲು ಅನುಮತಿ ದೊರೆತರೆ ಇದರಿಂದ 20 ಹಳ್ಳಿ ಸ್ಥಳಾಂತರ 75 ಸಾವಿರ ಎಕರೆ ಮುಳುಗಡೆ ಆಗಲಿದ್ದು, ನಮಗೆ 1.32 ಲಕ್ಷ ಎಕರೆ ಭೂಮಿ ಬೇಕಾಗುತ್ತದೆ. ಇದರಲ್ಲಿ ಉಳುಗಡೆ ಸಂಸಸ್ಥರಿಗೆ, ಪುನರ್ವಸತಿಗೆ ಹಾಗೂ ಕೆನಲ್ ಸೇರಿದಂತೆ ಇನ್ನೀತರ ಕಾರ್ಯಕ್ಕೆ ಉಪಯೋಗಿಸಲಾಗುತ್ತದೆ. ಇದಕ್ಕಾಗಿ 2.5 ಸಾವಿರ ಕೋಟಿ ರೂ. ಹೆಚ್ಚುವರಿ ಮಂಜೂರು ಮಾಡಲಾಗಿದ್ದು, 2021-22ರ ವರ್ಷದ ಸಂಪೂರ್ಣ ಹಣ ಪುನರ್ವಸತಿ ಮತ್ತು ಪುನರ್‍ನಿರ್ಮಾಣಕ್ಕೆ ವಿನಿಯೋಗಿಸಲಾಗುವುದು ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವ ಸರಕಾರ ಬಂದ ಮೇಲೆ ನಮ್ಮ ಜಿಲ್ಲೆಗೆ 950 ಕೋಟಿ ರೂ. ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಬರುವ ಎಪ್ರೀಲ್ ಮಾಹೆಯಲ್ಲಿ ಇನ್ನು 900 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದು, ಅದನ್ನು ಸಹ ಮಂಜೂರು ಮಾಡುವ ಭರವಸೆ ನೀಡಿದ್ದು, ಇದರಲ್ಲಿ ಅನವಾಲ, ಭಗವತಿ, ಶಿರೂರ ಏತ ನೀರಾವರಿ ಕಾಮಗಾರಿಗಳಲ್ಲದೇ ಕೆರೆ ತುಂಬುವ ಕಾರ್ಯ ನಡೆಯಲಿದೆ. ಜಿಲ್ಲೆಯ ಅತೀ ಮುಖ್ಯವಾದ ನೀರಾವರಿ ಯೋಜನೆ ಸಸಾಲಟ್ಟಿ ಯೋಜನೆ ನೆನೆಗುದ್ದಿಗೆ ಬಿದ್ದಿದ್ದು, ಇದು ಪ್ರಾರಂಭಗೊಂಡರೆ ತೇರದಾಳ, ಜಮಖಂಡಿ, ಮುಧೋಳ ಬೀಳಗಿ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಮಾತನಾಡಿ ಬೀಳಗಿ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವ ನಿಟ್ಟಿನಲ್ಲಿ ಅನೇಕ ನೀರಾವರಿ ಕಾಮಗಾರಿಗಳು ನಡೆಯುತ್ತಿದ್ದು, ಅವುಗಳು ವಿವಿಧ ಹಂತಗಳಲ್ಲಿವೆ. ಎತ್ತರ ಪ್ರದೇಶದಲ್ಲಿ ಇರುವ ಭೂಮಿಗೆ ನೀರಾವರಿಗಾಗಿ 100 ಬೋರವೆಲ್‍ಗಳ ವ್ಯವಸ್ಥೆ, 36 ಕೆರೆ ತುಂಬುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ ತಲಾ 20 ಕೋಟಿ ವೆಚ್ಚದಲ್ಲಿ ಎರಡು 110 ಕೆವಿ ವಿದ್ಯುತ್ ಸ್ಟೇಷನ್ ಮಾಡಲಾಗುತ್ತಿದೆ. ಟ್ರಾನ್ಸ್‍ಫಾರ್ಮರ ಸುಟ್ಟು ಹೋದಲ್ಲಿ 24 ಗಂಟೆಗಳಲ್ಲಿ ಹೊಸ ಟ್ರಾನ್ಸಪಾರಂ ಜೋಡಣೆಗೆ ಟ್ರಾನ್ಸಪಾರಂ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದರು.
ಮೈಸೂರು ಭಾಗದ ಮಾದರಿಯಲ್ಲಿ ಬೀಳಗಿ ಮತಕ್ಷೇತ್ರ ಅಭಿವೃದ್ದಿ ಪಡಿಸುವ ಮೂಲಕ ಪರಿವರ್ತನೆ ಮಾಡಲಾಗುತ್ತಿದೆ. ನೀರಾವರಿ, ಶಿಕ್ಷಣ, ಕೈಗಾರಿಕೆ ಸ್ಥಾಪಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಬೀಳಗಿಯಲ್ಲಿ ಸರಕಾರಿ ಮೆಡಿಕಲ್ ಸ್ಥಾಪನೆಗೆ ಕ್ರಮವಹಿಸಲಾಗುವುದು. ಈ ಭಾಗದಲ್ಲಿ ಆತ್ಮ ನಿರ್ಬರ ಯೋಜನೆಯಡಿ ಕೈಗಾರಿಕೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ 2000 ಎಕರೆ ಭೂಮಿ ಖರೀದಿಸಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ 8 ವಿಮಾನ ನಿಲ್ದಾಣಗಳಿದ್ದು, ಬಾಗಲಕೋಟೆ ಸೇರಿದಂತೆ ರಾಜ್ಯದಲ್ಲಿ ಇನ್ನು 4 ವಿಮಾನ ನಿಲ್ದಾಣ ಆಗಲಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಬಾದಾಮಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿಯ ಅಧ್ಯಕ್ಷ ಮುತ್ತು ದೇಸಾಯಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿದರು. ಕೆರೂರ ಚರಂತಿಮಠದ ಡಾ.ಶಿವುಕುಮಾರ ಶ್ರೀಗಳು ಸಾನಿದ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಪಿಕಾರ್ಡ ಬ್ಯಾಂಕಿನ ಅಧ್ಯಕ್ಷ ಮಹಾಂತೇಶ ಮಮದಾಪೂರ, ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಕುಮಾರ ಜನಾಲಿ ಸೇರಿದಂತೆ ಆನಂದರಾವ ದೇಸಾಯಿ, ಶರತ್ ನಾಡಗೌಡ, ಮಹೇಶ ನಾಡಗೌಡ ಉಪಸ್ಥಿತರಿದ್ದರು.