This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

National NewsPolitics News

ತಡವಾಗಿದ್ದಕ್ಕೆ ಕ್ಷಮಿಸು ರಾಮ: ಮೋದಿ

ತಡವಾಗಿದ್ದಕ್ಕೆ ಕ್ಷಮಿಸು ರಾಮ: ಮೋದಿ

ಅಯೋಧ್ಯ: ಜಗದ ಮೂಲೆ ಮೂಲೆಯಲ್ಲಿರುವ ಎಲ್ಲ ರಾಮ ಭಕ್ತರಿಗೂ ನನ್ನ ಶುಭಾಶಯಗಳು. ನಿಮ್ಮೆಲ್ಲರಿಗೂ ರಾಮ್ ರಾಮ್… ಇಂದು ನಮ್ಮ ರಾಮ ಮರಳಿದ್ದಾನೆ. ಶತಮಾನಗಳವರೆಗೆ ಕಾದ ನಂತರ ನಮ್ಮ ರಾಮ ಅಯೋಧ್ಯೆಗೆ ಆಗಮಿಸಿದ್ದಾನೆ. ಪ್ರತಿಯೊಬ್ಬ ಭಾರತೀಯನ ಮನದಲ್ಲೂ ರಾಮ ವಿರಾಜಮಾನನಾಗಿದ್ದಾನೆ. ಶತಮಾನಗಳ ಅಭೂತಪೂರ್ವ ತಾಳ್ಮೆ, ಅಸಂಖ್ಯ ತ್ಯಾಗ ಮತ್ತು ತಪಸ್ಸಿನ ನಂತರ ನಮ್ಮ ರಾಮ ಬಂದಿದ್ದಾನೆ. ಈ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು.
ನಾನು ಗರ್ಭಗುಡಿಯಲ್ಲಿ ದೈವಿಕ ಪ್ರಜ್ಞೆಯ ಸಾಕ್ಷಿಯಾಗಿ ಈಗ ನಿಮ್ಮ ಮುಂದೆ ನಿಂತಿದ್ದೇನೆ. ಹೇಳಲು ಅಂತರಂಗದಲ್ಲಿ ಬಹಳ ಇದೆ. ನನ್ನ ದೇಹ ಇನ್ನೂ ಕಂಪಿಸುತ್ತಿದೆ. ಗರ್ಭಗುಡಿಯ ಆ ದಿವ್ಯ ಕ್ಷಣದೊಳಗೆ ನನ್ನ ಮನಸ್ಸು ಇನ್ನೂ ಲೀನವಾದಂತಿದೆ. ನಮ್ಮ ರಾಮಲಲ್ಲಾ ಇನ್ನು ಮುಂದೆ ಟೆಂಟಿನೊಳಗೆ ವಾಸಿಸುವುದಿಲ್ಲ; ಭವ್ಯ ಮಂದಿರದಲ್ಲಿ ಸಾನ್ನಿಧ್ಯ ವಹಿಸಿದ್ದಾನೆ. ಪ್ರಪಂಚದ ಪ್ರತಿಯೊಬ್ಬ ರಾಮಭಕ್ತನೂ ಈ ದಿವ್ಯ ಕ್ಷಣವನ್ನು ಸಂಭ್ರಮದಿಂದ ಅನುಭವಿಸುತ್ತಿದ್ದಾರೆ ಎಂಬ ನಂಬಿಕೆ ನನ್ನದು. ಈ ಪರಿಸರ, ಈ ವಾತಾವರಣ, ಈ ಶಕ್ತಿ, ಈ ಕ್ಷಣ, ಈ ಪುಳಕಗಳೆಲ್ಲವೂ ಶ್ರೀರಾಮನ ಆಶೀರ್ವಾದ.
2024, ಜನವರಿ 22ರ ಈ ದಿನದ ಸೂರ್ಯನು ಧರೆಗೆ ಅದ್ಭುತ ಶಕ್ತಿಯನ್ನೇ ಹೊತ್ತು ತಂದಿದ್ದಾನೆ. ಇದು ಕೇವಲ ದಿನಾಂಕವಲ್ಲ, ಹೊಸ ಶಕೆಯ ಉದಯ. ರಾಮಮಂದಿರ ನಿರ್ಮಾಣದ ನಂತರ ದೇಶದ ಜನರಲ್ಲಿ ಹೊಸ ಉತ್ಸಾಹ ಮೂಡಿದೆ. ಶತಮಾನಗಳ ಪರಂಪರೆ ರೂಪದಲ್ಲಿ ನಮ್ಮ ಮುಂದೆ ರಾಮಮಂದಿರ ನಿಂತಿದೆ. ಗುಲಾಮಗಿರಿಯ ಮನಸ್ಥಿತಿ ಮುರಿದು, ಹೊಸ ಇತಿಹಾಸವನ್ನು ಸೃಷ್ಟಿಸಿದ್ದೇವೆ.
ಪವಿತ್ರ ಅಯೋಧ್ಯಾಪುರಿ ಮತ್ತು ಸರಯೂ ನದಿಗೂ ನನ್ನ ನಮನಗಳು. ನಾನೀಗ ದೈವಿಕವಾಗಿ ಪುಳಕಿತನಾಗಿದ್ದೇನೆ. ಈ ದಿವ್ಯ ಅನುಭವ ನಮ್ಮ ಸುತ್ತಮುತ್ತಲಿರುವ ಎಲ್ಲರಿಗೂ ಆಗಿದೆ. ಅವರೆಲ್ಲರಿಗೂ ಕೃತಜ್ಞತೆಯ ನಮನ. ಇಂಥ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲು ನಾವು ಜೀವಿತವಿರುವುದೇ ಒಂದು ಸೌಭಾಗ್ಯ. ಕ್ಷಮಿಸು ರಾಮ… ನಮ್ಮ ತ್ಯಾಗ, ತಪಸ್ಸು, ಆರಾಧನೆಯ ಹೊರತಾಗಿಯೂ ಈ ಕಾರ್ಯವನ್ನು ಇಷ್ಟು ಶತಮಾನಗಳಿಂದ ನಮಗೆ ಮಾಡಲಾಗಿರಲಿಲ್ಲ. ಏನೋ ಲೋಪ ಸಂಭವಿಸಿ, ಮಂದಿರ ನಿರ್ಮಾಣ ವಿಳಂಬವಾಯಿತೇನೋ. ಇಂದು ಆ ಕೊರತೆಗಳೆಲ್ಲ ನೀಗಿ ಮಂದಿರ ಎದ್ದು ನಿಂತಿದೆ. ಭಗವಾನ್ ರಾಮ ಖಂಡಿತ ನಮ್ಮನ್ನು ಕ್ಷಮಿಸುವನು.
ತ್ರೇತಾಯುಗದಲ್ಲಿನ ರಾಮನ ಆಗಮನದ ಬಗ್ಗೆ ತುಳಸಿ ದಾಸರು ಹೀಗೆ ಬಣ್ಣಿಸುತ್ತಾರೆ: ‘‘ಅಯೋಧ್ಯೆಗೆ ಭಗವಂತನ ಆಗಮನದಿಂದ ಎಲ್ಲಾ ಪ್ರಜೆಗಳಲ್ಲೂ ಸಂತಸ ಮನೆಮಾಡಿತ್ತು. ಆಪತ್ತೆಲ್ಲವೂ ಕಳೆಯಿತು’,’’ ಎಂದು ಜನ ನಂಬುತ್ತಾರೆ. ಅಲ್ಲಿ ಅವರು 14 ವರ್ಷ ಕಾದಿದ್ದರು. ಈಗ ನಾವು ನೂರಾರು ವರ್ಷಗಳಿಂದ ರಾಮ ಹೊರಗುಳಿದಿದ್ದನ್ನು ಸಹಿಸಿಕೊಂಡಿದ್ದೇವೆ. ಭಾರತದ ಸಂವಿಧಾನದ ಮೊದಲ ಪ್ರತಿಯಲ್ಲಿ ಶ್ರೀರಾಮನಿದ್ದಾನೆ. ಭಗವಾನ್ ರಾಮನ ಅಸ್ತಿತ್ವದ ಕುರಿತಾದ ಕಾನೂನು ಹೋರಾಟ ದಶಕಗಳ ಕಾಲ ನಡೆಯಿತು. ನ್ಯಾಯಾಂಗ ತನ್ನ ಘನತೆಯನ್ನು ಕಾಪಾಡಿದ್ದಕ್ಕಾಗಿ ನಾನು ಕೃತಜ್ಞ.
ಇಂದು ಪ್ರತಿ ಹಳ್ಳಿಯಲ್ಲೂ ಕೀರ್ತನೆ- ಸಂಕೀರ್ತನೆ ನಡೆಯುತ್ತಿದೆ. ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ದೇಶವೇ ದೀಪಾವಳಿ ಆಚರಿಸುತ್ತಿದೆ. ಪ್ರತಿ ಮನೆಯಲ್ಲೂ ರಾಮ ಜ್ಯೋತಿ ಬೆಳಗುತ್ತಿದೆ. ನಿನ್ನೆ ನಾನು ಧನುಷ್ಕೋಟಿಯಲ್ಲಿದ್ದೆ. ರಾಮನು ಸಾಗರವನ್ನು ದಾಟಲು ಹೊರಟ ಸಮಯ ಬದಲಾಗಿದೆ. ಈಗ ಭಾರತದ ಕಾಲಚಕ್ರ ಬದಲಾಗಲಿದೆ. ವಿಧಿವಿಧಾನಗಳ ಸಮಯದಲ್ಲಿ ಸಾಗರದಿಂದ ಸರಯೂಗೆ ಪ್ರಯಾಣಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಭಾರತೀಯರ ಮನದಲ್ಲಿ ರಾಮ ನೆಲೆಸಿದ್ದಾನೆ. ನೀವು ಯಾರ ಹೃದಯಕ್ಕೆ ಕಿವಿಗೊಟ್ಟರೂ ಕೇಳುತ್ತಿರುವುದು ಈಗ ರಾಮನ ಕುರಿತಾದ ಏಕತೆಯ ಎದೆಬಡಿತ.
ದೇಶದ ಮೂಲೆ ಮೂಲೆಯಲ್ಲಿ ರಾಮಾಯಣ ಕೇಳುವ ಅವಕಾಶ ಲಭಿಸಿದಂತಾಗಿದೆ. ಕಳೆದ 11 ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಮತ್ತು ವಿವಿಧ ಭಾಷೆಗಳಲ್ಲಿ ರಾಮಾಯಣವನ್ನು ಕೇಳುವ ಅವಕಾಶ ಸಿಕ್ಕಿತು. ಪ್ರತಿ ಕಾಲಘಟ್ಟದಲ್ಲಿಯೂ ಜನರು ರಾಮನಾಗಿಯೇ ಬದುಕಿದ್ದಾರೆ. ಪ್ರತಿ ಯುಗದಲ್ಲೂ ಜನರು ರಾಮನನ್ನು ತಮ್ಮದೇ ಮಾತಿನಲ್ಲಿ, ತಮ್ಮದೇ ಅಭಿವ್ಯಕ್ತಿಗಳಲ್ಲಿ ರಾಮನನ್ನು ನಿರೂಪಿಸಿದ್ದಾರೆ. ಈ ರಾಮರಸವು ನಿರಂತರವಾಗಿ ಹರಿಯುತ್ತಿರುವ ಪ್ರವಾಹ. ರಾಮನಿಗಾಗಿ ಹಾಗೆ ತ್ಯಾಗಗೈದವರನ್ನೂ ನಾವು ಸ್ಮರಿಸಲೇಬೇಕು. ಅವರಿಂದಲೇ ನಾವು ಈ ಶುಭದಿನವನ್ನು ಕಾಣುವಂತಾಯಿತು. ಅಂಥ ಅಸಂಖ್ಯಾತ ಕರಸೇವಕರು, ಸಂತರು ಮತ್ತು ಮಹಾತ್ಮರಿಗೆ ನಾವು ಋಣಿ. ಇದು ಕೇವಲ ಸಂಭ್ರಮದ ಕ್ಷಣ ಮಾತ್ರವಲ್ಲ; ಭಾರತೀಯ ಸಮಾಜದ ಪ್ರಬುದ್ಧತೆಯ ಕ್ಷಣ ಕೂಡ. ಇದು ಕೇವಲ ವಿಜಯದ ಕ್ಷಣ ಮಾತ್ರವಲ್ಲ; ನಮ್ರತೆಯ ಕ್ಷಣ ಕೂಡ.
ಜಗತ್ತಿನ ಅನೇಕ ರಾಷ್ಟ್ರಗಳು ತಮ್ಮದೇ ಚರಿತ್ರೆಯ ವ್ಯೆಹದೊಳಗೆ ಸಿಲುಕಿಕೊಳ್ಳುತ್ತವೆ. ಅವರು ಆ ಇತಿಹಾಸದ ಗಂಟುಗಳನ್ನು ಬಿಡಿಸಲು ಪ್ರಯತ್ನಿಸಿದಾಗಲೆಲ್ಲಾ ಕಷ್ಟಕರ ಸಂದರ್ಭಗಳೇ ಉದ್ಭವಿಸಿದವು. ನಾವು ಬಹಳ ಸೂಕ್ಷ್ಮವಾಗಿ ಆ ಗಂಟನ್ನು ಬಿಡಿಸಿಕೊಂಡಿದ್ದೇವೆ. ನಮ್ಮ ಭವಿಷ್ಯ ಸುಂದರವಾಗಿರಲಿದೆ. ರಾಮಮಂದಿರ ಕಟ್ಟಿದರೆ ಬೆಂಕಿ ಬೀಳುತ್ತದೆ ಎಂದು ಕೆಲವರು ಹೇಳುತ್ತಿದ್ದರು. ರಾಮಮಂದಿರವು ಯಾವುದೇ ಬೆಂಕಿ ಸೃಷ್ಟಿಸಿಲ್ಲ. ಆದರೆ ಶಕ್ತಿಗೆ ಜನ್ಮ ನೀಡಿದೆ. ಉಜ್ವಲ ಭವಿಷ್ಯದ ಹಾದಿಯಲ್ಲಿ ಮುನ್ನಡೆಯಲು ನಮಗೆಲ್ಲ ಸ್ಫೂರ್ತಿ ನೀಡಿದೆ. ಏಕೆಂದರೆ, ರಾಮನು ಬೆಂಕಿಯಲ್ಲ, ಅವನು ಬೆಳಕು. ರಾಮ ವಿವಾದವಲ್ಲ; ಸಮಾಧಾನ. ರಾಮ ಕೇವಲ ನಮ್ಮವನಲ್ಲ; ಸರ್ವರ ರಾಮ. ರಾಮನು ಕೇವಲ ಪ್ರಸ್ತುತನಲ್ಲ; ಶಾಶ್ವತ. ಇದು ಕೇವಲ ದೇವ ಮಂದಿರವಲ್ಲ; ಭಾರತ ದರ್ಶನದ ಮಂದಿರ. ರಾಮ ಭಾರತದ ಸಿದ್ಧಾಂತ, ಚಿಂತನೆ, ಪ್ರಜ್ಞೆ, ಹರಿವು, ಪ್ರಭಾವ, ನಾಯಕತ್ವ ಮತ್ತು ನಿರಂತರತೆ. ರಾಮನೇ ಜಗತ್ತು, ರಾಮನೇ ಸಾರ್ವತ್ರಿಕ ಆತ್ಮ. ಆದ್ದರಿಂದ ರಾಮನ ಪ್ರತಿಷ್ಠಾಪನೆಯ ಈ ಪ್ರಭಾವವು ಸಾವಿರಾರು ವರ್ಷಗಳವರೆಗೆ ಶಾಶ್ವತವಾಗಿರುತ್ತದೆ.
ದೂರದ ಕುಟೀರದಲ್ಲಿ ವಾಸಿಸುತ್ತಿದ್ದ ತಾಯಿ ಶಬರಿ, ‘‘ಈಗ ರಾಮ ಬರುವನು, ಈಗ ರಾಮ ಬರುವನು,’’ ಎಂದು ಕನವರಿಸುತ್ತಿದ್ದಳು. ಈ ಕಾಲಘಟ್ಟದಲ್ಲೂ ಅದು ನಿಜವೇ ಆಗಿದೆ. ರಾಮ ಬಂದ ಈ ಕ್ಷಣ ಕೇವಲ ಆಚರಣೆಯಲ್ಲ, ಭಾರತೀಯ ಸಮಾಜದ ಪ್ರಬುದ್ಧತೆಯ ಸಾಕ್ಷಾತ್ಕಾರ. ಹನುಮನ ಭಕ್ತಿ ಮತ್ತು ಸಮರ್ಪಣೆಯಂಥ ಗುಣಗಳೂ ನಮ್ಮೊಳಗೆ ಅರಳಿವೆ. ಸಣ್ಣ ಸಣ್ಣ ಸಮರ್ಪಣಾ ಭಾವವೂ ನಮ್ಮ ಜತೆಗೂಡಿವೆ. ನಿಷಾದ ರಾಜ ಗುಹನ ಗೆಳೆತನದಲ್ಲೂ ರಾಮ ಸಮಾನತೆಯನ್ನು ಸಾರಿದವನು. ನಾನು ತುಂಬಾ ಸಾಮಾನ್ಯ, ನಾನು ತುಂಬಾ ಚಿಕ್ಕವನು, ಯಾರಾದರೂ ಹೀಗೆ ಯೋಚಿಸಿದರೆ ಅವರು ರಾಮನಿಗೆ ಸಹಾಯ ಮಾಡಿದ ಅಳಿಲನ್ನು ಧ್ಯಾನಿಸಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಕೊಡುಗೆ ನೀಡುವ ಶಕ್ತಿಯಿದೆ. ದೈವಿಕ ಮತ್ತು ಶಕ್ತಿಯುತ ಭಾರತ ನಿರ್ಮಾಣಕ್ಕೆ ಈ ಭಾವ ಅಡಿಪಾಯವಾಗಬೇಕು.
ದೇಶಕ್ಕಾಗಿ ನಮ್ಮ ಜೀವನದ ಪ್ರತಿ ಕ್ಷಣವನ್ನೂ ತ್ಯಾಗ ಮಾಡೋಣ ಎಂದು ಪ್ರತಿಜ್ಞೆ ಮಾಡೋಣ. ನಮ್ಮ ಶರೀರದ ಪ್ರತಿ ಕಣವನ್ನೂ ದೇಶಕ್ಕಾಗಿ ಸಮರ್ಪಿಸೋಣ. ನಮ್ಮ ನಿತ್ಯದ ಪ್ರಯತ್ನ, ಸಾಹಸಗಳನ್ನೆಲ್ಲ ರಾಮನಿಗೆ, ಒಂದು ಆದರ್ಶಕ್ಕೆ ಸಮರ್ಪಿಸಿದಾಗ ಮಾತ್ರವೇ ಭಾರತ ಸುಭಿಕ್ಷವಾಗಲು ಸಾಧ್ಯ. ಇಂದಿನ ಭಾರತ ಯುವ ಶಕ್ತಿಯಿಂದ ತುಂಬಿದೆ. ಇನ್ನು ನಾವು ಯಾರಿಗೂ ತಲೆಬಾಗಬೇಕಿಲ್ಲ, ಕೈಕಟ್ಟಿ ಕೂರಲೂಬೇಕಿಲ್ಲ. ನಮ್ಮ ಮುಂದೆ ರಾಮನೆಂಬ ಸಾವಿರಾರು ವರ್ಷಗಳ ಸ್ಫೂರ್ತಿಯೇ ಇದೆ. ನಮ್ಮ ಮುಂದಿರುವುದು ಯಶಸ್ಸಿನ ಸಮಯ. ಮುಂಬರುವುದೆಲ್ಲವೂ ಸಾಧನೆಯೇ ಆಗಲಿದೆ. ರಾಮಮಂದಿರವು ನವಭಾರತದ ಉದಯಕ್ಕೆ ಸಾಕ್ಷಿಯಾಗಲಿದೆ. ಶತಮಾನಗಳವರೆಗೆ ಕಾದ ನಂತರ ನಾವು ಇಲ್ಲಿಗೆ ಬಂದು ತಲುಪಿದ್ದೇವೆ. ಇನ್ನು ನಾವು ಖಂಡಿತಾ ನಿಲ್ಲುವುದಿಲ್ಲ. ರಾಮಲಲ್ಲಾನ ಪಾದಗಳಿಗೆ ನನ್ನ ನಮನಗಳು.

Nimma Suddi
";