ನಿಮ್ಮ ಸುದ್ದಿ ಬಾಗಲಕೋಟೆ
ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮನೆಯ ಮಕ್ಕಳಂತೆ ಭಾವಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಬೇಕು ಎಂದು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವಾಲ್ಟರ್ ಎಚ್. ಡಿಮೆಲ್ಲೊ ಹೇಳಿದರು.
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಿನ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳ ಶಿಕ್ಷಕರೊಂದಿಗೆ ಅವರು ಸಂವಾದ ಮಾಡಿ, ವಿದ್ಯಾರ್ಥಿಗಳ ಪಾಠಗಳ ಕುರಿತು ಹಾಗೂ ಮನೆಯಲ್ಲಿನ ವಿದ್ಯಾಭ್ಯಾಸದ ವೇಳಾಪಟ್ಟಿ ಕುರಿತಾಗಿ ಚರ್ಚೆ ಮಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಬರವಣಿಗೆಗೆ ಒತ್ತು ನೀಡುವಂತೆ ನೋಡಿಕೊಳ್ಳಬೇಕು. ಇದು ಅವರ ಫಲಿತಾಂಶ ಸುಧಾರಣೆಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಅಭಿವೃದ್ಧಿ) ಹಾಗೂ ಇಳಕಲ್ ಡಯಟ್‌ನ ಪ್ರಾಚಾರ್ಯ ಬಿ.ಕೆ.ನಂದನೂರ ಮಾತನಾಡಿ, ಶೈಕ್ಷಣಿಕ ವರ್ಷ್ದ ಗುಣಮಟ್ಟದ ಫಲಿತಾಂಶಕ್ಕಾಗಿ ಎಲ್ಲರೂ ಪ್ರಾಮಾಣಿಕವಾಗಿ ಕೈಜೋಡಿಸಬೇಕು ಎಂದು ತಿಳಿಸಿ ಸಭೆಗೆ ತಮ್ಮ ಸಲಹೆ-ಸೂಚನೆ ನೀಡಿದರು.
ಬಿಇಒ ಪಿ.ಬಿ.ಹಿರೇಮಠ, ಉಪಪ್ರಾಚಾರ್ಯ ಎಂ.ಬಿ.ದೊಡ್ಡಪ್ಪನವರ, ತಾಲೂಕಿನ ವಿಷಯವಾರು ಶಿಕ್ಷಕರು ಇದ್ದರು.