ಬೆಂಗಳೂರು: ಮಹಾತ್ಮ ಗಾಂಧಿ ಶ್ರೇಷ್ಠ ಹಿಂದೂ. ಆದರೆ ಅವರ ಹತ್ಯೆ ಮಾಡಿದವರು ಇಂದು ಹಿಂದೂ ಧರ್ಮದ ಬಗ್ಗೆ ಮಾತನಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಎಂದು ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧಿ ಪುಣ್ಯ ಸ್ಮರಣೆ ಹಾಗೂ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿ, ಮಹಾತ್ಮ ಗಾಂಧಿ ಹತ್ಯೆಯಾದ ದಿನವನ್ನು ದೇಶದಲ್ಲಿ ಹುತಾತ್ಮ ದಿನವನ್ನಾಗಿ ಆಚರಣೆ ಮಾಡ್ತೇವೆ. ಗಾಂಧಿಯನ್ನು ಮತಾಂಧ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ್ದು, ಇಂದು ಇದೇ ಗೋಡ್ಸೆ ಆರ್ ಎಸ್ ಎಸ್ ನವರಿಗೆ ಮಾದರಿ ಎಂದರು.
ಗಾಂಧಿ ಮನುಷ್ಯತ್ವ ಹಾಗೂ ಭ್ರಾತೃತ್ವದಲ್ಲಿ ನಂಬಿಕೆ ಇಟ್ಟವರು. ಗಾಂಧಿ ತತ್ವ ಆದರ್ಶಗಳ ಪಾಲನೆ ಅವರಿಗೆ ಸಲ್ಲಿಸುವ ಗೌರವ. ಬಿಜೆಪಿಯು ರಾಮನ ಹೆಸರನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ತಿದೆ. ನಾವೆಲ್ಲಾ ರಾಮನ ಭಕ್ತರೇ. ಗಾಂಧಿ ಸಾಯುವಾಗ ಹೇ ರಾಮ್ ಎಂದರು. ಅಂತಹ ವ್ಯಕ್ತಿಯನ್ನು ಕೊಂದವರು ಇವಾಗ ರಾಮನ ಜಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮನ್ನು ಹಿಂದೂ ವಿರೋಧಿ ಎಂದು ಆರೋಪ ಮಾಡ್ತಾರೆ. ಆದರೆ ಗಾಂಧಿಯಂತಹ ಶ್ರೇಷ್ಠ ಹಿಂದೂ ಯಾರಿಲ್ಲ. ಅಂತಹ ಶ್ರೇಷ್ಠ ಹಿಂದೂವನ್ನೇ ಕೊಂದವರು ಹಿಂದೂ ಧರ್ಮದ ಬಗ್ಗೆ ಮಾತನಾಡ್ತಾರೆ. ಗಾಂಧಿ ಸತ್ಯ ಹಾಗೂ ಅಹಿಂಸೆಯನ್ನು ಪ್ರತಿಪಾದನೆ ಮಾಡಿದವರು. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ಪಶ್ಚಿಮ ಬಂಗಾಳದಲ್ಲಿ ಹಿಂದೂ ಮುಸ್ಲಿಮರ ನಡುವೆ ಸೌಹಾರ್ದ ಮೂಡಿಸುವ ಕೆಲಸ ಮಾಡ್ತಿದ್ದರು ಎಂದು ವಿವರಿಸಿದರು.