ಬೆಳಗಾವಿ : ಮನುಷ್ಯ ದ್ವೇಷ ಹರಡಿ, ಮಸೀದಿ ದ್ವಂಸ ಮಾಡಲು ಕರೆಕೊಟ್ಟ ಮೂರ್ಖರು ಈಗಲೂ ಇದ್ದಾರೆ. ಆ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ. ರಾಯಣ್ಣನ ತ್ಯಾಗ ಬಲಿದಾನಕ್ಕೆ ಚಪ್ಪಾಳೆ ತಟ್ಟೋಣ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ಉದ್ಘಾಟಿಸಿ ಸಿಎಂ ಮಾತನಾಡಿ, ಬ್ರಿಟೀಷರು – ಫ್ರೆಂಚರು – ಮೊಘಲರು ನಮ್ಮ ದೇಶ ಆಳಿದ್ದು ನಮ್ಮ ನಮ್ಮನ್ನೇ ಒಡೆದು ಆಳುವ ನೀತಿಯಿಂದ ಮಾತ್ರ. ಬ್ರಿಟಿಷರ ವಿರುದ್ದ ವಿರೋಚಿತವಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಮೋಸದಿಂದ ಹಿಡಿದು ಕೊಟ್ಟವರು ಕೂಡ ನಮ್ಮವರೇ. ರಾಯಣ್ಣ ದೇಶಭಕ್ತಿಗೆ ಮಾದರಿಯಾದರೆ, ರಾಯಣ್ಣನನ್ನು ಮೋಸದಿಂದ ಬ್ರಿಟಿಷರಿಗೆ ಹಿಡಿದುಕೊಟ್ಟವರು ದೇಶದ್ರೋಹಿಗಳು ಎಂದರು.
ಬ್ರಿಟೀಷರ ವಿರುದ್ಧ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ಆದರೆ, ಇಂದು ದೇಶಭಕ್ತರಂತೆ ಫೋಜು ಕೊಡುವವರು ಬ್ರಿಟೀಷರ ವಿರುದ್ಧ ಏಕೆ ಹೋರಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.ದೇಶಭಕ್ತಿ ಎಂದರೆ ದೇಶದ ಜನರನ್ನು ಪ್ರೀತಿಸುವುದು. ಜಾತಿ-ಧರ್ಮದ ಹೆಸರಲ್ಲಿ ದೇಶದ ಜನರನ್ನೇ ದ್ವೇಷಿಸುವವರು ದೇಶಭಕ್ತರಾಗಿರಲು ಸಾಧ್ಯವೇ ಇಲ್ಲ. ಶರಣಶ್ರೇಷ್ಠ ಬಸವಣ್ಣನವರು, ಸಂವಿಧಾನ ರಚಿಸಿದ ಅಂಬೇಡ್ಕರ್ ಅವರು ಕೂಡ ಜಾತಿ ತಾರತಮ್ಯ ಇಲ್ಲದ ಮನುಷ್ಯ ಪ್ರೇಮವನ್ನು ಸಾರಿದರು ಎಂದು ವಿವರಿಸಿದರು.
ರೈತರು, ಶಿಕ್ಷಕರು, ಸೈನಿಕರು ಈ ದೇಶವನ್ನು ಒಳಗಿನಿಂದ ಮತ್ತು ಹೊರಗಿನಿಂದ ಕಾಯುತ್ತಿರುವ ಸೈನಿಕರು. ಅನ್ನ ಬೆಳೆಯುವ ರೈತ ಕೂಡ ದೇಶ ರಕ್ಷಣೆಯ ಸೈನಿಕ ಇದ್ದ ಹಾಗೆ. ರೈತರ ಏಳಿಗೆಗಾಗಿ ಹಸಿರು ಕ್ರಾಂತಿಯನ್ನು ಈ ದೇಶದಲ್ಲಿ ನಡೆಸಿದ್ದು ಕಾಂಗ್ರೆಸ್ ಪಕ್ಷ ಎಂದರು.ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15. ಇದೇ ದಿನ ದೇಶಕ್ಕೆ ಸ್ವಾತಂತ್ರ್ಯ ಬಂತು. ರಾಯಣ್ಣ ಹುತಾತ್ಮ ಆಗಿದ್ದು ಜನವರಿ 26. ಇದು ಗಣರಾಜ್ಯೋತ್ಸವ ದಿನ ಎಂದು ಕಾಕತಾಳೀಯವನ್ನು ಸೂಚಿಸಿದರು.