ಕಾಂಗ್ರೆಸ್ ಎಸ್‌ಸಿ ಘಟಕದಿಂದ ಜನಜಾಗೃತಿ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲಾ ಕಾಂಗ್ರೆಸ್‌ನ ಎಸ್‌ಸಿ ವಿಭಾಗದಿಂದ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಮುಂದಿನ ತಿಂಗಳ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ವಿಭಾಗದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಶಿಷ್ಟ ಜಾತಿ ಹಾಗೂ ಜನಾಂಗದವರಿಗೆ ಅನ್ಯಾಯ ಮಾಡುತ್ತಿದೆ. ಕಳೆದ ೩ ವರ್ಷದಿಂದ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿಲ್ಲ, ಅಂದಾಜು ೩,೯೦೦ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿನೆರಳು ಬಿದ್ದಂತಾಗಿದೆ. ಹೀಗಾಗಿ ರಾಜ್ಯ ಸರಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಮಾರ್ಚ್ ತಿಂಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪ್ರತಿಭಟನೆಗೆ ಆಗಮಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಆಹ್ವಾನಿಸಲಾಗುವುದು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಲು ಜಿಲ್ಲಾ ಕಾಂಗ್ರೆಸ್ ಎಸ್‌ಸಿ ವಿಭಾಗ ಶ್ರಮಿಸುತ್ತಿದೆ. ರಾಜ್ಯ ಸರಕಾರ ಪರಿಶಿಷ್ಟರ ಕಲ್ಯಾಣಕ್ಕಾಗಿ ಇರುವ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಬೇರೆ ಇಲಾಖೆಗೆ ನೀಡುತ್ತಿದೆ. ಸಮುದಾಯದ ಜನರಲ್ಲಿ ಸರಕಾರದಿಂದ ದೊರೆಯಬಹುದಾದ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಗೆ ಆಗಮಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರು ಬಿಜೆಪಿ ಏಜಂಟರಂತೆ ಕೆಲಸ ಮಾಡದೆ ನಿಜವಾದ ದೇಶಾಭಿಮಾನ ವ್ಯಕ್ತಪಡಿಸಲಿ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಇಚ್ಛಿಸಿದರೆ ಕಾಂಗ್ರೆಸ್ ಎಸ್‌ಸಿ ಘಟಕ ಸಂವಾದ ನಡೆಸಲು ಸಿದ್ಧವಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಜಿಸಾಬ ದಂಡಿನ, ಅಡಿವೆಪ್ಪ ಚಂದಾವರೆ, ಚೇತನ ದೊಡಮನಿ, ಶ್ರವಣ ಖಾತೆದಾರ, ಫಕೀರಪ್ಪ ಮಾದರ, ಕುಮಾರ ಕಾಳನ್ನವರ, ರಾಜು ರಾಠೋಡ ಇದ್ದರು.
ಸೂಲಿಬೆಲೆಗೆ ಸ್ವಾಗತ
ಫೆ.೧೪ರಂದು ಜಿಲ್ಲೆಯ ಸೂಳೇಬಾವಿಗೆ ಆಗಮಿಸುತ್ತಿರುವ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ತಮ್ಮ ಸ್ವಗ್ರಾಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಅವರೊಬ್ಬ ಇತಿಹಾಸ ಅರಿತವರು. ಯುವಕರನ್ನು ಉದ್ದೇಶಿಸಿ ಮಾತನಾಡುವಾಗ ದೇಶದಲ್ಲಿನ ಇತ್ತೀಚಿನ ತೈಲ ಬೆಲೆ ಏರಿಕೆ, ಕೃಷಿ ಕಾಯಿದೆ ಸೇರಿದಂತೆ ಪ್ರಮುಖ ಬೆಳವಣಿಗೆಗಳ ಕುರಿತು ಸತ್ಯ ಮರೆಮಾಚದೆ ಮಾತನಾಡಲಿ ಎಂದು ಆಗ್ರಹಿಸಿದರು.