ನಿಮ್ಮ ಸುದ್ದಿ ಬಾಗಲಕೋಟೆ
ಮುಖ್ಯಮಂತ್ರಿ ಯಾರಗಬೇಕೆಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ವಿಚಾರವಾಗಿ ಸ್ಪಷ್ಟನೆ ನೀಡಿ, ಮತ್ತೆ ನಮ್ಮದೇ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದೇನೆ ಹೊರತು ನಾನೇ ಸಿಎಂ ಎಂದು ಹೇಳಿಲ್ಲ. ಸಿಎಂ ಯಾರಾಗಬೇಕು ಎಂದು ಹೈಕಮಾಂಡ್ ಹಾಗೂ ಎಂಎಲ್‌ಎಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರ ಮೇಲೆ ನಿರ್ಧಾರವಾಗುತ್ತದೆ. ನಾನೇ ಸಿಎಂ ಆಗುತ್ತೇನೆ ಎಂದು ತಿರುಗಾಡಲು ಆಗುವುದಿಲ್ಲ. ಮುಂದೆ ನೋಡೋಣ ಎಂದರು.
ಬಾದಾಮಿ ಅಭಿವೃದ್ಧಿಗೆ ನಾನೇ ಅನುದಾನ ನೀಡಿದ್ದೇನೆ ಎಂದು ಇತ್ತೀಚೆಗೆ ಬಾಗಲಕೋಟೆಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರನ್ನು ಸಿಎಂ ಮಾಡಿದ್ದು ಯಾರು? ೮೦ ಜನ ಎಂಎಲ್‌ಎಗಳನ್ನು ಇಟ್ಟುಕೊಂಡು ೩೭ ಜನ ಎಂಎಲ್‌ಎ ಇರೋರನ್ನ ಸಿಎಂ ಮಾಡಿದ್ದರು. ನಾನು ಸಿಎಂ ಮಾಡದೇ ಇದ್ದಿದ್ದರೆ ಅನುದಾನ ಎಲ್ಲಿಂದ ಕೊಡುತ್ತಿದ್ದರು. ನಾನೂ ಎಂಎಲ್‌ಎ ಇದ್ದು, ಅನುದಾನ ಪಡೆದುಕೊಳ್ಳಲು ನನಗೂ ಹಕ್ಕಿದೆ. ಅವರು ಭಿಕ್ಷೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಅಹಿಂದ ಸಮಾವೇಶ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮಹಾದೇವಪ್ಪ ಮನೆಯಲ್ಲಿ ಸಭೆ ಮಾಡಿದ್ದೇವೆ. ಅವರ ಮನೆಗೆ ಊಟಕ್ಕೆ ಹೋಗಿದ್ದೆ, ನಾಟಿ ಕೋಳಿ ಸಾರು ತಿನ್ನೋಕೆ ಹೋಗಿದ್ದೆ. ಅಹಿಂದ ಸಮಾವೇಶದ ಕುರಿತು ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್‌ಟಿ ಹೋರಾಟದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಈಶ್ವರಪ್ಪನವರ ಬಗ್ಗೆ ಮಾತೇ ಆಡುವುದಿಲ್ಲ. ಅವರು ಬಿಜೆಪಿಯವರು, ಹೀಗಿದ್ದಾಗ ಅವರ ಬಗ್ಗೆ ನಾನೇಕೆ ಮಾತನಾಡಿಲಿ. ನಾನು ಏಕಾಂಗಿಯಾಗಿಲ್ಲ. ನನ್ನ ಜತೆ ಸಾಕಷ್ಟು ಜನರಿದ್ದಾರೆ. ನನ್ನ ವಿರುದ್ಧ ಮಾತನಾಡಿದರೆ ಲೀಡರ್ ಆಗುತ್ತೇವೆ ಎಂದು ತಿಳಿದಂತಿದೆ ಎಂದು ಈಶ್ವರಪ್ಪಗೆ ಟಾಂಗ್ ನೀಡಿದರು.