ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಅಕಾರಿಗಳ ಬೇಜವಾಬ್ದಾರಿಯೋ ಅಥವಾ ಜನಪ್ರತಿನಿಗಳ ನಿರಾಸಕ್ತಿಯೋ ಒಟ್ಟಿನಲ್ಲಿ ಇಲ್ಲಿ ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ಕೊರೊನಾ ತಡೆಯುವಲ್ಲಿ ಬಿಗಿ ಕ್ರಮಗಳ ಕುರಿತು ಜಿಲ್ಲಾಡಳಿತ ನೋಡಲ್ ಅಧಿಕಾರಿ ನೇಮಿಸಿದ್ದರೂ ಒಂದು ಬಾರಿ ಕಣ್ಣಾಡಿಸಿದ ಅವರು ಈವರೆಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ತಿರುಗಿ ನೋಡಿಲ್ಲ ಎಂಬ ಮಾತು ಕೇಳಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಪಟ್ಟಣದಲ್ಲಿ ಬಹುತೇಕ ವ್ಯವಹಾರ ಸಲೀಸಾಗಿ ನಡೆಯುತ್ತಿದ್ದರೂ ತಡೆಯಬೇಕಾದವರು ತೋರಿಕೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ.
ಪಟ್ಟಣದಲ್ಲಿ ಕೊರೊನಾ ತಡೆಗಾಗಿ ವಾರದಲ್ಲಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಬೆಳಗ್ಗೆ ೬ ರಿಂದ ೧೦ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ತರಕಾರಿ ಹಾಗೂ ಹಣ್ಣುಗಳನ್ನು ರಾಜ್ಯ ಹೆದ್ದಾರಿ ಹಾಗೂ ಎಂಜಿ ರಸ್ತೆ ಹೊರತು ಪಡಿಸಿ ಉಳಿದೆಡೆ ತಳ್ಳುಗಾಡಿಯಲ್ಲಿ ಮಾರಾಟ ಮಾಡಬೇಕೆಂಬ ನಿಯಮವಿದೆ.
ಆದರೆ ಈ ನಿಯಮ ಪಪಂ ವಾಹನಗಳ ಧ್ವನಿವರ್ಧಕಕ್ಕೆ ಮಾತ್ರ ಸೀಮಿತವಾದಂತಾಗಿದೆ. ಇತ್ತೀಚೆಗೆ ಪಟ್ಟಣದಲ್ಲಿ ಲಾಕ್‌ಡೌನ್ ಎಂದರೂ ಬಹುತೇಕ ವ್ಯವಹಾರ ಬೆಳಗ್ಗೆ ೧೦ರ ವರೆಗೆ ಮುಖ್ಯ ರಸ್ತೆಯಲ್ಲಿ ನಿರಾತಂಕವಾಗಿ ಸಾಗಿತ್ತು. ಒಂದೆಡೆ ಕುಳಿತುಕೊಂಡು ತರಕಾರಿ, ಹಣ್ಣು ಮಾರಾಟ ಯಥೇಚ್ಛವಾಗಿ ಸಾಗಿರುತ್ತದೆ. ಮತ್ತೊಂದೆಡೆ ಕೆಲ ದಿನಸಿ ಅಂಗಡಿ, ಜನರಲ್ ಸ್ಟೋರ್ಸ್, ಪಾದರಕ್ಷೆ ಹೀಗೆ ಬಂದ್ ಇದ್ದರೂ ವ್ಯಾಪಾರ ನಿರಾತಂಕವಾಗಿತ್ತು.
ಸಂಜೆ ಆಯಿತೆಂದರೆ ಕೆಲ ವಾರ್ಡ್ಗಳಲ್ಲಿ ಚಿಕನ್ ಪಕೋಡಾ, ಬಿಸಿಬಿಸಿ ಮಿರ್ಚಿ ಭಜಿ ವಾಸನೆ ಜೋರಾಗಿರುತ್ತದೆ. ಮತ್ತೊಂದೆಡೆ ಕೆಲ ಮನೆಗಳೇ ಕಿರಾಣಿ ಅಂಗಡಿಗಳಾಗಿದ್ದು ಗುಟ್ಕಾ ಸೇರಿದಂತೆ ಇತರೆ ವ್ಯಾಪಾರ ಭರ್ಜರಿಯಾಗಿಯೇ ನಡೆದಿರುತ್ತದೆ.
ಈ ಕುರಿತು ಪಟ್ಟಣದ ಮಾರ್ಗವಾಗಿ ತೆರಳುತ್ತಿದ್ದ ಹುನಗುಂದ ತಹಸೀಲ್ದಾರ್ ಶ್ವೇತಾ ಬಿಡಿಕರ್ ಅವರ ಗಮನಕ್ಕೆ ತರಲಾಯಿತು. ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗುವುದು ಎಂದಷ್ಟೇ ಹೇಳಿದರು.