This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ Sarvodaya and welfare

*ವಲಯ 2 ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ*

ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಮತಗಳೆಲ್ಲವು ಪಥಗಳು ಎನ್ನುವ
ಹೊಸ ಎಚ್ಚರದಲ್ಲಿ ಬದುಕೋಣ. – ಡಾ. ಜಿ.ಎಸ್. ಶಿವರುದ್ರಪ್ಪ

93. ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಎಲ್ಲ ವರ್ಗಗಳ, ಎಲ್ಲ ಪ್ರದೇಶಗಳ ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಅಂತೆಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಅಲ್ಪಸಂಖ್ಯಾತ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಜಾರಿಯಲ್ಲಿರುವ ಯೋಜನೆಗಳನ್ನು ಸರಳ, ಸುಗಮಗೊಳಿಸುವ ಜೊತೆಗೆ ನೂತನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

94. ಕಳೆದ ಆಯವ್ಯಯದಲ್ಲಿ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳನ್ನು ಗುರುತಿಸಿ ಅಂತಹ ತಾಲ್ಲೂಕುಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ಸಂಬಂಧಿಸಿದ ಸೂಚ್ಯಂಕಗಳನ್ನು ರಾಜ್ಯ ಸರಾಸರಿಗಿಂತ ಹೆಚ್ಚು ಮಾಡಲು 3,000 ಕೋಟಿ ರೂ. ಗಳ ಯೋಜನೆಗಳನ್ನು ನಾನು ಘೋಷಿಸಿದ್ದೇನೆ. ಇದರಡಿಯಲ್ಲಿ ತೆಗೆದುಕೊಂಡಿರುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯ ಹಾಗೂ ಅಗತ್ಯ ಮಾನವ ಸಂಪನ್ಮೂಲಗಳನ್ನು ಒದಗಿಸಿ ಸರ್ಕಾರದ ವಿವಿಧ ಸೇವೆಗಳನ್ನು ಜನರಿಗೆ ತಲುಪಿಸಲು ಕ್ರಮವಹಿಸಲಾಗುವುದು.

95. 2022-23ನೇ ಸಾಲಿನಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಬಿಸಿಯೂಟ ತಯಾರಕರು, ಬಿಸಿಯೂಟ ಸಹಾಯಕರು, ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರು, ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳ ಗೌರವಧನ ಹೆಚ್ಚಿಸಲಾಗಿದೆ. ಇದರಿಂದ 4.45 ಲಕ್ಷ ಜನರಿಗೆ ಫಲ ದೊರೆತಿದ್ದು, ಒಟ್ಟು 775 ಕೋಟಿ ರೂ. ಗಳನ್ನು ಪ್ರಸಕ್ತ ವರ್ಷದಲ್ಲಿ ಬಿಡುಗಡೆ ಮಾಡಲಾಗಿದೆ.

96. ಸಮಾಜದ ಏಳಿಗೆಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕತೆ ವಲಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು ಹಾಗೂ ಸಹಾಯಕರು ಮತ್ತು ಗ್ರಂಥಪಾಲಕರ ಸೇವೆಯನ್ನು ಗುರುತಿಸಿ, ಅವರಿಗೆ ನೀಡುವ ಮಾಸಿಕ ಗೌರವಧನವನ್ನು 1,000 ರೂ. ದಂತೆ ಹೆಚ್ಚಿಸಲು ನಿರ್ಧರಿಸಲಾಗಿದೆ.

97. ರಾಜ್ಯದ 10.32 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ 725 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. 2022-23ನೇ ಸಾಲಿನಲ್ಲಿ ಈ ಸೌಲಭ್ಯವನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರು ಹಾಗೂ ಆಟೋರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ 3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯನ್ನು ರಾಜ್ಯದ ಸಿಂಪಿಗರ ಮಕ್ಕಳಿಿಗೂ ವಿಸ್ತರಿಸಲಾಗುವುದು.

98. ರಾಜ್ಯದ ಶಿಕ್ಷಣ ವಲಯದಲ್ಲಿ ಈ ದಿನ ಅವಿಸ್ಮರಣೀಯ ದಿನವಾಗಲಿದೆ. ರಾಜ್ಯದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಹೊಂದಲು ಅನುವು ಮಾಡಿಕೊಡುವ ದೃಷ್ಟಿಯಿಂದ ʻಮುಖ್ಯಮಂತ್ರಿ ವಿದ್ಯಾಶಕ್ತಿʼ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಇದರಡಿಯಲ್ಲಿ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು. ಈ ಉಚಿತ ಉನ್ನತ ಶಿಕ್ಷಣದಿಂದ ರಾಜ್ಯದ 8 ಲಕ್ಷ ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ.

99. ರಾಜ್ಯದಲ್ಲಿ ಈಗಾಗಲೇ 19 ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಸಾರ್ವಜನಿಕ ಬಸ್ಸುಗಳ ಸೇವೆಯನ್ನು ಅವಲಂಬಿಸಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷದಲ್ಲಿ ಸಾರಿಗೆ ನಿಗಮಗಳ ಮೂಲಕಳಿಂದ 100 ಕೋಟಿ ರೂ. ವೆಚ್ಚದಲ್ಲಿ 1,000 ಹೊಸ ಕಾರ್ಯಾಚರಣೆಗಳನ್ನು ಮಾಡಲು ʻಮಕ್ಕಳ ಬಸ್ಸುʼ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ಉದ್ದೇಶಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

100. ರಾಜ್ಯ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ವಿವೇಕ ಯೋಜನೆಯಡಿಯಲ್ಲಿ 7,601 ಶಾಲಾ ಮತ್ತು ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು 1,194 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೇ ಇಲಾಖೆಯ ಇತರೆ ಯೋಜನೆಗಳಡಿ ಹೆಚ್ಚುವರಿಯಾಗಿ 1,955 ಕೊಠಡಿಗಳನ್ನು 382 ಕೋಟಿ ರೂ. ವೆಚ್ಚದಲ್ಲಿ ಅನುಮೋದಿಸಲಾಗಿದೆ. ಒಟ್ಟಾರೆಯಾಗಿ ಹಿಂದಿನ ವರ್ಷದಲ್ಲಿ 1,576 ಕೋಟಿ ರೂ. ಗಳ ವೆಚ್ಚದಲ್ಲಿ 9,556 ಶಾಲಾ ಕಾಲೇಜುಗಳ ಕೊಠಡಿಗಳನ್ನು ನಿರ್ಮಾಣ ಮಾಡಲು ಕೈಗೊಂಡಿರುವ ಈ ಕ್ರಮವು ರಾಜ್ಯದ ಇತಿಹಾಸದಲ್ಲಿ ದಾಖಲೆಯಾಗಿದೆ. ಈ ಎಲ್ಲಾ ಕೆಲಸಗಳು ತ್ವರಿತಗತಿಯಲ್ಲಿ ಮುಂದುವರೆಯುತ್ತಿದ್ದು, ಶೀಘ್ರದಲ್ಲಿಯೇ ಪೂರ್ಣ ಗೊಳಿಸಲಾಗುವುದು.

101. ಉತ್ತಮ ಮೂಲಭೂತ ಸೌಕರ್ಯಗಳು ಮತ್ತು ಸೂಕ್ತ ಕಲಿಕಾ ಸಂಪನ್ಮೂಲಗಳನ್ನು ಮಕ್ಕಳಿಗೆ ಒದಗಿಸಲು ಹೊಸ ಕೇಂದ್ರ ಪುರಸ್ಕೃತ ಯೋಜನೆಯಾದ PM SHRI ಯನ್ನು 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

102. ನರೇಗಾ ಸಂಯೋಜನೆಯೊಂದಿಗೆ 250 ಕೋಟಿ ರೂ. ಅಂದಾಜು ವೆಚ್ಚದಲ್ಲಿ 7,750 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ಸಂಪೂರ್ಣ ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಮಾರ್ಚ್ 2023ರ ಅಂತ್ಯದಲ್ಲಿ 2,169 ಶೌಚಾಲಯಗಳು ಪೂರ್ಣಗೊಳ್ಳಲಿವೆ. ಉಳಿದ 5,581 ಶೌಚಾಲಯಗಳನ್ನು 2023-24ನೇ ಸಾಲಿನಲ್ಲಿ ನಿರ್ಮಿಸಲಾಗುವುದು. ಇದಕ್ಕೆ ಒಟ್ಟು 80 ಕೋಟಿ ರೂ. ಹಂಚಿಕೆ ಮಾಡಿದ್ದು, ಅದರಲ್ಲಿ 50 ಕೋಟಿ ರೂ. ಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒದಗಿಸಲಾಗಿದೆ.
103. ರಾಜ್ಯದ 93 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಒದಗಿಸಲು ಎಲ್ಲಾ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 632 ಕೋಟಿ ರೂ. ಗಳ ವೆಚ್ಚದಲ್ಲಿ ಈ ಕೆಳಗಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು.

a) ಕಳೆದ ವರ್ಷದಲ್ಲಿ 2,284 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದು, ಪ್ರಸಕ್ತ ವರ್ಷದಲ್ಲಿ ಹೆಚ್ಚುವರಿಯಾಗಿ 1,230 ಕೊಠಡಿಗಳ ನಿರ್ಮಾಣ.

b) ಹಳೆಯ ಮತ್ತು ಅಧಿಕ ಮಳೆಯಿಂದಾಗಿ ಹಾನಿಯಾಗಿರುವ 2,777 ಕೊಠಡಿಗಳ ದುರಸ್ತಿ.

c) ಅಧಿಕ ದಾಖಲಾತಿಯಿರುವ ಶಾಲಾ-ಕಾಲೇಜುಗಳಲ್ಲಿ ಹೆಚ್ಚುವರಿ ಶೌಚಾಲಯಗಳ ನಿರ್ಮಾಣ.
d) ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ 260 ತರಗತಿ ಕೊಠಡಿಗಳ ನಿರ್ಮಾಣ.
e) ಆಯ್ದ 60 ತಾಲ್ಲೂಕುಗಳಲ್ಲಿ ತಲಾ ಒಂದು ಪದವಿ ಪೂರ್ವ ಕಾಲೇಜನ್ನು ಗುರುತಿಸಿ ವಿಜ್ಞಾನ ಶಿಕ್ಷಣಕ್ಕಾಗಿ ಅಗತ್ಯ ಸೌಲಭ್ಯ ನೀಡುವ ಮೂಲಕ ಆದರ್ಶ ಪದವಿ ಪೂರ್ವ ಕಾಲೇಜುಗಳ ಅಭಿವೃದ್ಧಿಗೆ ಕ್ರಮ.
f) 30 ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಗಳಲ್ಲಿ Dormitory ನಿರ್ಮಾಣ, 47 ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್ರೂಮ್ ಗಳ ಅಭಿವೃದ್ಧಿ.

104. ಇದರೊಂದಿಗೆ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಹೆಚ್ಚಿಸಿ, ಫಲಿತಾಂಶ ಉತ್ತಮ ಪಡಿಸಲು 135 ಕೋಟಿ ರೂ. ಅನುದಾನದಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುವುದು:

a) ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಆವಿಷ್ಕಾರಾತ್ಮಕ ಮನೋಭಾವ ಬೆಳೆಸಲು 73 ಕರ್ನಾಟಕ ಪಬ್ಲಿಕ್ ಶಾಲೆಗಳು ಮತ್ತು 50 ಆದರ್ಶ ವಿದ್ಯಾಲಯಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ “ʻಸೃಷ್ಟಿʼ” ಟಿಂಕರಿಂಗ್ ಪ್ರಯೋಗಾಲಯಗಳ ಸ್ಥಾಪನೆ.
b) ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊಂದಿಲ್ಲದ 23 ತಾಲ್ಲೂಕುಗಳಲ್ಲಿ ಹೊಸದಾಗಿ ಶಾಲೆಗಳನ್ನು ನಿರ್ಮಿಸಲು ಮತ್ತು ಕಾರ್ಯನಿರ್ವಹಿಸುತ್ತಿರುವ 46 ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಒದಗಿಸಲಾಗುವುದು.
c) ಪ್ರಚಲಿತ ವಿದ್ಯಮಾನಗಳ ಕುರಿತು ಆಸಕ್ತಿ ಹಾಗೂ ಅರಿವು ಹೊಂದಲು ಅನುವಾಗುವಂತೆ 24,347 ಶಾಲೆಗಳಲ್ಲಿ 20 ಕೋಟಿ ರೂ. ಅನುದಾನದಲ್ಲಿ ಪುಸ್ತಕ, ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಒದಗಿಸುವ ಮೂಲಕ ಗ್ರಂಥಾಲಯಗಳ ಬಲವರ್ಧನೆ ಹಾಗೂ ರೀಡಿಂಗ್ ಕಾರ್ನರ್ಗಳನ್ನು ಸ್ಥಾಪಿಸಲಾಗುವುದು.
d) ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಜೆ-ಪಾಲ್ ಲ್ಯಾಬ್ ಸಹಯೋಗದೊಂದಿಗೆ ಪರಿಹಾರಾತ್ಮಕ ಚಟುವಟಿಕೆ ʻಅಭ್ಯುದಯʼ ಕಾರ್ಯಕ್ರಮ ಅನುಷ್ಠಾನ.

105. ಬೀದರ್, ಹಾವೇರಿ, ಚಾಮರಾಜನಗರ, ಬಾಗಲಕೋಟೆ, ಕೊಡಗು, ಕೊಪ್ಪಳ ಮತ್ತು ಹಾಸನ ಜಿಲ್ಲೆಗಳಲ್ಲಿ 7 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಮತ್ತು ಮಂಡ್ಯ ವಿಶ್ವವಿದ್ಯಾಲಯವನ್ನು ಸಂಯೋಜಿತ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಲಾಗಿದೆ. ಈ ವರ್ಷದಲ್ಲಿ ಚಿಕ್ಕಮಗಳೂರಿನಲ್ಲಿ ಹೊಸ ವಿಶ್ವವಿದ್ಯಾಲಯವನ್ನು ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಮತ್ತು ಕಡಿಮೆ ಮಾನವ ಸಂಪನ್ಮೂಲಗಳನ್ನು ಒಳಗೊಂಡಂತೆ ಸ್ಥಾಪಿಸಲಾಗುವುದು ಮತ್ತು ಶಿಗ್ಗಾಂವ್ ತಾಲ್ಲೂಕಿನ ಬಂಕಾಪುರದಲ್ಲಿರುವ ಪಾಲಿಟೆಕ್ನಿಕನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನಾಗಿ ಉನ್ನತೀಕರಿಸಲಾಗುವುದು.

106. ಕಳೆದ ಆಯವ್ಯಯದಲ್ಲಿ ಘೋಷಿಸಿದಂತೆ ಮುಂದಿನ 5 ವರ್ಷಗಳಲ್ಲಿ ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (KIT) ಗಳಾಗಿ ಉನ್ನತೀಕರಿಸಲು ಬೆಂಗಳೂರು, ಹಾವೇರಿ, ಹಾಸನ, ಕೆ.ಆರ್.ಪೇಟೆ, ತಳ್ಕಲ್, ರಾಮನಗರ ಹಾಗೂ ಕಾರವಾರ ಸರ್ಕಾರಿ ಎಂಇಂಜಿನಿಯರಿಂಗ್ ಕಾಲೇಜುಗಳನ್ನು ಗುರುತಿಸಲಾಗಿದೆ. ಪ್ರೊ. ಸಡಗೋಪನ್ ನೇತೃತ್ವದ ತಜ್ಞರ ಸಮಿತಿಯು ಕೆಐಟಿಗಳಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಕುರಿತು ವರದಿ ಸಲ್ಲಿಸಿದೆ. ಸದರಿ ಸಮಿತಿಯ ಶಿಫಾರಸ್ಸಿನನ್ವಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶಕ್ಕಾಗಿ 50 ಕೋಟಿ ರೂ. ಗಳನ್ನು ನೀಡಲಾಗಿದೆ.

107. ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳು ಹಾಗೂ ಪಠ್ಯ ವಿಷಯಗಳನ್ನು ಮುಂದಿನ ಒಂದು ವರ್ಷದಲ್ಲಿ ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು.

108. ವಿಜ್ಞಾನ ಮತ್ತು ತಂತ್ರಜ್ಞಾನದ ವೃತ್ತಿಪರ ಕೋರ್ಸ್ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದಕ್ಕೆ ರಾಜ್ಯದಲ್ಲಿ 100 ಆಯ್ದ ಪದವಿ ಕಾಲೇಜುಗಳಲ್ಲಿ ಪ್ರೊ. ಸಿ.ಎನ್.ಆರ್. ರಾವ್ ವಿಜ್ಞಾನ ಕಾರ್ಯಕ್ರಮದಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಗುವುದು.

109. ʻಹಳ್ಳಿ ಮುತ್ತುʼ ಎಂಬ ಯೋಜನೆಯಡಿ ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಾಲಾ ಶಿಕ್ಷಣವನ್ನು ಪೂರೈಸುವ 500 ಅತ್ಯುತ್ತಮ ವಿದ್ಯಾರ್ಥಿಗಳಿಗೆ ಅವರು CET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವೃತ್ತಿಪರ ಶಿಕ್ಷಣದ ಸಂಪೂರ್ಣ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಭರಿಸಲಾಗುವುದು.

110. ಸಾರ್ವಜನಿಕ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆಯನ್ನು ಉತ್ತಮ ಪಡಿಸಲು 10 ಸುಶಾಸನ ಸೂಚ್ಯಂಕಗಳನ್ನು ರಚಿಸಲಾಗಿದೆ. ಇದರನ್ವಯ ಅತ್ಯುತ್ತಮ ಸಾಧನೆ ಮಾಡುವ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷ ರೂ. ಗಳಂತೆ ಪ್ರೋತ್ಸಾಹಧನ ನೀಡಲಾಗುವುದು.

111. ಬೆಂಗಳೂರು ನಗರದ ಕೇಂದ್ರ ಭಾಗದ 5 ಕಿ.ಮೀ. ವ್ಯಾಪ್ತಿಯೊಳಗಿರುವ ಪಾರಂಪರಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಪ್ರದೇಶವನ್ನು ಪಾರಂಪರಿಕ ಮತ್ತು ಶೈಕ್ಷಣಿಕ ಜಿಲ್ಲೆಯಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಯಸಾಧ್ಯತೆ ಅಧ್ಯಯನ ಮಾಡಲಾಗುವುದು.

112. ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ Academic Bank of Credits ಮತ್ತು Digilocker ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗುವುದು. ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಸರಳ ಹಾಗೂ ಪಾರದರ್ಶಕ ಪ್ರವೇಶಾವಕಾಶಕ್ಕೆ ಏಕರೂಪ ವ್ಯವಸ್ಥೆ ಕಲ್ಪಿಸಲಾಗುವುದು.

113. ಪ್ರತಿ ಜಿಲ್ಲೆಯಲ್ಲಿ ಒಂದರಂತೆ, ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ಗಳಿಗೆ ʻವೃದ್ಧಿʼ ಯೋಜನೆಯಡಿ ತಲಾ 2 ಕೋಟಿ ರೂ. ನಂತೆ ಒಟ್ಟು 124 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಇವುಗಳನ್ನು ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳಾಗಿ ರೂಪಿಸಲಾಗುವುದು.

114. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಅನ್ನು ಪ್ರಾರಂಭಿಸಲಾಗುವುದು.

115. ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ದೇಶಕ್ಕಾಗಿ ಸಮರ್ಪಣಾ ಭಾವವನ್ನು ಮೂಡಿಸಲು ರಾಜ್ಯದಲ್ಲಿ ಈ ವರ್ಷ 2 ಹೊಸ ಎನ್.ಸಿ.ಸಿ. ಘಟಕಗಳನ್ನು ಸ್ಥಾಪಿಸಲಾಗುವುದು.

116. ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಉನ್ನತ ಶಿಕ್ಷಣವನ್ನು ಬಲಪಡಿಸಲು ಒಟ್ಟು 125 ಕೋಟಿ ರೂ. ವೆಚ್ಚದಲ್ಲಿ ಈ ಕೆಳಕಂಡ ಯೋಜನೆಗಳನ್ನು ರೂಪಿಸಲಾಗಿದೆ.

a) ಕೊಠಡಿಗಳು, ಶೌಚಾಲಯಗಳು ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ನಿರ್ಮಾಣ ಮಾಡಲಾಗುವುದು.
b) “`ವಿದ್ಯಾವರ್ಧಿನಿ”’ ಯೋಜನೆಯಡಿ ಎಲ್ಲಾ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಹಾಗೂ ಶೈಕ್ಷಣಿಕ ಉಪಕರಣಗಳನ್ನು ಒದಗಿಸಲಾಗುವುದು.
c) ವಿದ್ಯಾರ್ಥಿನಿಯರ ದೈಹಿಕ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಎಲ್ಲಾ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿ ನೀಡಲಾಗುವುದು.

117. ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ’ ಎಂಬ ಧ್ಯೇಯದೊಂದಿಗೆ ಆರೋಗ್ಯ ಸೇವೆಗಳನ್ನು ತಳಹಂತದಲ್ಲಿಯೂ ಬಲಪಡಿಸಲು ಹಾಗೂ ಜನರಿಗೆ ಸ್ಥಳೀಯವಾಗಿ, ಸುಲಭವಾಗಿ ತಜ್ಞರ ಸೇವೆಯನ್ನು ಒದಗಿಸಲು 2022-23ನೇ ಸಾಲಿನಲ್ಲಿ ಘೋಷಿಸಿದಂತೆ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 53 ಸಮುದಾಯ ಆರೋಗ್ಯ ಕೇಂದ್ರಗಳು, 26 ತಾಲ್ಲೂಕು ಆಸ್ಪತ್ರೆ ಹಾಗೂ ಒಂದು1 ಜಿಲ್ಲಾ ಆಸ್ಪತ್ರೆಯನ್ನು ಉನ್ನತೀಕರಿಸಿ, ಲೋಕಾರ್ಪಣೆ ಮಾಡಲಾಗಿದ್ದು, ಉಳಿದ ಕಾಮಗಾರಿಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿವೆ. ಇದಕ್ಕಾಗಿ ಒಟ್ಟು 781 ಕೋಟಿ ರೂ. ಗಳನ್ನು ಒದಗಿಸಲಾಗಿದೆ. ರಾಜ್ಯದ 45 ತಾಲ್ಲೂಕು ಆಸ್ಪತ್ರೆಗಳನ್ನು ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಮ್ಯಾಪಿಂಗ್ ಮಾಡುವ ಮೂಲಕ ಸ್ಥಳೀಯವಾಗಿ ಹೃದ್ರೋಗ ಚಿಕಿತ್ಸೆ ಒದಗಿಸಲು ಕ್ರಮ ವಹಿಸಲಾಗಿದೆ.

118. ರಾಜ್ಯದ ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್ ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದು, 350272 ನಮ್ಮ ಕ್ಲಿನಿಕ್ ಗಳು ಕಾರ್ಯಾರಂಭ ಮಾಡಿವೆ. ಕಳೆದ ವರ್ಷದಲ್ಲಿ ಅನುಮೋದನೆಯಾಗಿರುವ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳಲ್ಲಿ 53 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು ಪೂರ್ಣಗೊಳಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇವು ಮಹತ್ತರ ಹೆಜ್ಜೆಗಳಾಗಿವೆ.

119. ತಾಲ್ಲೂಕು ಆಸ್ಪತ್ರೆಗಳಿಲ್ಲದ ಖಾನಾಪುರ, ಆನೇಕಲ್, ಶಿರಹಟ್ಟಿ, ಶೃಂಗೇರಿ, ಯಳಂದೂರು, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನಾಗಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು.

120. PM-ABHIM ಅಡಿಯಲ್ಲಿ ತೃತೀಯ ಹಂತದ ಆರೈಕೆಯನ್ನು ಒದಗಿಸಲು ಕೋಲಾರ, ಬಾಗಲಕೋಟೆ, ಯಾದಗಿರಿ, ಮಂಗಳೂರುಗದಗ, ಚಿಕ್ಕಮಗಳೂರು, ರಾಮನಗರ, ವಿಜಯನಗರ ಮತ್ತು ದೊಡ್ಡಬಳ್ಳಾಪುರ ಆಸ್ಪತ್ರೆಗಳಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಗಳನ್ನು ಹಾಗೂ ತುಮಕೂರು ಮತ್ತು ಬೆಂಗಳೂರಿನಲ್ಲಿ 100 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ಗಳನ್ನು ಸ್ಥಾಪಿಸಲಾಗುವುದು.

121. ರಾಜ್ಯದಲ್ಲಿ ತಾಯಿಮರಣ ಹಾಗೂ ಶಿಶುಮರಣ ದರವನ್ನು ಇಳಿಸಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದು, ಇದರಿಂದಾಗಿ ಕಳೆದ 3 ವರ್ಷದಲ್ಲಿ ತಾಯಿಮರಣ ದರವನ್ನು ಪ್ರತಿ ಲಕ್ಷಕ್ಕೆ 83 ರಿಂದ 69 ಕ್ಕೆ ಮತ್ತು ಶಿಶುಮರಣ ದರವನ್ನು ಪ್ರತಿ ಸಾವಿರಕ್ಕೆ 29 ರಿಂದ 19 ಕ್ಕೆ ಇಳಿಸಲು ಸಾಧ್ಯವಾಗಿರುತ್ತದೆ. ಗರ್ಭಿಣಿಯರಿಗೆ, ತಾಯಂದಿರಿಗೆ ಮತ್ತು ನವಜಾತ ಶಿಶುಗಳಿಗೆ ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡುವ ದೃಷ್ಟಿಯಿಂದ ರಾಜ್ಯದಲ್ಲಿ 10 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು 165 ಕೋಟಿ ರೂ. ಗಳಲ್ಲಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸಲಾಗುವುದು.

122. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

123. ರಾಜ್ಯದಲ್ಲಿ ರಕ್ತಹೀನತೆಯ ದೊಡ್ಡ ಸವಾಲನ್ನು ಎದುರಿಸಲು ಬಹು ಆಯಾಮಗಳ ದೃಷ್ಟಿಕೋನದೊಂದಿಗೆ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ. ಇದರಡಿಯಲ್ಲಿ Life Cycle Approach ಮೂಲಕ ಆರೋಗ್ಯ ಪುಷ್ಟಿ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಯಡಿಯಲ್ಲಿ ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಮತ್ತು ಸಂತಾನೋತ್ಪತ್ತಿ ವಯಸ್ಸಿನ (15-49 ವರ್ಷಗಳು) ಮಹಿಳೆಯರಲ್ಲಿ ರಕ್ತಹೀನತೆ ಹಾಗೂ ಅಪೌಷ್ಟಿಕತೆಯನ್ನು ನಿವಾರಿಸಲು ಉದ್ದೇಶಿತ ಪರೀಕ್ಷೆ, ಚಿಕಿತ್ಸೆ, ಜನಜಾಗೃತಿ ಹಾಗೂ ತರಬೇತಿಗೆ 100 ಕೋಟಿ ರೂ. ಗಳನ್ನು ಒದಗಿಸಲಾಗಿದೆ.

124. ʻʼಮನೆ ಮನೆಗೆ ಆರೋಗ್ಯʼ ಎಂಬ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಗ್ರಾಮೀಣ ಜನತೆಗೆ 2023-24ನೇ ಸಾಲಿನಲ್ಲಿ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜಿಸಲಾಗುವುದು. ಇದರಿಂದ ತೀವ್ರವಾದ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಜನರ ಆರೋಗ್ಯ ಕಾಪಾಡುವ ಗುರಿ ಹೊಂದಲಾಗಿದೆ. ಇದರೊಂದಿಗೆ ಈ ಯೋಜನೆಯಡಿ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸಲು ಸಹ ಕ್ರಮವಹಿಸಲಾಗುವುದು.

125. ಅತಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಔಷಧಿಗಳನ್ನು ಒದಗಿಸುತ್ತಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು ರಾಜ್ಯಾದ್ಯಂತ ಇನ್ನಷ್ಟು ಹೆಚ್ಚಿಸಲಾಗುವುದು.

126. ಜನಸಾಮಾನ್ಯರ ಮೆದುಳಿನ ಆರೋಗ್ಯ ಕಾಪಾಡಲು ಮತ್ತು ಅದರ ಬಗ್ಗೆ ಅರಿವು ಮೂಡಿಸಲು ನಿಮ್ಹಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಮೆದುಳು ಆರೋಗ್ಯ ಯೋಜನೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು.

127. ಎಲ್ಲಾ ಜಿಲ್ಲೆಗಳಲ್ಲಿ Hand Held X-ray ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ. ಪ್ರಸ್ತಾಪಿಸಲಾಗಿದೆ.

128. ಕ್ಯಾನ್ಸರ್ ರೋಗವು ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಸಕಾಲಿಕ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚಲು ʻಜೀವಸುಧೆʼ ಎಂಬ ವ್ಯಾಪಕ ತಪಾಸಣಾ (Testing and Screening) ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜಿಸಲಾಗುವುದು. ಅಗತ್ಯವಿರುವವರಿಗೆ ಹೆಚ್ಚಿನ ಚಿಕಿತ್ಸೆಯನ್ನು ಪಡೆಯಲು ತೃತೀಯ ಆರೈಕೆ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಕ್ಯಾನ್ಸರ್ ಪತ್ತೆಗೆ ಅಗತ್ಯವಿರುವ ಸಾಧನಗಳ ಖರೀದಿಗಾಗಿ 12 ಕೋಟಿ ರೂ. ಅನುದಾನ ಒದಗಿಸಲಾಗುವುದು.

129. ಹಿಂದಿನ ಆಯವ್ಯಯದಲ್ಲಿ ಘೋಷಿಸಿದಂತೆ ಉಚಿತ ಡಯಾಲಿಸಿಸ್ ಸೇವೆಯನ್ನು 30,000 ಡಯಾಲಿಸಿಸ್ ಸೈಕಲ್ ಗಳಿಂದ 60,000 ಸೈಕಲ್ ಗಳಿಗೆ ಹೆಚ್ಚಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಡಯಾಲಿಸಿಸ್ ಸೈಕಲ್ ಗಳಿಗೆ ಹೆಚ್ಚಿಸಲಾಗುವುದು.

130. ಮಕ್ಕಳ ಆರೋಗ್ಯದ ರಕ್ಷಣೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆರಡು ಬಾರಿ ನವಜಾತ ಶಿಶುಗಳಿಂದ 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ʻ“ವಾತ್ಸಲ್ಯʼ” ಯೋಜನೆ ರೂಪಿಸಲಾಗುವುದು. ಇದರ ಮೂಲಕ ಮಕ್ಕಳಲ್ಲಿ ಆರೋಗ್ಯ ನ್ಯೂನತೆಗಳು ಹಾಗೂ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಮಕ್ಕಳಲ್ಲಿ ಸಂಭಾವ್ಯ ದೈಹಿಕ ನ್ಯೂನತೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಸ್ವಸ್ಥ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಇದು ಮಹತ್ವಪೂರ್ಣ ಕ್ರಮವಾಗಿದೆ.

131. ರಾಜ್ಯದ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆರಿಗೆಯಾದ ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಾರಿಗೆ ಸೌಲಭ್ಯ ಕಲ್ಪಿಸಲು 12.5 ಕೋಟಿ ರೂ. ವೆಚ್ಚದಲ್ಲಿ ಹೊಸ ʻ”ನಗು ಮಗುʼ” ವಾಹನಗಳನ್ನು ಒದಗಿಸಲಾಗುವುದು.

132. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಹಾಗೂ ಸ್ಥಳೀಯವಾಗಿಯೇ ಪ್ರಯೋಗಾಲಯಗಳ ಸೇವೆಗಳನ್ನು ಒದಗಿಸಲು 129 ತಾಲ್ಲೂಕು ಪ್ರಯೋಗಾಲಯಗಳನ್ನು, ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯಗಳನ್ನು ಹಾಗೂ ಬೆಂಗಳೂರಿನಲ್ಲಿ ರಾಜ್ಯ ರೆಫರಲ್ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.

133. ಆರೋಗ್ಯ ಇಲಾಖೆಯ ಸೇವೆಗಳನ್ನು ಇನ್ನಷ್ಟು ಸರಳ ಮತ್ತು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಯೋಜನೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ರೋಗಿಗಳ ಆರೋಗ್ಯ ದಾಖಲೆಗಳನ್ನು ಒಂದೆಡೆ ಸುರಕ್ಷಿತವಾಗಿ ಕ್ರೂಢೀಕರಿಸಲಾಗುವುದು. ರೋಗಿಗಳ ಸಮ್ಮತಿಯೊಂದಿಗೆ ವೈದ್ಯಕೀಯ ದಾಖಲಾತಿಗಳು ತಕ್ಷಣವಾಗಿ ಲಭ್ಯಪಡಿಸುವ ಮೂಲಕ ಅವರ ಮುಂದಿನ ಚಿಕಿತ್ಸೆಗೆ ಇದರಿಂದ ಸಹಾಯವಾಗುತ್ತದೆ.

134. ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಆರೋಗ್ಯ ಸುಧಾರಣೆಗಾಗಿ 720 ಕೋಟಿ ರೂ. ವೆಚ್ಚದಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು.

a) ಹಿಂದಿನ ವರ್ಷದಲ್ಲಿ, ನಮ್ಮ ಸರ್ಕಾರವು 37 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ 43 ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರಸಕ್ತ ವರ್ಷದಲ್ಲಿ 25 ತಾಲ್ಲೂಕುಗಳಲ್ಲಿ 28 ಹೊಸ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದಕ್ಕೆ ಒಟ್ಟಾರೆ 345 ಕೋಟಿ ರೂ. ಗಳನ್ನು ಒದಗಿಸಲಾಗುವುದು.

b) ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಈಗಾಗಲೇ ನಿರ್ಮಿಸಲಾದ 14 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದ್ವಿತೀಯ ಆರೈಕೆ ಸೇವೆಗಳನ್ನು ಬಲಪಡಿಸಲು, ತಜ್ಞರು ಮತ್ತು ಇತರ ನುರಿತ ಪ್ಯಾರಾ-ಮೆಡಿಕಲ್ ಸಿಬ್ಬಂದಿಗಳ ಸೇವೆಯನ್ನು 35 ಕೋಟಿ ರೂ. ವೆಚ್ಚದಲ್ಲಿ ಒದಗಿಸಲಾಗುವುದು.

c) ಆರೋಗ್ಯ ಸಂಸ್ಥೆಗಳು 24×7 ಕಾರ್ಯನಿರ್ವಹಿಸಲು ಬೇಕಾಗಿರುವ ಮೂಲಭೂತ ಸೌಕರ್ಯ ಮತ್ತು ಹೆಚ್ಚುವರಿ ಮಾನವ ಸಂಪನ್ಮೂಲವನ್ನು 150 ಕೋಟಿ ರೂ. ವೆಚ್ಚದಲ್ಲಿ ಒದಗಿಸಲಾಗುವುದು.

d) 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 137 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
e) ಆರೋಗ್ಯ ಸಂಸ್ಥೆಗಳಲ್ಲಿ ಪರಿಣಾಮಕಾರಿ ತಪಾಸಣೆ, ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು 50 ಕೋಟಿ ರೂ. ಒದಗಿಸಲಾಗುವುದು.

135. ಕೇಂದ್ರದ ಸಹಭಾಗಿತ್ವದಲ್ಲಿ ಯಾದಗಿರಿ, ಹಾವೇರಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಕಾರ್ಯಾರಂಭಗೊಳಿಸಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ 500 ಕೋಟಿ ರೂ. ಗಳ ವೆಚ್ಚದಲ್ಲಿ ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಮಂಡ್ಯ ಮತ್ತು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ.

136. ಸಾರ್ವಜನಿಕರಿಗೆ ತೃತೀಯ ಆರೈಕೆ ಸೇವೆಗಳನ್ನು ಒದಗಿಸಲು ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 2022-23ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದೆ. ಕೊಡಗು ಮತ್ತು ಕಾರವಾರದಲ್ಲಿ ಪ್ರಗತಿಯಲ್ಲಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ನಿರ್ಮಾಣವನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

137. ಸಾರ್ವಜನಿಕರಿಗೆ ಕೈಗಗೆಟುಕುವ ದರದಲ್ಲಿ ಉನ್ನತ ತಂತ್ರಜ್ಞಾನ ಆಧಾರಿತ ಹೈಟೆಕ್ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಹೈಪರ್ ಬ್ಯಾಂಕ್ ಆಮ್ಲಜನಕ ಥೆರಪಿ, CADCAM, Cone Beam, CT scan ದಂತ ಚಿಕಿತ್ಸೆಗೆ ಸಂಬಂಧಿಸಿದಂತೆ Piezosurgery ಮುಂತಾದ ಹೈಟೆಕ್ ಚಿಕಿತ್ಸಾ ಸೌಲಭ್ಯಗಳನ್ನು ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ. ಜೊತೆಗೆ ಮಾನವ ಹಾಲು ಬ್ಯಾಂಕ್ ಮತ್ತು ಚರ್ಮ ಬ್ಯಾಂಕ್, ಕಿಮೋಥೆರಪಿ Infusion ಕೇಂದ್ರಗಳನ್ನು ಹಾಗೂ ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ.

138. ಸಾರ್ವಜನಿಕರಿಗೆ ದ್ವಿತೀಯ ಹಾಗೂ ತೃತೀಯ ಆರೈಕೆ ಸೇವೆಗಳನ್ನು ಒದಗಿಸಲು 2022-23ನೇ ಸಾಲಿನಲ್ಲಿ ಶ್ರೀ ಜಯದೇವ ಸಂಸ್ಥೆಯ ಅಡಿಯಲ್ಲಿ 263 ಕೋಟಿ ರೂ. ವೆಚ್ಚದಲ್ಲಿ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯ ಹಾಗೂ ಹುಬ್ಬಳ್ಳಿಯಲ್ಲಿ 430 ಹಾಸಿಗೆ ಸಾಮರ್ಥ್ಯದ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಗಳು ಹಾಗೂ 202 ಕೋಟಿ ರೂ. ವೆಚ್ಚದಲ್ಲಿ ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದುವರೆದು, ಪ್ರಸಕ್ತ ವರ್ಷದಲ್ಲಿ ರಾಯಚೂರಿನಲ್ಲಿ AIIMS ಮಾದರಿಯ ಆಸ್ಪತ್ರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು.

139. ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ IVF ಕ್ಲಿನಿಕ್ಗಳನ್ನು 6 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.

140. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.

141. ಬೆಂಗಳೂರಿನಲ್ಲಿ ದೇಶದ ಪ್ರಪ್ರಥಮ Gastroenterology ಮತ್ತು ಅಂಗಾಂಗ ಮರುಜೋಡಣೆಗೆ ಸಮರ್ಪಿತವಾದ ಸರ್ಕಾರಿ ಸಂಸ್ಥೆ, Institute of Gastroenterology and Organ Transplant ಕಾರ್ಯನಿರ್ವಹಿಸುತ್ತಿದೆ. ಜೀವನ ಸಾರ್ಥಕತೆ ಸಂಸ್ಥೆಯ ಮೂಲಕ 151 ದೇಹಗಳನ್ನು ಸಂಗ್ರಹಿಸಿದ್ದು, 503 ರೋಗಿಗಳಿಗೆ ಸಹಾಯವಾಗಿರುತ್ತದೆ. ಪ್ರಸಕ್ತ ವರ್ಷ NIMHANS ಸಂಸ್ಥೆಯ ಆವರಣದಲ್ಲಿ 146 ಕೋಟಿ ರೂ. ಗಳ ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು.

142. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸಲು ಸರ್ಕಾರ ಒತ್ತು ನೀಡಿದೆ. ಸ್ವಸಹಾಯ ಗುಂಪುಗಳಿಗೆ ಪ್ರಮಾಣಿತ ಉತ್ಪನ್ನಗಳನ್ನು ತಯಾರಿಸಲು ನೆರವಾಗುವ ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿರ ಸ್ವಸಹಾಯ ಗುಂಪುಗಳಿಗೆ ತಲಾ ಒಂದು1 ಲಕ್ಷ ರೂ. ನಂತೆ ಒಟ್ಟು 500 ಕೋಟಿ ರೂ. ಗಳ ಸಮುದಾಯ ಬಂಡವಾಳ ನಿಧಿ ನೀಡಲು ಕ್ರಮ ವಹಿಸಲಾಗುತ್ತಿದೆ. ವಿವಿಧ ಸ್ವಯಂ ಉದ್ಯೋಗ ಯೋಜನೆಗಳಡಿ 7,239 ಸ್ವಸಹಾಯ ಸಂಘಗಳಿಗೆ 108 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಹಾಗೂ 5.68 ಲಕ್ಷ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಂಪರ್ಕದಡಿ 11,391 ಕೋಟಿ ರೂ. ಸಾಲವನ್ನು ಒದಗಿಸಲಾಗಿದೆ. ವೈಯಕ್ತಿಕ ಮತ್ತು ಗುಂಪುಗಳನ್ನೊಳಗೊಂಡ 9,688 ಫಲಾನುಭವಿಗಳಿಗೆ ಕಿರು ಉದ್ದಿಮೆ ಪ್ರಾರಂಭಿಸಲು ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ.

143. ಇದಲ್ಲದೇ, ಸಹಕಾರ ವಲಯದಲ್ಲಿ ಕಳೆದ ವರ್ಷದಲ್ಲಿ 40,೦೦೦ ಮಹಿಳಾ ಸ್ವಸಹಾಯ ಗುಂಪುಗಳಿಗೆ 1,600 ಕೋಟಿ ರೂ. ಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ 96 ಕೋಟಿ ರೂ. ಬಡ್ಡಿ ಸಹಾಯಧನ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 45,೦೦೦ ಮಹಿಳಾ ಸ್ವಸಹಾಯ ಗುಂಪುಗಳಿಗೆ 1,800 ಕೋಟಿ ರೂ. ಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಗುರಿ ಹೊಂದಲಾಗಿದೆ.

144. ಅಪೌಷ್ಟಿಕತೆ ನಿವಾರಣೆ ಹಾಗೂ ತಾಯಿ, ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಅಂಗನವಾಡಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕಳೆದ ಆಯವ್ಯಯದಲ್ಲಿ ಘೋಷಿಸಿದಂತೆ ಸ್ವಂತ ಕಟ್ಟಡವಿಲ್ಲದ 1,000 ಅಂಗನವಾಡಿಗಳಿಗೆ ಕಟ್ಟಡಗಳನ್ನು ನಿರ್ಮಿಸಲು ಅನುದಾನ ನೀಡಲಾಗಿದೆ.

145. ಇದಲ್ಲದೆ, ಜನಸಂಖ್ಯೆಗೆ ಅನುಗುಣವಾಗಿ ಅಂಗನವಾಡಿಗಳ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ, ರಾಜ್ಯ ಸರ್ಕಾರದ ಅನುದಾನದಲ್ಲಿಯೇ 2022-23ನೇ ಸಾಲಿನಲ್ಲಿ 3,538 ಹೊಸ ಅಂಗನವಾಡಿ ಕೇಂದ್ರಗಳನ್ನು 270 ಕೋಟಿ ರೂ. ಗಳ ವೆಚ್ಚದಲ್ಲಿ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ.

146. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ಪ್ರೋತ್ಸಾಹಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಉದ್ದೇಶಕ್ಕೆ ಹಿಂದಿನ ವರ್ಷದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಸ್ವ-ಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಅವಕಾಶ ಮಾಡಲಾಗಿತ್ತು ಹಾಗೂ ಸಹಕಾರ ವಲಯದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲು ಅವಕಾಶ ನೀಡಲಾಗಿದೆ. ಈ ಧ್ಯೇಯೋದ್ದೇಶವನ್ನು ಮುಂದುವರೆಸುತ್ತಾ ನಮ್ಮ ಸರ್ಕಾರವು ʻಗೃಹಿಣಿ ಶಕ್ತಿʼ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇದರಡಿಯಲ್ಲಿ:

 ಕುಟುಂಬ ನಿರ್ವಹಣೆಯೊಂದಿಗೆ ಮನೆಯ ಆರ್ಥಿಕ ಸುಧಾರಣೆಗಾಗಿ ಶ್ರಮಿಸುವ ಮಹಿಳಾ ಕೃಷಿ ಕಾರ್ಮಿಕರ ಕುರಿತು ನಮ್ಮ ಸರ್ಕಾರ ಹೊಂದಿರುವ ಕಾಳಜಿಯ ಪ್ರತೀಕವಾಗಿ, ಶ್ರಮ ಶಕ್ತಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯಡಿ ರಾಜ್ಯ ಸರ್ಕಾರವು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ. ಗಳ ಸಹಾಯ ಧನವನ್ನು ಡಿ.ಬಿ.ಟಿ. ಮೂಲಕ ನೀಡಲಿದೆ.
 ಗೃಹಿಣಿಯರಿಗೆ ಮನೆಯಲ್ಲಿಯೇ ಲಾಭದಾಯಕ ಉದ್ಯಮ (Home based Industry) ಪ್ರಾರಂಭಿಸಲು ಅನುವಾಗುವಂತೆ ಪ್ರಸಕ್ತ ವರ್ಷದಲ್ಲಿ 1ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುವುದು.
 ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಶೇ.50 ರಷ್ಟು ರಿಯಾಯಿತಿ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ. ರಾಜ್ಯದ ಒಟ್ಟು 30 ಲಕ್ಷ ಮಹಿಳೆಯರಿಗೆ ಸಹಾಯವಾಗುವ ಈ ಯೋಜನೆಗೆ 1,000 ಕೋಟಿ ರೂ. ಗಳನ್ನು ಒದಗಿಸಲಾಗುವುದು.
 ಬಾಲಕಿಯರು ಮತ್ತು ಮಹಿಳೆಯರ ಸಬಲೀಕರಣದ ಕುರಿತು life cycle approach ಹೊಂದಲು ನಿರ್ಧರಿಸಲಾಗಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯಲು ʻಆರೋಗ್ಯ ಪುಷ್ಟಿʼ ಯೋಜನೆಯಡಿ ಮಾತೃಪೂರ್ಣ ಯೋಜನೆಯಂತೆ ಅರ್ಹ ವಿವಾಹಿತ ಮಹಿಳೆಯರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ ಮತ್ತು Prophylactic IFA ಮಾತ್ರೆಗಳನ್ನು ಜೀವಿತಾವಧಿಯಲ್ಲಿ ಒಂದು ಬಾರಿ ಗರಿಷ್ಠ 6 ತಿಂಗಳ ಅವಧಿಗೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಒದಗಿಸಲಾಗುವುದು. ಈ ಯೋಜನೆಯಡಿ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒತ್ತು ನೀಡಲಾಗುವುದು.
 ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ. ರಾಜ್ಯದ ಒಟ್ಟು 30 ಲಕ್ಷ ಮಹಿಳೆಯರಿಗೆ ಸಹಾಯವಾಗುವ ಈ ಯೋಜನೆಗೆ 1,000 ಕೋಟಿ ರೂ. ಗಳನ್ನು ಒದಗಿಸಲಾಗುವುದು.
 ರಾಜ್ಯದಲ್ಲಿನ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ʻವಿದ್ಯಾವಾಹಿನಿʼ ಎಂಬ ಯೋಜನೆಯಡಿಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯದಲ್ಲಿನ ಒಟ್ಟು 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.

147. ಸರ್ಕಾರಿ ಮತ್ತು ಖಾಸಗಿ ಹೆಣ್ಣು ಮಕ್ಕಳ ಹಾಸ್ಟೆಲ್ಗಳ ಗುಣಮಟ್ಟ ಸೂಚ್ಯಂಕ ಪಟ್ಟಿಯನ್ನು ಆನ್-ಲೈನ್ ವೇದಿಕೆಯಲ್ಲಿ ಸೃಜಿಸಲಾಗುವುದು. ಇದರಿಂದ ಪರಸ್ಥಳದ ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳು ತಮ್ಮ ಅವಶ್ಯಕತೆ, ದೂರ, ಗುಣಮಟ್ಟ, ಶುಲ್ಕ ಹಾಗೂ ಇತರ ಮಾನದಂಡಗಳಿಗೆ ಅನುಗುಣವಾಗಿ ಸೂಕ್ತ ಹಾಸ್ಟೆಲನ್ನು ಆಯ್ಕೆ ಮಾಡಲು ಸಾಧ್ಯವಾಗುವುದು.

148. ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ನೀಡುತ್ತಿರುವ ಮಾಸಾಶನವನ್ನು ಈಗಾಗಲೇ 3,000 ರೂ. ಗಳಿಂದ 10,000 ರೂ. ಗಳಿಗೆ ಹೆಚ್ಚಿಸಲಾಗಿದೆ. ಇವರಿಗೆ ಬದುಕಿನಲ್ಲಿ ಇನ್ನಷ್ಟು ಭದ್ರತೆಯನ್ನು ಒದಗಿಸಲು ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಮತ್ತು ಸ್ವಯಂ ಉದ್ಯೋಗಕ್ಕಾಗಿ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು. ಇದಲ್ಲದೆ, ಉತ್ಕೃಷ್ಟ ಚಿಕಿತ್ಸೆಗೆ ಮತ್ತು ಕಾನೂನು ನೆರವು ನೀಡಲು ಮಹಿಳಾ ಅಭಿವೃದ್ಧಿ ನಿಗಮದಲ್ಲಿ ವಿಶೇಷ ನಿಧಿ ಸ್ಥಾಪಿಸಲಾಗುವುದು.

149. ಮಕ್ಕಳ ಪಾಲನಾ ಸಂಸ್ಥೆಗಳ ಆರೈಕೆಯಿಂದ ಹೊರಬಂದ 18 ರಿಂದ 21 ವರ್ಷದೊಳಗಿನ ಹೆಣ್ಣು ಮಕ್ಕಳ ಆರೈಕೆಗಾಗಿ 6 ಅನುಪಾಲನಾ ಗೃಹಗಳನ್ನು ಹಿಂದಿನ ಆಯವ್ಯಯದಲ್ಲಿ ಘೋಷಿಸಿದ್ದೇನೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯನ್ನು ಗಂಡು ಮಕ್ಕಳಿಗೂ ವಿಸ್ತರಿಸಿ 4 ಅನುಪಾಲನಾ ಗೃಹಗಳನ್ನು ಪ್ರಾರಂಭಿಸಲು 2 ಕೋಟಿ ರೂ. ಗಳ ಅನುದಾನವನ್ನು ಒದಗಿಸಲಾಗಿದೆ.

150. ವಿಶೇಷಚೇತನರು ಸ್ವತಂತ್ರವಾಗಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಹಾಗೂ ಸ್ವಾವಲಂಬನೆಯ ಜೀವನ ನಡೆಸಲು ಅನುವಾಗುವಂತೆ ʻಸ್ವಚೇತನʼ ಎಂಬ ಯೋಜನೆಯಡಿ 5,000 ಅರ್ಹ ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 50 ಕೋಟಿ ರೂ. ಗಳ ವೆಚ್ಚದಲ್ಲಿ ಒದಗಿಸಲಾಗುವುದು. ಈ ವರ್ಷದಲ್ಲಿ ಅತಿ ಹೆಚ್ಚು ಅನುದಾನ ನೀಡಲಾಗುತ್ತಿದ್ದು, ಇದು ವಿಶೇಷಚೇತನರ ಕಲ್ಯಾಣಕ್ಕೆ ನಮ್ಮ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ.

151. ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

 ನಗರ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡಗಳ ಹೆಚ್ಚಿನ ಕೊರತೆ ಇರುವುದನ್ನು ಗಮನಿಸಿ, ಈ ಪ್ರದೇಶಗಳಲ್ಲಿ 250 ಅಂಗನವಾಡಿ ಕಟ್ಟಡಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
 ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿರುವ ಶಾಲೆಯಿಂದ ಹೊರಗುಳಿದ 14-18 ವರ್ಷದ ಪ್ರಾಯ ಪೂರ್ವ ಬಾಲಕಿಯರಿಗೆ, ಪೂರಕ ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು ಎಲ್ಲಾ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ವಿಸ್ತರಿಸಲಾಗುವುದು.
 ರಾಷ್ಟ್ರೀಯ ಶಿಕ್ಷಣ ನೀತಿಯ ಅನುಗುಣವಾಗಿ ಅಂಗನವಾಡಿ ಕೇಂದ್ರಗಳನ್ನು ಸಜ್ಜುಗೊಳಿಸಲು ಅಗತ್ಯ ಪಠ್ಯವಸ್ತುಗಳನ್ನು ವಿತರಿಸಲು ಹಾಗೂ ಮೇಲ್ವಿಚಾರಕಿಯರು ಮತ್ತು ಕಾರ್ಯಕರ್ತೆಯರಿಗೆ ತರಬೇತಿ ನೀಡಲು 30 ಕೋಟಿ ರೂ. ಗಳನ್ನು ಒದಗಿಸಲಾಗಿದೆ.

152. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ಗುರುತಿಸಿರುವ ರಾಜ್ಯ ಸರ್ಕಾರವು 2023-24ನೇ ಸಾಲಿನಿಂದ ಅವರಿಗೆ ಉಪಧನವನ್ನು (Gratuity) ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 40 ಕೋಟಿ ರೂ. ಗಳ ಅನುದಾನ ಮೀಸಲಿಡಲಾಗಿದೆ.

153. 25 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಗಳು ಹಾಗೂ ಅಂಗನವಾಡಿ ಸಹಾಯಕಿಯರಿಗೆ 30,000 ರೂ. ಗಳ ಆರ್ಥಿಕ ಭದ್ರತೆಯನ್ನು ಒಂದು ಬಾರಿಗೆ ನೀಡಿ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಲಾಗುವುದು.

154. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ವಿಭಜಿಸಿ ಮಕ್ಕಳ ಪೌಷ್ಟಿಕತೆ ಕುರಿತು ಒಂದು ಪ್ರತ್ಯೇಕ ಇಲಾಖೆ ಮತ್ತು ಮಹಿಳಾ ಸಬಲೀಕರಣ ಇಲಾಖೆಯನ್ನು ರೂಪಿಸಲು ನಿರ್ಧರಿಸಿದೆ.

155. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮಹಿಳೆಯರು ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ಶಿಶುಪಾಲನಾ ಸೌಲಭ್ಯಗಳು ಅಗತ್ಯವಾಗಿದೆ. ಇದಕ್ಕಾಗಿ 2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದ ಕಾರ್ಯಕ್ರಮವನ್ನು ವಿಸ್ತರಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗಾಗಿ ನಗರ ಪ್ರದೇಶದಲ್ಲಿ 4,000 ಶಿಶುಪಾಲನಾ ಕೇಂದ್ರಗಳು ಮತ್ತು ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆಯ ಮೂಲಕ 500 ಶಿಶುವಿಹಾರಗಳನ್ನು ಪ್ರಾರಂಭಿಸಲಾಗುವುದು.

156. ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಮಹಿಳಾ ಆಯವ್ಯಯದಲ್ಲಿ ಒಟ್ಟಾರೆ 46,278 ಕೋಟಿ ರೂ. ಒದಗಿಸಲಾಗಿದೆ.

157. ಮಕ್ಕಳ ಅಭ್ಯುದಯಕ್ಕೆ ಆಯವ್ಯಯದಲ್ಲಿ ಒಟ್ಟಾರೆ 47,256 ಕೋಟಿ ರೂ. ಒದಗಿಸಲಾಗಿದೆ.

158. ರಾಜ್ಯದಲ್ಲಿನ ಪೌರನೌಕರರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ಉದ್ದೇಶದಿಂದ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ 24,000 ಪೌರ ನೌಕರರನ್ನು ಇದೇ ಅವಧಿಯಲ್ಲಿ ಭರ್ತಿ ಮಾಡುವ ಐತಿಹಾಸಿಕ ಕ್ರಮವನ್ನು ನಮ್ಮ ಸರ್ಕಾರ ಕೈಗೊಂಡಿದೆ.

159. ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ ಕಾಯ್ದೆ 2013ರ ಅನುಷ್ಠಾನದ 10 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯನ್ನು ಇನ್ನಷ್ಟು ಸುಧಾರಿಸಲು ಸೆಕ್ಷನ್ ೭(ಡಿ) ಪರಿಷ್ಕರಣೆ ಸೇರಿದಂತೆ ಹಲವಾರು ಸಲಹೆಗಳು ಬಂದಿವೆ. ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಡೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕ್ಷೇಮಾಭಿವೃದ್ಧಿ ಕುರಿತು ನಮ್ಮ ಸರ್ಕಾರಕ್ಕೆ ಇರುವ ಬದ್ಧತೆಗೆ ನಿದರ್ಶನವಾಗಿದೆ.

160. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನನ್ನು ಸಂರಕ್ಷಿಸಲು ಈಗಿರುವ ಕಾನೂನು ತೊಡಕುಗಳನ್ನು ನಿವಾರಿಸಲು PTCL ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು.

161. ಅಮೃತ ಜ್ಯೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

162. ಗಂಗಾಕಲ್ಯಾಣ ಯೋಜನೆಯಡಿ ವಿವಿಧ ನಿಗಮಗಳ ಮೂಲಕ 17,000 ಫಲಾನುಭವಿಗಳಿಗೆ 675 ಕೋಟಿ ರೂ. ಸಹಾಯಧನವನ್ನು ಡಿ.ಬಿ.ಟಿ. ಮೂಲಕ ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಲಾಗಿದೆ.

163. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 9,500 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

164. ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಸತಿ ಯೋಜನೆಗಳಲ್ಲಿ ಘಟಕ ಸಹಾಯಧನ 1.75 ಲಕ್ಷ ರೂ. ಗಳಿಂದ 2 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ.

165. ಭೂ ಒಡೆತನ ಯೋಜನೆಯಡಿ ಘಟಕ ವೆಚ್ಚದ ಮೊತ್ತವನ್ನು 15 ಲಕ್ಷ ರೂ. ಗಳಿಂದ 20 ಲಕ್ಷ ರೂ. ಗಳಿಗೆ ಹಾಗೂ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ 25 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ.
166. ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರು ಸ್ವಯಂಉದ್ಯೋಗ ಕೈಗೊಳ್ಳಲು ವಿದ್ಯುತ್ ಚಾಲಿತ ತ್ರಿಚಕ್ರ ಸರಕು ವಾಹನ ಖರೀದಿಗೆ 50 ಸಾವಿರ ರೂ. ಧನ ಸಹಾಯ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯನ್ನು ಮುಂದುವರೆಸಿ ʻಬಾಬು ಜಗಜೀವನ್ರಾಮ್ ಸ್ವಯಂ ಉದ್ಯೋಗ ಯೋಜನೆʼಯಡಿಯಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ಅಥವಾ ನಾಲ್ಕು ಚಕ್ರದ ಸರಕು ವಾಹನಗಳನ್ನು ಖರೀದಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಫಲಾನುಭವಿಗಳಿಗೆ ಶೇ.50 ರಷ್ಟು 2 ಲಕ್ಷ ರೂ. ವರೆಗೂ ಸಹಾಯಧನವನ್ನು ನೀಡಲಾಗುವುದು. ಇದಕ್ಕಾಗಿ 400 ಕೋಟಿ ರೂ. ವೆಚ್ಚವಾಗಲಿದೆ.

167. ರಾಜ್ಯದಲ್ಲಿ ಗಂಗಾ ಕಲ್ಯಾಣ ಯೋಜನೆಯ ಅನುಷ್ಠಾನವು ಬೇರೆ ಬೇರೆ ಕಾರಣಗಳಿಂದ ವಿಳಂಬವಾಗುತ್ತಿದ್ದು, ಇದನ್ನು ಬಗೆಹರಿಸಿ e-Rupee ಮೂಲಕ ನೇರವಾಗಿ ಫಲಾನುಭವಿಗಳಿಗೆ ಹಣ ಪಾವತಿಸಲು ಕ್ರಮವಹಿಸಲಾಗಿದೆ.

168. ಮೆಟ್ರಿಕ್ ನಂತರದಲ್ಲಿ ಶಾಲೆಯಿಂದ ಹೊರಗುಳಿಯುವಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆಯನ್ನು ತಗ್ಗಿಸಲು 100 ಕ್ರೈಸ್ ವಸತಿ ಶಾಲೆಗಳನ್ನು ಉನ್ನತೀಕರಿಸಿ ಪದವಿ ಪೂರ್ವ ಶಿಕ್ಷಣ ಪ್ರಾರಂಭಿಸಲಾಗುವುದು.

169. ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ 50 ಲಕ್ಷ ರೂ. ಗಳ ವರೆಗಿನ ಸಣ್ಣ ಕಾಮಗಾರಿಗಳಲ್ಲಿ ಶೇ.24ರವರೆಗೆ ಮೀಸಲಾತಿ ನಿಗದಿಪಡಿಸಿದ್ದು, ಈ ಮೊತ್ತವನ್ನು 1ಒಂದು ಕೋಟಿ ರೂ. ವರೆಗೆ ಹೆಚ್ಚಿಸಲಾಗುವುದು.

170. ವಸತಿ ಶಾಲೆಗಳಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಒಟ್ಟು 10 ಕ್ರೈಸ್ ವಸತಿ ಶಾಲೆಗಳಲ್ಲಿ, ಒಂದು ಶಾಲೆಗೆ ಒಂದರಂತೆ, ಉತ್ಕೃಷ್ಟ ಮಟ್ಟದ ಕ್ರೀಡಾ ಸೌಲಭ್ಯವನ್ನು 10 ಕೋಟಿ ರೂ. ವೆಚ್ಚದಲ್ಲಿ ಒದಗಿಸಲಾಗುವುದು.

171. ಪರಿಶಿಷ್ಟ ಪಂಗಡದ ಮಕ್ಕಳಿಗೆ ವಿದ್ಯಾರ್ಥಿನಿಲಯಗಳು ಇಲ್ಲದೇ ಇರುವ ಜಿಲ್ಲಾ ಕೇಂದ್ರಗಳಲ್ಲಿ 14 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು 6 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.

172. ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ IIT, IIM, IISc, NIT ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಗಳ ಪ್ರೋತ್ಸಾಹಧನ ನೀಡುತ್ತಿದ್ದು, ಸದರಿ ಪ್ರೋತ್ಸಾಹಧನದ ಮೊತ್ತವನ್ನು 4 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು.

173. ISEC ಸಂಸ್ಥೆಯಲ್ಲಿ ಪಿ.ಹೆಚ್.ಡಿ ಮಾಡುವ 5 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಡಾ.|| ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ನೀಡಲು 2 ಕೋಟಿ ರೂ. Corpus Fund ಸ್ಥಾಪಿಸಲಾಗುವುದು.

174. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ವಿವಿಧ ಆದಾಯ ಬರುವ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ವಾಣಿಜ್ಯ ಬ್ಯಾಂಕ್ಗಳಿಂದ ಪಡೆಯುವ ಗರಿಷ್ಠ 10 ಲಕ್ಷ ರೂ. ವರೆಗಿನ ಸಾಲವನ್ನು ಶೇ.4ರಷ್ಟು ಬಡ್ಡಿ ದರದಲ್ಲಿ ದೊರಕಿಸಲು ಸರ್ಕಾರದ ವತಿಯಿಂದ ಬಡ್ಡಿ ಸಹಾಯಧನ ನೀಡಲಾಗುವುದು.

175. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ 10,000 ಯುವ ಜನರು ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ನೇಮಕಾತಿ ಹೊಂದಲು ಉಚಿತ ತರಬೇತಿ ನೀಡಲಾಗುವುದು.

176. ಸಫಾಯಿ ಕರ್ಮಚಾರಿಗಳಿಗೆ ರಾಜೀವ್ಗಾಂಧಿ ವಸತಿ ನಿಗಮದ ವತಿಯಿಂದ ವಸತಿ ಸೌಲಭ್ಯವನ್ನು ನೀಡಲು ಕ್ರಮ ವಹಿಸಲಾಗುವುದು.

177. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿವಿಧ 6 ಅಭಿವೃದ್ಧಿ ನಿಗಮಗಳಿಗೆ ಪ್ರಸಕ್ತ ಸಾಲಿನಲ್ಲಿನೀಡುತ್ತಿರುವ ಅನುದಾನವನ್ನು , ಕಳೆದ ವರ್ಷಕ್ಕಿಂತ ಗಣನೀಯವಾಗಿ ಹೆಚ್ಚಿಸಿ, ಪ್ರಸಕ್ತ ಸಾಲಿನಲ್ಲಿ 795 ಕೋಟಿ ರೂ. ಒದಗಿಸಲಾಗುವುದು. ನಿಗಮಗಳಿಗೆ ನೀಡಿರುವ ಹೆಚ್ಚುವರಿ ಅನುದಾನ ಮತ್ತು ಈಗಾಗಲೇ ಲಭ್ಯವಿರುವ ಮೊತ್ತವೂ ಸೇರಿದಂತೆ 2023-24ರಲ್ಲಿ ಒಟ್ಟು 1,842 ಕೋಟಿ ರೂ. ಗಳ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.

178. 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯುದಯಕ್ಕೆ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಒಟ್ಟು 30,215 ಕೋಟಿ ರೂ. ಒದಗಿಸಲಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆಗೆ 21,343 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ _ 8,872 ಕೋಟಿ ರೂ. ಒದಗಿಸಲಾಗಿದೆ.

179. ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 2.28 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ದಾಖಲಾತಿಯ ಪ್ರಮಾಣವನ್ನು ಶೇ.25 ರಷ್ಟು ಹೆಚ್ಚಿಸಿ, 30,000 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, 20 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು “Build to Suit” ಮಾದರಿಯಲ್ಲಿ ನಿರ್ಮಿಸಲಾಗುವುದು ಮತ್ತು ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿರುವ 160 ವಿದ್ಯಾರ್ಥಿ ನಿಲಯಗಳನ್ನು ಇಲಾಖೆಗೆ ಹಸ್ತಾಂತರಿಸಿಕೊಳ್ಳುವ ಮೂಲಕ ಒಟ್ಟು ಒಂದು1 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು.

180. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ವಿದ್ಯಾರ್ಥಿನಿಲಯಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಕ್ಕೆ 250 ಕೋಟಿ ರೂ. ಹೆಚ್ಚುವರಿ ಅನುದಾನದ ವಿಶೇಷ ಪ್ಯಾಕೇಜನ್ನು ಒದಗಿಸಲಾಗಿದೆ.

181. 2022-23ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸೇರಿದ ವಿವಿಧ ಮಠಗಳಿಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗಾಗಿ 1,115 ಸಂಸ್ಥೆಗಳಿಗೆ 375 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ.

182. ಶುಲ್ಕ ಮರುಪಾವತಿ ಕಾರ್ಯಕ್ರಮದಡಿ 400 ಕೋಟಿ ರೂ. ಒದಗಿಸಲಾಗಿದ್ದು, ಈ ಅನುದಾನವನ್ನು ಡಿಬಿಟಿ ಮೂಲಕ ಎಂಟು ಲಕ್ಷ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಅಲ್ಲದೇ, ಈ ಕಾರ್ಯಕ್ರಮದಡಿ ಹಿಂದಿನ ಸಾಲುಗಳಲ್ಲಿ ಬಾಕಿ ಉಳಿದಿದ್ದ 160 ಕೋಟಿ ರೂ. ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.

183. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದರಂತೆ ಪ್ರತಿ ಶಾಲೆಗೆ 18 ಕೋಟಿ ರೂ. ವೆಚ್ಚದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ.

184. ಬೈಲಹೊಂಗಲ ತಾಲ್ಲೂಕಿನಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಕಾಮಗಾರಿಗಳನ್ನು 217 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿ, ಸೈನಿಕ್ ಸ್ಕೂಲ್ ಸೊಸೈಟಿ ಸಹಯೋಗದೊಂದಿಗೆ ಪ್ರಾರಂಭ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗಾಗಿ ಹಿಂದಿನ ಸರ್ಕಾರಗಳು ಕೇವಲ 54.14 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದು, ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ 261.53 ಕೋಟಿ ರೂ. ಗಳನ್ನು ಒದಗಿಸಿ Master Plan ನಂತೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ.

185. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 50 ಕನಕದಾಸ ವಿದ್ಯಾರ್ಥಿ ನಿಲಯಗಳ ಸುಸಜ್ಜಿತ ಕಟ್ಟಡ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಈ ಸಂಬಂಧ ಘಟಕ ವೆಚ್ಚವನ್ನು 3.5 ಕೋಟಿ ರೂ. ಗಳಿಂದ 5 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ.

186. ಹಿಂದುಳಿದ ವರ್ಗಗಳ ಇಲಾಖಾ ವಿದ್ಯಾರ್ಥಿ ನಿಲಯಗಳಲ್ಲಿ ಬೇಡಿಕೆ ಮತ್ತು ಹಂಚಿಕೆಯನ್ನು ಸರಿದೂಗಿಸುವ ಉದ್ದೇಶದಿಂದ ತಾಲ್ಲೂಕುವಾರು ಅರ್ಜಿಗಳನ್ನು ಆಹ್ವಾನಿಸಿ ಸಿ.ಇ.ಟಿ. ಕೌನ್ಸಿಲಿಂಗ್ ಮಾದರಿಯಲ್ಲಿ ಪ್ರವೇಶ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಲು ವಿದ್ಯಾರ್ಥಿ ನಿಲಯಗಳ ಮಾಸಿಕ ಭೋಜನ ವೆಚ್ಚವನ್ನು 150 ರೂ. ಗಳಷ್ಟು ಹೆಚ್ಚಿಸಲಾಗಿದೆ.

187. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ದಿ ನಿಗಮಗಳ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ 490 ಕೋಟಿ ರೂ. ವೆಚ್ಚದಲ್ಲಿ 19,731 ಫಲಾನುಭವಿಗಳಿಗೆ ಸೌಲಭ್ಯವನ್ನು ತಲುಪಿಸುವ ಗುರಿ ಹೊಂದಲಾಗಿದೆ.

188. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 1,282 ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿನ 8, 9 ಮತ್ತು 10ನೇ ತರಗತಿಯ ಶೇ.25 ರಷ್ಟು ಅಂದರೆ ಅಂದಾಜು 10,000 ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ವಿಷಯಗಳ ಬಗ್ಗೆ ಬುನಾದಿ ತರಬೇತಿಗೆ 8.50 ಕೋಟಿ ರೂ. ಗಳನ್ನು ಒದಗಿಸಲಾಗುವುದು.

189. ರಾಜ್ಯದಲ್ಲಿನ ಕಾಯಕ ಸಮಾಜಗಳಿಂದ ವೃತ್ತಿ ಆಧಾರಿತ ನಿಗಮಗಳ ಸ್ಥಾಪನೆಗಾಗಿ ಸಾಕಷ್ಟು ಬೇಡಿಕೆಗಳು ಬಂದಿದೆ. ಸರ್ಕಾರದಿಂದ ಪ್ರಸಕ್ತ ವರ್ಷದಲ್ಲಿ ಇದನ್ನು ಪರಿಶೀಲಿಸಲಾಗುವುದು.

190. ಹಿಂದುಳಿದ ವರ್ಗಗಳಿಗೆ ಸೇರಿದ ವಿವಿಧ 11 ಅಭಿವೃದ್ಧಿ ನಿಗಮಗಳಿಗೆ ನೀಡುತ್ತಿರುವ ಅನುದಾನವನ್ನುಪ್ರಸಕ್ತ ಸಾಲಿನಲ್ಲಿ, ಕಳೆದ ವರ್ಷಕ್ಕಿಂತ ಗಣನೀಯವಾಗಿ ಹೆಚ್ಚಿಸಿ, ಪ್ರಸಕ್ತ ಸಾಲಿನಲ್ಲಿ 596 ಕೋಟಿ ರೂ. ಒದಗಿಸಲಾಗುವುದು. ನಿಗಮಗಳಿಗೆ ನೀಡಿರುವ ಹೆಚ್ಚುವರಿ ಅನುದಾನ ಮತ್ತು ಈಗಾಗಲೇ ಲಭ್ಯವಿರುವ ಮೊತ್ತವೂ ಸೇರಿದಂತೆ 2023-24ರಲ್ಲಿ ಒಟ್ಟು 1,600 ಕೋಟಿ ರೂ. ಗಳ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.

191. ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಸರ್ಕಾರ ಆದ್ಯತೆ ನೀಡಿದೆ. ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಶೇಕಡ 97 ರಷ್ಟು ಉತ್ತೀರ್ಣರಾಗಿರುತ್ತಾರೆ. ಈ ಪೈಕಿ ಶೇಕಡ 90ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಗುಣಾತ್ಮಕ ಉನ್ನತ ಶಿಕ್ಷಣ ಒದಗಿಸಲು ಮೆಟ್ರಿಕ್ ನಂತರದ 100 ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲವನ್ನು 2,500ಕ್ಕೆ ಹೆಚ್ಚಿಸಲಾಗಿದೆ.

192. ರಾಜ್ಯದ 29 ಸ್ಥಳಗಳಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗಾಗಿ 6 ರಿಂದ 12ನೇ ತರಗತಿಯವರೆಗೆ ಸಿ.ಬಿ.ಎಸ್.ಇ. ಪಠ್ಯಕ್ರಮದೊಂದಿಗೆ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಸದರಿ ಶಾಲೆಗಳನ್ನು 25 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ವಹಣೆಯನ್ನು ಮಾಡಲಾಗುತ್ತಿದೆ.

193. ಪ್ರಸಕ್ತ ಸಾಲಿನಲ್ಲಿ 96 ಕೋಟಿ ರೂ. ಅನುದಾನದಲ್ಲಿ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ 31 ವಸತಿ ಶಾಲೆಗಳು, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಸುಮಾರು 7,800 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

194. ಅಲ್ಪಸಂಖ್ಯಾತರ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆ ತರಬೇತಿಯನ್ನು ನೀಡಲು 2 ಕೋಟಿ ರೂ. ಒದಗಿಸಲಾಗುವುದು.

195. ವಿಶ್ವದಲ್ಲಿ 250 ರೊಳಗೆ University Ranking ಹೊಂದಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗವನ್ನು ವಿದೇಶದಲ್ಲಿ ಮಾಡಲು ಇಚ್ಛಿಸುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ನಂತೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಡ್ಡಿ ಸಹಾಯಧನ ನೀಡಲಾಗುವುದು.

196. ಅಲ್ಪಸಂಖ್ಯಾತರ ಪದವೀಧರ ಮಹಿಳೆಯರು ಉತ್ತಮ ಉದ್ಯೋಗಾವಕಾಶ ಪಡೆಯಲು ಹಾಗೂ ಸ್ವಂತ ಉದ್ದಿಮೆ ಪ್ರಾರಂಭಿಸಲು ಪ್ರತಿಷ್ಠಿತ ಸಂಸ್ಥೆಯಾದ ಐ.ಐ.ಎಂ.ಬಿ. (IIMB) ಬೆಂಗಳೂರಿನಲ್ಲಿ 300 ಅಭ್ಯರ್ಥಿಗಳಿಗೆ ಉದ್ಯಮಶೀಲತಾ ತರಬೇತಿಯನ್ನು 3 ಕೋಟಿ ರೂ. ವೆಚ್ಚದಲ್ಲಿ ನೀಡಲಾಗುವುದು.

197. ರಾಜ್ಯದಲ್ಲಿ 40,000 ಕ್ಕಿಂತಲೂ ಹೆಚ್ಚು ವಕ್ಫ್ ಆಸ್ತಿಗಳಿದ್ದು, ಇವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 2023-24 ನೇ ಸಾಲಿನಲ್ಲಿ 10 ಕೋಟಿ ರೂ. ಮತ್ತು ಖಬರಸ್ತಾನ್ಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
198. ಅಲ್ಪಸಂಖ್ಯಾತರಲ್ಲಿ ಅತೀ ಹಿಂದುಳಿದ ಪಿಂಜಾರ, ದರ್ವೇಸು ಮತ್ತು ನದಾಫ್ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಎಲ್ಲಾ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು.

199. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಕಳೆದ ಆಯವ್ಯಯದಲ್ಲಿ 60 ಕೋಟಿ ರೂ. ಒದಗಿಸಲಾಗಿದ್ದು, ಪ್ರಸಕ್ತ ಆಯವ್ಯಯದಲ್ಲಿ ಈ ಮೊತ್ತವನ್ನು ಹೆಚ್ಚಿಸಿ 110 ಕೋಟಿ ರೂ. ಒದಗಿಸಲಾಗುವುದು. ನಿಗಮಕ್ಕೆ ನೀಡಿರುವ ಹೆಚ್ಚುವರಿ ಅನುದಾನ ಮತ್ತು ಈಗಾಗಲೇ ಲಭ್ಯವಿರುವ ಮೊತ್ತವೂ ಸೇರಿದಂತೆ 2023-24ರಲ್ಲಿ, 306 ಕೋಟಿ ರೂ. ಗಳ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.

200. ನಮ್ಮ ಸರ್ಕಾರವು ಎಲ್ಲರಿಗೂ ಸೂರು ಒದಗಿಸಲು ವಿಶೇಷ ಆದ್ಯತೆ ನೀಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹಿಂದಿನ ಸರ್ಕಾರ ಯಾವುದೇ ಅನುದಾನ ಹಂಚಿಕೆ ಮಾಡದೇ 15.84 ಲಕ್ಷ ಮನೆಗಳು ಮಂಜೂರು ಮಾಡಲಾಗಿತ್ತು. ಬಡವರ ಹಿತಾಸಕ್ತಿಯ ದೃಷ್ಟಿಯಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಮನೆಗಳಿಗೆ ನಮ್ಮ ಸರ್ಕಾರವು ಎರಡು ವರ್ಷಗಳ ಕೋವಿಡ್ ಸಂಕಷ್ಟದ ನಡುವೆಯೂ 10,173 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿ, ಸುಮಾರು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಿದ್ದಲ್ಲದೇ, 5 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಪ್ರಸಕ್ತ ವರ್ಷದಲ್ಲಿ 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಹಾಗೂ ಒಟ್ಟಾರೆ 5,000 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುವುದು.

201. ಬೆಂಗಳೂರಿನಲ್ಲಿ ಪ್ರಸಕ್ತ ವರ್ಷದಲ್ಲಿ 20,000 ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಈ ಯೋಜನೆಯಡಿ ಇಚ್ಛೆಪಡುವ ಮನೆಯನ್ನು ಆನ್ಲೈನ್ನಲ್ಲಿ ಫಲಾನುಭವಿಗಳೇ ಆಯ್ಕೆ ಮಾಡಿಕೊಳ್ಳುವ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗಿದೆ.

202. ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಎಲ್ಲಾ ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. Saturation Approach ಮುಖಾಂತರ ಹೆಚ್ಚು ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಈ ತಾಲ್ಲೂಕುಗಳಲ್ಲಿ ಆದ್ಯತೆ ನೀಡಲಾಗುವುದು. ಈ ಉದ್ದೇಶಕ್ಕೆ ಪ್ರಸಕ್ತ ವರ್ಷದಲ್ಲಿ 500 ಕೋಟಿ ರೂ. ಗಳನ್ನು ಒದಗಿಸಲಾಗಿದ್ದು, ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಅನುದಾನ ಒದಗಿಸಲಾಗುವುದು.

203. ಅತಿವೃಷ್ಟಿಯಿಂದ ಸಂಪೂರ್ಣವಾಗಿ ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣಕ್ಕೆ ನೀಡುತ್ತಿರುವ ಸಹಾಯಧನವನ್ನು ನಮ್ಮ ಸರ್ಕಾರವು 5 ಲಕ್ಷ ರೂ. ಗಳಿಗೆ ಹೆಚ್ಚಿಸಿದೆ. ವಿವಿಧ ವರ್ಗಗಳಡಿಯಲ್ಲಿ ಕಳೆದ 4 ವರ್ಷಗಳಲ್ಲಿ 3,01,884 ಮನೆಗಳ ಪುನರ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಇದಕ್ಕೆ ಇಲ್ಲಿಯವರೆಗೂ 2,627 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ.

204. ಸರ್ಕಾರಿ ಮಾಲೀಕತ್ವದಲ್ಲಿ ಇರುವ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವ 1.14 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ವರ್ಷಾಂತ್ಯದಲ್ಲಿ ಎಲ್ಲಾ 3.36 ಲಕ್ಷ ಕುಟುಂಬಗಳಿಗೂ ಭೂಮಾಲೀಕತ್ವದ ಹಕ್ಕುಪತ್ರವನ್ನು ನೀಡಲಾಗುವುದು.

205. ಕರ್ನಾಟಕ ಗೃಹ ಮಂಡಳಿಯ ಅನುಮೋದನೆಯಾಗಿದ್ದ 38 ಯೋಜನೆಗಳು ಜಮೀನಿನ ವ್ಯಾಜ್ಯ, ಭೂ ಮಾಲೀಕರ ಸಮಸ್ಯೆ ಮತ್ತಿತರ ಕಾರಣದಿಂದ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದವು. ಈ ಎಲ್ಲ ತೊಡಕುಗಳನ್ನು ನಿವಾರಿಸಿ, ಮಾರ್ಗಸೂಚಿಗಳನ್ನು ಮಾರ್ಪಾಡುಗೊಳಿಸಿ 3,382 ಎಕರೆ ಪ್ರದೇಶದಲ್ಲಿ 48,000 ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ವಹಿಸಲಾಗಿದೆ.

206. ಕರ್ನಾಟಕ ಗೃಹ ಮಂಡಳಿ ವತಿಯಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೆ 06 ವಸತಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದ್ದು, ಈ ಯೋಜನೆಗಳಿಂದ ಒಟ್ಟು 6,142 ನಿವೇಶನಗಳ ಅಭಿವೃದ್ಧಿಯನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಂದಾಜು 2,000 ಎಕರೆ ಜಮೀನನ್ನು ವಸತಿ ಯೋಜನೆಗಾಗಿ ಸಂಗ್ರಹಿಸಿ, ಅಂದಾಜು 30,000 ಸ್ವತ್ತುಗಳನ್ನು ಅಭಿವೃದ್ಧಿ ಪಡಿಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು.

207. ʻನಮ್ಮ ನೆಲೆʼ” ಎಂಬ ಹೊಸ ಯೋಜನೆಯಡಿ ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದ್ಧಿಪಡಿಸುವ ನಿವೇಶನಗಳ ಪೈಕಿ ಮೂರನೇ ಒಂದು ಭಾಗವನ್ನು, ಅಂದರೆ 10,000 ನಿವೇಶನಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (EWS) ಹಂಚಿಕೆ ಮಾಡಲಾಗುವುದು.

208. ನಮ್ಮ ಸರ್ಕಾರವು ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ಆಹಾರ ಭದ್ರತೆ ನೀಡಲು ಬದ್ಧವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರವು ಹೆಚ್ಚುವರಿ ಆಹಾರ ಧಾನ್ಯ ವಿತರಿಸಿತ್ತು. ಇದರೊಂದಿಗೆ ರಾಜ್ಯ ಸರ್ಕಾರವು ಅಕ್ಕಿಯೊಂದಿಗೆ ಸ್ಥಳೀಯ ಪ್ರಮುಖ ಆಹಾರ ಧಾನ್ಯಗಳಾದ ರಾಗಿ ಹಾಗೂ ಜೋಳವನ್ನೂ ಸಹ ಪಡಿತರ ವ್ಯವಸ್ಥೆಯಡಿ ವಿತರಿಸಿ, ರಾಜ್ಯದ ರೈತರಿಗೆ ಹೆಚ್ಚುವರಿ ನೆರವು ನೀಡಿದೆ. ಸ್ಥಳೀಯ ಧಾನ್ಯಗಳ ವಿತರಣೆಯನ್ನು ಈ ವರ್ಷವೂ ಮುಂದುವರೆಸಲಾಗುವುದು.

209. 2013-14 ರಿಂದ 2017-18 ನೇ ಸಾಲಿನವರೆಗೆ 5 ವರ್ಷಗಳ ಅವಧಿಯಲ್ಲಿ 1.2 ಕೋಟಿ ಮೆಟ್ರಿಕ್ ಟನ್ ಗಳ ಅಕ್ಕಿಯನ್ನು ವಿತರಿಸಲಾಗಿತ್ತು. ನಮ್ಮ ಸರ್ಕಾರವು ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ 1.5 ಕೋಟಿ ಮೆಟ್ರಿಕ್ ಟನ್ ಅಕ್ಕಿಯನ್ನು ವಿತರಿಸಿದೆ. NFSA ಅಡಿಯಲ್ಲಿ ಪ್ರತಿ ಫಲಾನುಭವಿಗೆ ನೀಡುತ್ತಿರುವ 5 ಕೆ.ಜಿ ಆಹಾರ ಧಾನ್ಯಗಳ ಜೊತೆಯಲ್ಲಿ ಒಂದು1 ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲು 2023-24ನೇ ವರ್ಷದಲ್ಲಿ 4,000 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.

210. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 3.8 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ 543 ಕೋಟಿ ರೂ. ಸಹಾಯಧನ, 2 ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ, 16,400 ಮಕ್ಕಳಿಗೆ ಕಲಿಕಾ ಉಪಕರಣಗಳ ವಿತರಣೆ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬೆಳಗಾವಿ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ತಾತ್ಕಾಲಿಕ ವಸತಿ ಗೃಹ ಸೇರಿದಂತೆ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳಡಿ 23 ಲಕ್ಷ ಫಲಾನುಭವಿಗಳು ಮತ್ತು ಅವಲಂಬಿತರಿಗೆ ಒಟ್ಟು 1,785 ಕೋಟಿ ರೂ. ಗಳ ನೆರವನ್ನು ನೀಡಲಾಗಿದೆ.

211. 2022 ರಲ್ಲಿ “ಕಾರ್ಮಿಕ ಅದಾಲತ್-2” ನಡೆಸಿ 1.71 ಲಕ್ಷ ಅರ್ಹ ಕಾರ್ಮಿಕರಿಗೆ 85 ಕೋಟಿ ರೂ. ಪರಿಹಾರ ಒದಗಿಸಲಾಗಿದೆ.
212. ಹೊರ ರಾಜ್ಯದಿಂದ ವಲಸೆ ಬಂದ ಕಟ್ಟಡ ಕಾರ್ಮಿಕರ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೆರವು ನೀಡಲಾಗುವುದು.

213. ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ ರಾಜ್ಯಾದ್ಯಂತ 19 ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯಗಳನ್ನು ನೂತನವಾಗಿ ಪ್ರಾರಂಭಿಸಲು ಹಾಗೂ ಹುಬ್ಬಳ್ಳಿ ಮತ್ತು ದಾವಣಗೆರೆಯ ESI ಆಸ್ಪತ್ರೆಗಳಲ್ಲಿನ ಹಾಸಿಗೆ ಸಾಮರ್ಥ್ಯವನ್ನು 50 ರಿಂದ 100ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

214. ರಾಜ್ಯದಲ್ಲಿರುವ ESI ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸಲು 7 ಆಸ್ಪತ್ರೆಗಳಲ್ಲಿ ಐ.ಸಿ.ಯು ಸ್ಥಾಪಿಸಲು, 6 ಆಸ್ಪತ್ರೆಗಳಲ್ಲಿ ಆಯುಷ್ ಘಟಕ ಪ್ರಾರಂಭಿಸಲು ಹಾಗೂ ಜಿಲ್ಲೆಗೊಂದರಂತೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಉನ್ನತೀಕರಿಸಲು ಕೇಂದ್ರ ಕಾರ್ಮಿಕ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹೊಸದಾಗಿ ಪ್ರಾರಂಭಿಸಿರುವ 19 ESI ಚಿಕಿತ್ಸಾಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ 6 ಹೊಸ ESI ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ.

215. ಕಾರ್ಖಾನೆಗಳು, ಬಾಯ್ಲರುಗಳು. ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ಒದಗಿಸುತ್ತಿರುವ ಎಲ್ಲಾ ಸೇವೆಗಳನ್ನು ಸುಲಭವಾಗಿ ಮತ್ತು ಸಕಾಲದಲ್ಲಿ ಒದಗಿಸಲು ಅನುವಾಗುವಂತೆ ಹೊಸ ಆನ್ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು.

216. ಕರ್ನಾಟಕದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಶ್ರಮಜೀವಿಗಳ ಬದುಕಿಗೆ ಭದ್ರತೆ ಒದಗಿಸಲು “ʻಕರ್ನಾಟಕ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿʼ” ಯನ್ನು ಸ್ಥಾಪಿಸಲಾಗುವುದು. ಸದ್ಯಕ್ಕೆ ಆಸ್ತಿ ತೆರಿಗೆ ಮೇಲೆ ವಿಧಿಸಿರುವ ಸೆಸ್ ಪ್ರಮಾಣವನ್ನು ಹೆಚ್ಚಿಸದೆ ಆಂತರಿಕವಾಗಿ ಸೆಸ್ ದರಗಳನ್ನು ಮಾರ್ಪಾಡುಗೊಳಿಸಲಾಗುವುದು. ಈ ಸೆಸ್ ಮೂಲಕ ನೋಂದಾಯಿತ 75 ಲಕ್ಷಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು.

217. ಕರ್ನಾಟಕ ರಾಜ್ಯದ ದುಡಿಯುತ್ತಿರುವ ಜನರಲ್ಲಿ ಶೇ. 24 ರಷ್ಟು ಜನ ಸಂಘಟಿತ ವಲಯದಲ್ಲಿ ಉದ್ಯೋಗಿಗಳಾಗಿದ್ದಾರೆ. ಇದು ದೇಶದ ಸರಾಸರಿ, ಶೇ. 20ಕ್ಕಿಂತ ಹೆಚ್ಚಾಗಿದೆ. ರಾಜ್ಯದ ನಿರುದ್ಯೋಗ ಪ್ರಮಾಣವು ಶೇ. 2.7 ರಷ್ಟಿದ್ದು, ಇದು ದೇಶದ ನಿರುದ್ಯೋಗ ಪ್ರಮಾಣ ಶೇ.4.2 ಕ್ಕಿಂತ ಕಡಿಮೆ ಇದೆ. 2022-23ನೇ ಸಾಲಿನ ಕರ್ನಾಟಕ ಉದ್ಯೋಗ ವರದಿಯ ಪ್ರಕಾರ EPFO ಗೆ ಸೇರ್ಪಡೆಯಾದ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ. 10.4 ರಷ್ಟಾಗಿದೆ. 2021-22ರಲ್ಲಿ ಕರ್ನಾಟಕದ ಸಂಘಟಿತ ವಲಯದಲ್ಲಿ ಕಳೆದ ಐದು ವರ್ಷಗಳಲ್ಲಿಯೇ ಅತಿ ಹೆಚ್ಚು ಅಂದರೆ 15 ಲಕ್ಷ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ.

218. ಪ್ರಸಕ್ತ ಸಾಲಿನಲ್ಲಿ ಪಿಎಂ-ಸ್ವನಿಧಿ ಯೋಜನೆಯಡಿ ನವೆಂಬರ್ 2022 ರ ಅಂತ್ಯದವರೆಗೆ 69,000 ಬೀದಿ ಬದಿ ವ್ಯಾಪಾರಿಗಳಿಗೆ 70 ಕೋಟಿ ರೂ. ಗಳಷ್ಟು ಸಾಲ ಮಂಜೂರು ಮಾಡಲಾಗಿದೆ.

219. ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ಅಮೃತ ಕೌಶಲ್ಯ ತರಬೇತಿ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮತ್ತು ಇತರ ಕಾರ್ಯಕ್ರಮಗಳಡಿ ಒಟ್ಟು 1.12 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತರಬೇತಿ ಪಡೆದ ಹಾಗೂ ಸ್ಕಿಲ್ ಕನೆಕ್ಟ್ ಪೋರ್ಟಲ್ ಮತ್ತು ಉದ್ಯೋಗ ಮೇಳಗಳ ಮೂಲಕ 51,000 ಜನರಿಗೆ ಉದ್ಯೋಗಾವಕಾಶ ದೊರೆತಿರುತ್ತದೆ. ಪ್ರಸಕ್ತ ವರ್ಷದಲ್ಲಿ 5 ಲಕ್ಷ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಲಾಗುವುದು.

220. ಕೌಶಲ್ಯಾಭಿವೃದ್ಧಿ ಇಲಾಖೆಯಡಿಯಲ್ಲಿ ಇದುವರೆಗೂ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಕೌಶಲ್ಯ ತರಬೇತಿಯನ್ನು ನಮ್ಮ ITI, GTTC, Polytechnic ಸಂಸ್ಥೆಗಳ ಮೂಲಕವೇ ನೀಡಿ, Industry ಮತ್ತು Academia ವನ್ನು ಸಮನ್ವಯಗೊಳಿಸಿ ಕೌಶಲ್ಯ ತರಬೇತಿಯನ್ನು ಹೆಚ್ಚಿನ ಸಾಂಸ್ಥೀಕರಣ ಹಾಗೂ ವ್ಯವಸ್ಥೀಕರಣಗೊಳಿಸುವುದು.

221. ಸಾಂಪ್ರದಾಯಿಕ ಕೌಶಲ್ಯಗಳ ಪುನರುಜ್ಜೀವನಕ್ಕಾಗಿ ಬಿದಿರಿನ ಉತ್ಪನ್ನಗಳಲ್ಲಿ ಮೇದಾರ ಸಮುದಾಯಕ್ಕೆ, ಚನ್ನಪಟ್ಟಣ ಗೊಂಬೆಗಳ ತಯಾರಿಕೆಗೆ, ಕಿನ್ಹಾಳ ಕಲೆಗಾಗಿ ಚಿತ್ರಗಾರ ಸಮುದಾಯಕ್ಕೆ ಹಾಗೂ ಕುಂಬಾರಿಕೆ, ಬಿದರಿ ಕಲೆ, ಕಸೂತಿ ಮುಂತಾದ ಕಲೆಗಳಲ್ಲಿ ಆಯ್ದ ತಲಾ 100 ಅಭ್ಯರ್ಥಿಗಳಿಗೆ ಉನ್ನತ ಮಟ್ಟದ ಕೌಶಲ್ಯವರ್ಧನಾ ತರಬೇತಿ ನೀಡಲಾಗುವುದು.

222. ವಿದೇಶಿ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅಂತಾರಾಷ್ಟ್ರೀಯ ವಲಸೆ ಕೇಂದ್ರದ ವತಿಯಿಂದ 8 ಜಿಲ್ಲೆಗಳಲ್ಲಿ ಸಂಪನ್ಮೂಲ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು 4 ಜಿಲ್ಲೆಗಳಲ್ಲಿ ಪೂರ್ವ ನಿರ್ಗಮನದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

223. ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ತರಬೇತಿಯನ್ನು ಉಚಿತವಾಗಿ ಬಿಪಿಎಲ್ ಕುಟುಂಬಗಳ ಒಟ್ಟು 12,110 ಯುವಕ-ಯುವತಿಯರಿಗೆ ನೀಡಲಾಗಿದ್ದು, ತರಬೇತಿ ಪಡೆದ ಫಲಾನುಭವಿಗಳು ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ.

224. ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ 50 ವರ್ಷಗಳನ್ನು ಪೂರೈಸಿದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳಾಗಿ ಅಭಿವೃದ್ಧಿ ಪಡಿಸಿ, ಆ ಭಾಗದ ಯುವಕರಿಗೆ ಕೈಗಾರಿಕೆಗಳ ಬೇಡಿಕೆಗಳಿಗನುಗುಣವಾಗಿ ತಾಂತ್ರಿಕ ಜ್ಞಾನವನ್ನು ನೀಡಲು ಹೊಸ ಯಂತ್ರೋಪಕರಣ ಮತ್ತು ಸಲಕರಣೆಗಳನ್ನು 100 ಕೋಟಿ ರೂ. ಗಳ ವೆಚ್ಚದಲ್ಲಿ ಖರೀದಿಸಲಾಗುವುದು.

225. “ʻಕಲಿಕೆ ಜೊತೆಗೆ ಕೌಶಲ್ಯ”ʼ ಎಂಬ ವಿನೂತನ ಕಾರ್ಯಕ್ರಮದಡಿ ಕೈಗಾರಿಕಾ ಆದ್ಯತಾ ಮತ್ತು ಉದ್ಯಮಶೀಲತಾ ತರಬೇತಿಗಳನ್ನು ಸರ್ಕಾರಿ ಪ್ರಥಮ ದರ್ಜೆ, ಇಂಜಿನಿಯರಿಂಗ್, ಹಾಗೂ ಐ.ಟಿ.ಐ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಇದೇ ಮಾದರಿಯಲ್ಲಿ ಕ್ರೈಸ್ ಸಂಸ್ಥೆಯ ಅಧೀನದ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೂ ಹೆಚ್ಚುವರಿ ತಾಂತ್ರಿಕ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.

226. ಬೆಂಗಳೂರು ನಗರದಲ್ಲಿ ವಿಶೇಷ ಚೇತನ ಮಕ್ಕಳಿಗೆ ಹೊಂದುವಂತಹ ಕೌಶಲ್ಯ ತರಬೇತಿ ನೀಡಿ ಅವರುಗಳನ್ನು ಉದ್ಯೋಗಸ್ಥರನ್ನಾಗಿ ಮಾಡಲು ಅವರುಗಳಿಗೆ ಅಲ್ಪಾವಧಿ ತರಬೇತಿ ಕೋರ್ಸ್ಗಳಿಗೆ ಒತ್ತು ನೀಡಿ ವಿಶೇಷ ಕೌಶಲ್ಯ ತರಬೇತಿ ನೀಡಲಾಗುವುದು.

227. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 2023-24ನೇ ಸಾಲಿನಲ್ಲಿ ಒಟ್ಟಾರೆಯಾಗಿ 80,318 ಕೋಟಿ ರೂ. ಒದಗಿಸಲಾಗುವುದು.

******

";