ಜಿಲ್ಲೆಯ ಹಲವರಿಗೆ ಪ್ರಸಂಶನಾ ಪತ್ರಕ್ಕೆ ಶಿಪಾರಸ್ಸು
ನಿಮ್ಮ ಸುದ್ದಿ ಬಾಗಲಕೋಟೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಆಹಾರ ಆಯೋಗವು ಬದ್ದವಾಗಿದೆ ಎಂದು ಆಯೋಗದ ಅಧ್ಯಕ್ಷ ಎಚ್.ವಿ.ಶಿವಶಂಕರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರ ನೀಡುವ ಉಚಿತ ಆಹಾರಧಾನ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಆಯೋಗವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಪ್ರವಾಸದಲ್ಲಿ ಬಾಗಲಕೋಟೆ ಜಿಲ್ಲೆ ೨೯ನೇಯದ್ದಾಗಿದೆ. ಜಿಲ್ಲೆಯ ೯ ತಾಲೂಕುಗಳ ಪೈಕಿ ೪೮ ಸಂಸ್ಥೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡುರುವುದು ಕಂಡುಬಂದಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ೭ ನ್ಯಾಯಬೆಲೆ ಅಂಗಡಿ, ೩ ಆಹಾರಧಾನ್ಯಗಳ ಗೋದಾಮು, ೫ ಅಂಗನವಾಡಿ ಕೇಂದ್ರ, ೪ ರೈತ ಸಂಪರ್ಕ ಕೇಂದ್ರ, ೯ ವಿವಿಧ ವಸತಿ ನಿಲಯ, ೪ ಅನಾಥಾಶ್ರಮ, ೨ ಎಚ್.ಆರ್.ಸಿ ಕೇಂದ್ರ, ೧ ಕೆಎಂ.ಎಫ್ ಹಾಗೂ ೨ ಮಧ್ಯಾಹ್ನದ ಬಿಸಿ ಊಟದ ಕೇಂದ್ರ ಸೇರಿದಂತೆ ಇತರೆ ಸಂಸ್ಥೆಗಳಿಗೆ ಭೇಟಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು. ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ಅಂಗಡಿಯಲ್ಲಿ ಮಾತ್ರ ಕಡಲೆ ಕಾಳು ಗುಣವಾಗಿರಲಿಲ್ಲ. ಅವುಗಳ ಸ್ಯಾಂಪಲ್ ಪಡೆದು ಆಹಾರ ಸಂರಕ್ಷಣಾ ಇಲಾಖೆಗೆ ಪರಿಶೀಲನೆಗೆ ನೀಡಿದ್ದು, ವರದಿ ಬಂದ ನಂತರವೇ ವಿತರಣೆಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ನಿರ್ವಹಣೆ ಕೊರತೆ ಇದೆ. ಸ್ಟಾಕ್ ರಜಿಸ್ಟರ ಚಾಲ್ತಿಯಲ್ಲಿ ಇಲ್ಲದಿರುವುದು ಕಂಡುಬಂದಿದ್ದು, ಸಂಬಂಧಿಸಿದ ಸಿಡಿಪಿಓ ಮತ್ತು ಮೇಲ್ವಿಚಾರಕರು ಕೇಂದ್ರಗಳಿಗೆ ಭೇಟಿ ನೀಡಿರುವ ಬಗ್ಗೆ ಯಾವುದೇ ದಾಖಲೆ ಇರುವದಿಲ್ಲ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮಕೈಗೊಳ್ಳಲು ಸೂಚಿಸಿದರು. ಹುನಗುಂದದಲ್ಲಿರುವ ಒಂದು ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ನೀಡಿಲ್ಲ, ಕೆಲವೊಂದು ಕಡೆ ಅಂದಾಜಿನ ಮೇಲೆ ಆಹಾರ ಧಾನ್ಯ ವಿತರಣೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಕ್ರಮದ ಬಗ್ಗೆ ಕೇಳಿದಾಗ ಈಗಾಗಲೇ ನರೇಗಾ ಯೋಜನೆಯಡಿ ಕ್ರಮಕೈಗೊಂಡಿರುವುದಾಗಿ ಜಿ.ಪಂ ಉಪಕಾರ್ಯದರ್ಶಿಗಳು ತಿಳಿಸಿದರು.
ವಸತಿ ನಿಲಯಗಳಿಗೆ ಶೇ.೯೫ ರಷ್ಟು ಪಿಲ್ಲೋಸ್, ಕರ್ಟನ್ ನೀಡಿದ್ದು, ಸರಿಯಾಗಿ ವಿತರಣೆಯಾಗಿರುವದಿಲ್ಲ. ಅಲ್ಲದೇ ಬರ್ನಿಂಗ್ ಮಶೀನ್ ಬಳಕೆಯಾಗುತ್ತಿಲ್ಲ. ಇದನ್ನು ಹೊರತು ಪಡಿಸಿ ಉಳಿದೆಲ್ಲ ವ್ಯವಸ್ಥೆಗಳು ಚೆನ್ನಾಗಿರುವುದಾಗಿರುವಾಗಿ ಪ್ರಸಂಶೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ೫ ಎಂ.ಎಸ್.ಪಿಟಿಸಿಗಳು ಚೆನ್ನಾಗಿ ಕೆಲಸ ನಿರ್ವಹಿಸುತ್ತಿದ್ದು, ಸ್ವಚ್ಛತೆಗೆ ಹೆಚ್ಚು ಗನಹರಿಸಿದ್ದಾರೆ. ಜಮಖಂಡಿ ಎಂ.ಎಸ್.ಪಿ.ಟಿ.ಸಿ ಕೇಂದ್ರವು ಉತ್ತಮ ನಿರ್ವಹಣೆ ಮಾಡುತ್ತಿದ್ದು, ಪ್ರಸಂಶನಾ ಪತ್ರಕ್ಕೆ ಅರ್ಹವಾಗಿವೆ. ಅಲ್ಲದೇ ತುಳಸಿಗೇರಿ ಎಸ್.ಡಿ.ಎಂಸಿ ಅಧ್ಯಕ್ಷರು ಕುವೆಂಪು ಮಾದರಿ ಶಾಲೆಯಲ್ಲಿ ಉತ್ತಮ ಪರಿಸರ ಸೃಷ್ಠಿಸಿದಕ್ಕಾಗಿ ಅವರಿಗೂ ಸಹ ಆಯೋಗದಿಂದ ಪ್ರಸಂಶನಾ ಪತ್ರ ನೀಡಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಆಹಾರ ಆಯೋಗದ ಸದಸ್ಯೆ ಮಂಜುಳಾ ಸಾತನೂರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇತ ಪೋತದಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ಡೊಂಬರ, ಕೃಷಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆಹಾರ ಇಲಾಖೆಯ ಉತ್ತಮ ಕಾರ್ಯಕ್ಕೆ ಅಭಿನಂದನೆ
ರಾಜ್ಯಾದ್ಯಂತ ಆಯೋಗದಿಂದ ಪ್ರವಾಸ ಕೈಗೊಂಡಿದ್ದು, ರಾಜ್ಯದ ಯಾವ ಜಿಲ್ಲೆಯಲ್ಲಿಯೂ ನೂರಕ್ಕೆ ನೂರರಷ್ಟು ಆಹಾರಧಾನ್ಯ ವಿತರಣೆಯಲ್ಲಿ ಪ್ರಗತಿ ಸಾಧಿಸಿರುವದಿಲ್ಲ. ಬಾಗಲಕೋಟೆ ಜಿಲ್ಲೆ ಮಾತ್ರ ನೂರಕ್ಕೆ ನೂರರಷ್ಟು ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಆದ್ದರಿಂದ ಆಹಾರ ಇಲಾಖೆಯ ಉತ್ತಮ ಕಾರ್ಯವನ್ನು ಕಂಡು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ವಿ.ಶಿವಶಂಕರ್ ಅಭಿನಂದನೆ ಸಲ್ಲಿಸಿದರು.