ನಿಮ್ಮ ಸುದ್ದಿ ಬಾಗಲಕೋಟೆ
ಉಪ ಕೃಷಿ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ನಿಡಸನೂರ ಇವರು ಹಾಲಿ ನಿಯೋಜನೆ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆಪಾದನೆಯ ಮೇಲೆ ಎಪ್ರೀಲ್ ೨೩ ರಿಂದ ಸೇವೆಯಿಂದ ಅಮಾನತ್ತಿನಲ್ಲಿಟ್ಟು ಜಿ.ಪಂ ಸಿಇಓ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ. ಮತ್ತು ಅಮಾನತ್ತ ಅವಧಿಯಲ್ಲಿ ನಿಯಮಾನುಸಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಅಮಾನತ್ತಗೆ ಒಳಗಾದ ಮಹಾಂತೇಶ ನಿಡಸನೂರ ಅವರು ಎಪ್ರೀಲ್ ೨೨ ರಂದು ವಿವಿಧ ಆರೋಗ್ಯ ಇಲಾಖೆ ಕಚೇರಿಗಳಿಂದ ಪರ್ಸೆಂಟೆಜ್ ಆಧಾರದಲ್ಲಿ ಅಕ್ರಮವಾಗಿ ಲಂಚದ ಹಣವನ್ನು ಸಂಗ್ರಹಿಸಿಕೊAಡು ಕಾರ್‌ನಲ್ಲಿ ಸಾಗಿಸುತ್ತಿರುವ ಬಗ್ಗೆ ಬಂದ ದೂರಿನ ಖಚಿತ ಮಾಹಿತಿ ಮೇರೆಗೆ ಭ್ರಷ್ಟಾಚಾರ ನಿಗ್ರಹದಳ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.
ಶೋಧನೆ ಮಾಡಲಾದ ಕಾರಿನಲ್ಲಿಂದ ಒಟ್ಟು ೫,೦೮,೦೦೦ ರೂ. ಹಾಗೂ ಪ್ರಯಾಣ ಭತ್ಯೆ ಬಿಲ್‌ಗಳಿಗೆ ಸಂಬಂಧಿಸಿದ ರಜಿಸ್ಟರ ಹಾಗೂ ಕಾರನ್ನು ಒಶಪಡಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಸದರಿ ವರದಿಯನ್ನು ಪರಿಶೀಲಿಸಲಾಗಿ ಮೇಲ್ನೋಟಕ್ಕೆ ಆರೋಪವು ಸಾಭಿತಾಗಿರುವದರಿಂದ ಕರ್ನಾಟಕ ನಾಗರಿಕ ಸೇವಾ ನಡತೆ ವರ್ಗಿಕರಣ ನಿಯಂತ್ರಣ ಮತ್ತು ಮೇಲ್ಮನವಿ ನಿಯಮಗಳನ್ವಯ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.