ಡಿಸಿಎಂ ಕಾರಜೋಳ ವ್ಯಂಗ್ಯ
ನಿಮ್ಮ ಸುದ್ದಿ ಬಾಗಲಕೋಟೆ
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ವಕ್ತಾರರಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದೇ, ಪದೆ ಸಿಎಂ ಬದಲಾಗಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದು, ಅವರು ನಮ್ಮ ಪಕ್ಷದ ವಕ್ತಾರರಲ್ಲ, ಅಂಥ ಯಾವ ಚಿಂತನೆಗಳು ಪಕ್ಷದ ಹೈಕಮಾಂಡ್‌ನಲ್ಲಿ ಇಲ್ಲ ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆಯಲ್ಲಿ ಇತ್ತೀಚೆಗೆ ಗೆದ್ದವರ ಸೇರ್ಪಡೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಅಂಥ ಸಮಯ ಬಂದಾಗ ಯೋಚಿಸೋಣ ಎಂದರು.
ಮಹಾಲಿಂಗಪುರದಲ್ಲಿ ಶಾಸಕ ಸಿದ್ದು ಸವದಿ ಅವರು ಸದಸ್ಯೆಯ ರಕ್ಷಣೆಗೆ ಮುಂದಾಗಿರುವುದಾಗಿ ಸ್ಪಷ್ಟಿಕರಣ ನೀಡಿದ್ದಾರೆ. ಅವರಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ ಎಂದು ತೆರೆ ಎಳೆದರು.
ಜನವರಿ ಹೊತ್ತಿಗೆ ಕೋವಿಡ್ ಲಸಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ವ್ಯಾಕ್ಸಿನ್ ಸಂಗ್ರಹಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಕೋವಿಡ್ ಪ್ರಮಾಣ ಕಡಿಮೆ ಆಗಿದ್ದರೂ ಜನ ಮೈ ಮರೆಯಬಾರದು. ದೀಪಾವಳಿ ಸಂದರ್ಭದಲ್ಲಿ ಕಡಿಮೆ ಹೊಗೆಯಿರುವ ಹಸಿರು ಪಟಾಕಿಗಳನ್ನಷ್ಟೇ ಸಿಡಿಸಬೇಕು. ಪಟಾಕಿಯಿಂದಾಗಿ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಕೋವಿಡ್ ಸಂದರ್ಭದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.
ಕೋವಿಡ್ ಕಾರಣದಿಂದಾಗಿ ರಾಜ್ಯದ ಆದಾಯಕ್ಕೆ ಶೇ.೭೦ ಖೋತಾ ಬಿದ್ದಿದೆ. ೧೧ ತಿಂಗಳಿನಿಂದ ಆರ್ಥಿಕ ಸಂಕಷ್ಟ ಇದ್ದರೂ ಸರ್ಕಾರ ಸರ್ಕಾರಿ ನೌಕರರ ಸಂಬಳ ನಿಲ್ಲಿಸಿಲ್ಲ. ಆದಾಯವಿಲ್ಲದಿದ್ದರೂ ಸಾಲ ಮಾಡಿ ಸಾರಿಗೆ ಸಂಸ್ಥೆ ಸಿಬ್ಬಂದಿಯ ಸಂಬಳ ಪಾವತಿಸುತ್ತಿದೆ. ಇದು ನಿಯಂತ್ರಣಕ್ಕೆ ಬರುತ್ತಿದ್ದಂತೆ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಚುರುಕುಗೊಳ್ಳಲಿವೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಸಂಕಷ್ಟದ ಮಧ್ಯೆಯೂ ಹಣಕಾಸು ಇಲಾಖೆಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚಿನ ಪ್ರವಾಹದಿಂದಾಗಿ ೨೫ ಸಾವಿರ ಕೋಟಿ ರೂ. ಹಾನಿ ಆಗಿದೆ ಎಂದು ಸರ್ಕಾರ ವರದಿ ಸಲ್ಲಿಸಿದರೂ ಕೇಂದ್ರ ಸರ್ಕಾರ ೫೭೭ ಕೋಟಿ ರೂ.ಗಳನ್ನು ಮಾತ್ರವೇ ಬಿಡುಗಡೆಗೊಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ ಅವರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಗಳ ಅನುಸಾರ ಕೇಂದ್ರ ಅನುದಾನ ಬಿಡುಗಡೆಗೊಳಿಸಿರುತ್ತದೆ. ಹೆಚ್ಚಿನ ಅನುದಾನ ಬರುವ ಭರವಸೆ ಇದೆ ಎಂದರು. ಶಾಸಕರಾದ ಡಾ.ವೀರಣ್ಣ ಚರಂತಿಮಠ, ಹಣಮಂತ ನಿರಾಣಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕ್ ಸದಸ್ಯ ರಾಮಣ್ಣ ತಳೇವಾಡ ಉಪಸ್ಥಿತರಿದ್ದರು.