ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ನಲ್ಲಿ ಸಿಪಾಯಿಯೊಬ್ಬ ಹಣ ದುರುಪಯೋಗ ಪಡಿಸಿಕೊಂಡ ಕುರಿತು ತನಿಖೆ ಮುಂದುವರೆದಿದ್ದು ತನಿಖೆ ಪೂರ್ಣಗೊಂಡ ನಂತರ ವ್ಯಕ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಚಿಂತನೆ ಇದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ತಿಳಿಸಿದ್ದಾರೆ.
ಬಿಡಿಸಿಸಿ ಬ್ಯಾಂಕ್ ಕಮತಗಿ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜವಾನ ಪ್ರವೀಣ ಪತ್ರಿ ಅಲಿಯಾಸ್ ಪಿ.ದಿಕ್ಷಿತ್ ಎಂಬುವವರು ಡಿಸಿಸಿ ಬ್ಯಾಂಕ್‌ನ ಕಮತಗಿ, ಗುಡೂರ ಹಾಗೂ ಅಮೀನಗಡ ಶಾಖೆಯಲ್ಲಿ ಅಲ್ಲಿನ ಗುಮಾಸ್ತ ಹಾಗೂ ಮ್ಯಾನೇಜನ್ ಅವರ ಐಡಿ ಹ್ಯಾಕ್ ಮಾಡಿ ಕೋಟ್ಯಂತರ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಬಿಡಿಸಿಸಿ ಬ್ಯಾಂಕ್‌ನಿಂದ ಪ್ರವೀಣ ಪತ್ರಿ ಕಾರ್ಯ ನಿರ್ವಹಿಸಿದ ಮೂರು ಬ್ಯಾಂಕ್ ಶಾಖೆಗಳಲ್ಲಿ ತನಿಖೆ ಮುಂದುವರೆದಿದ್ದು ಸಂಪೂರ್ಣ ಮಾಹಿತಿ ಹಾಗೂ ಐಡಿ ಹ್ಯಾಕ್ ಮಾಡಿದ್ದು ಹಾಗೂ ಎಷ್ಟು ಹಣ ದುರುಪಯೋಗವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.
ಬ್ಯಾಂಕ್ ಶಾಖೆಗಳಿಂದ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿರುವ ಜವಾನ ಪ್ರವೀಣ ಪತ್ರಿ ಅವರ ಜೀವನವೇ ಶೋಕಿಯಲ್ಲೇ ಮುಳುಗಿತ್ತು ಎಂಬ ಮಾತು ಕೇಳಿದೆ. ಪಿ.ದಿಕ್ಷೀತ್ ಎಂಬ ಅಡ್ಡ ಹೆಸರು ಇಟ್ಟುಕೊಂಡ ಪತ್ರಿ ಸಿನಿಮಾದಲ್ಲಿ ತಾನೇ ಹೀರೋ ಆಗಿ ಮಿಂಚಲು ಮುಂದಾಗಿದ್ದು ಇದಕ್ಕಾಗಿ ತಾನೇ ಬಂಡವಾಳ ಹೂಡಿ ಜೈ ಕೇಸರಿ ನಂದನ ಎಂಬ ಚಿತ್ರ ನಿರ್ಮಾಣ ಮಾಡಿ ೨೦೧೯ರಲ್ಲಿ ಬಿಡುಗಡೆಗೊಳಿಸಿದ್ದ.
ಎರಡನೇ ಚಿತ್ರವನ್ನೂ ನಿರ್ಮಿಸುತ್ತಿರುವುದಾಗಿ ಹೇಳಿದ್ದನ್ನದೆ ಹಾಡುಗಳ ಅಲ್ಬಂ ಸಹ ಮಾಡಿದ್ದಾನೆ. ಇದಕ್ಕೆಲ್ಲ ಕೋಟಿಗಟ್ಟಲೆ ಖರ್ಚು ಮಾಡಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬAತೆ ಬಿಂದಾಸ್ ಆಗಿ ತಿರುಗಾಡುತ್ತಿದ್ದ. ಇದೀಗ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಐಟಿ ಹ್ಯಾಕ್ ಮಾಡಿದ್ದಾನೆ ಎಂಬ ಆರೋಪ ಕೇಳಿದ್ದು ಕಮತಗಿ ಬ್ಯಾಂಕ್‌ನಲ್ಲಿ ಹ್ಯಾಕ್ ಮಾಡಿರುವುದಾಗಿ ತಾನೆ ಒಪ್ಪಿಕೊಂಡಿದ್ದಾನೆ ಎಂದು ಬ್ಯಾಂಕ್ ಅಧ್ಯಕ್ಷರು ಈಗಾಗಲೆ ತಿಳಿಸಿದ್ದಾರೆ.
ಸದ್ಯ ತನಿಖೆ ಮುಂದುವರೆದಿದೆ ಎನ್ನಲಾಗಿದ್ದು ಹ್ಯಾಕ್ ಮಾಡುವಲ್ಲಿ ಪ್ರವೀಣ ಒಬ್ಬನೇ ಇದ್ದಾನೋ ಅಥವಾ ಮತ್ತಾರೋ ಪ್ರಭಾವಿ ವ್ಯಕ್ತಿಗಳಿದ್ದಾರೋ ಎಂಬ ಮಾಹಿತಿ ಹೊರಬರಬೇಕಿದೆ. ಗ್ರಾಹಕರ ದುಡ್ಡಲ್ಲಿ ಶೋಕಿ ಮಾಡಿದವರ ಬಣ್ಣ ಬಯಲಾಗಬೇಕಿದೆ. ಒಬ್ಬನೇ ಇಷ್ಟೆಲ್ಲ ಹಣ ದುರ್ಬಳಕೆ ಮಾಡಿರಲು ಸಾಧ್ಯವಿಲ್ಲ. ಅವರ ಹಿಂದೆ ಹಲವು ಕಾಣದ ಕೈಗಳು ಇವೆ ಎಂಬ ಮಾತು ಕೇಳಿದ್ದು ತನಿಖೆಯಿಂದಲೇ ಸತ್ಯಾಸತ್ಯತೆ ಹೊರಬರಬೇಕಿದೆ.