ನಿಮ್ಮ ಸುದ್ದಿ ಬೆಂಗಳೂರು
ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಮಹತ್ತರವಾದುದು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.
ವಿಧಾನಸೌಧದಲ್ಲಿಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಏರ್ಪಡಿಸಿದ್ದ ಪ್ರತಿಭೋತ್ಸವ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಷರ ಜ್ಞಾನ, ಸಂಸ್ಕೃತಿಯ ಸಂರಕ್ಷಣೆಯಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಮಹತ್ತರವಾದುದು. ರಾಜ್ಯ, ರಾಷ್ಟ್ರದ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಅಪಾರವಾಗಿದೆ.
ಈ ನಾಡಿನಲ್ಲಿ ಹೆಸರಾಂತ ಜ್ಞಾನಿಗಳಾದ ಶ್ರೀ ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಜನಿಸಿ, ಅಕ್ಷರ ಜ್ಞಾನ, ಸಂಸ್ಕøತಿ ಪರಂಪರೆ, ಸಾಹಿತ್ಯ ಕ್ಷೇತ್ರ ಅದರಲ್ಲೂ ಕನ್ನಡ ಸಾಹಿತ್ಯವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ.
ಬ್ರಾಹ್ಮಣ ಸಮುದಾಯದಿಂದ ಅಕ್ಷರ ಮತ್ತು ಸಂಸ್ಕೃತಿ ಬೆಳೆದು ಬಂದಿದೆ. ಸ್ವಾತಂತ್ರ್ಯ ಹೋರಾಟದಲ್ಲೂ ಬ್ರಾಹ್ಮಣ ಸಮುದಾಯವು ಮುಂಚೂಣಿಯಲ್ಲಿತ್ತು. ಕೈಗಾರಿಕಾ ಕ್ಷೇತ್ರಗಳಲ್ಲೂ ಅಧ್ವಿತೀಯ ಕೆಲಸ ಮಾಡಿ, ಉದ್ಯೋಗದಾತರಾಗಿದ್ದಾರೆ. ಅವರ ಸೇವೆ ಅವಿಸ್ಮರನೀಯವಾದುದು ಎಂದು ಶ್ರೀ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ. 10 ರಷ್ಟು ಮೀಸಲಾತಿಯನ್ನು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಕಲ್ಪಿಸಲಾಗಿದ್ದು, ನಮ್ಮ ರಾಜ್ಯ ಸರ್ಕಾರವು ಇದನ್ನು ಜಾರಿಗೊಳಿಸಿದೆ. ಈ ಮಂಡಳಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅತ್ಯುತ್ತಮವಾದ ಯೋಜನೆಗಳನ್ನು ರೂಪಿಸಿದೆ ಎಂದು ಶ್ಲಾಘಿಸಿದರು.
1994 ರಲ್ಲಿ ಭೀಮಾನದಿ ಉಕ್ಕಿ ಹರಿದಾಗ ವಿಜಯಪುರ ಜಿಲ್ಲೆಯ ಗೋವಿಂದಪುರ ಗ್ರಾಮ ಮುಳುಗಿ ಹೋಗಿತ್ತು. ಆಗ ಪೇಜಾವರ ಶ್ರೀಗಳು ಆ ಗ್ರಾಮಕ್ಕೆ ಭೇಟಿ ನೀಡಿ, ಆ ಗ್ರಾಮವನ್ನು ದತ್ತು ತೆಗೆದುಕೊಂಡು ಪುನರ್ ನಿರ್ಮಾಣ ಮಾಡಿ, ಮಾದರಿ ಗ್ರಾಮವನ್ನಾಗಿಸಿ ಪ್ರತಿಯೊಂದು ಮನೆಗೂ ತಲಾ ಒಂದು ಹಸುವನ್ನು ನೀಡಿದರು. ಶ್ರೀಗಳು ಕೈಗೊಂಡ ಈ ಗ್ರಾಮದ ಪುನರ್ ನಿರ್ಮಾಣದ ಮಾದರಿಯಂತೆ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ 2009ರಲ್ಲಿ ಯುಕೆಪಿಯಿಂದ ಬಾದಿತವಾದ ಗ್ರಾಮಗಳನ್ನು ಪುನರ್ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.
ಮಂಡಳಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಶ್ರೀ ಸುರೇಶ್ ಕುಮಾರ್, ಆರ್. ಅಶೋಕ್, ಶ್ರೀ ಗೋಪಾಲಯ್ಯ, ಸಂಸದರಾದ ಶ್ರೀ ಪಿ.ಸಿ. ಮೋಹನ್, ಶ್ರೀ ತೇಜಸ್ವಿ ಸೂರ್ಯ, ಬಿಡಿಎ ಅಧ್ಯಕ್ಷ
ಶ್ರೀ ಎಸ್.ಆರ್. ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.