ನಿಮ್ಮ ಸುದ್ದಿ ಬಾಗಲಕೋಟೆ
ತಮ್ಮ ಮಗಳ ಸಾವಿಗೆ ಯುವಕನ ಕುಟುಂಬದವರೇ ಕಾರಣ ಎಂದು ಆರೋಪಿಸಿದ ವಿವಾಹಿತ ಮಹಿಳೆಯ ತವರು ಮನೆಯವರು ಯುವಕನ ಮನೆಗೆ ಬೆಂಕಿ ಹಚ್ಚಿದ ಘಟನೆ ಸಮೀಪದ ಕೆಲೂರ ಗ್ರಾಮದಲ್ಲಿ ನಡೆದಿದೆ.
ಬೆಂಕಿ ಹಚ್ಚಿದ ಘಟನೆಯಲ್ಲಿ ಯುವಕನ ಮನೆ ಮುಂಬಾಗ ಸುಟ್ಟು ಕರಕಲಾಗಿದೆ. ಕೆಲೂರ ಗ್ರಾಮದ ವಿವಾಹಿತ ಮಹಿಳೆ ಬಸಮ್ಮ ಮಾದರ (೨೦) ಆತ್ಮಹತ್ಯೆಗೆ ಶರಣಾದವಳು.
ಆದರೆ ಯುವತಿ ತವರು ಮನೆಯವರು ತಮ್ಮ ಮಗಳ ಆತ್ಮಹತ್ಯೆಗೆ ಯುವಕನ ಕುಟುಂಬದವರೇ ಕಾರಣರೆಂದು ಆರೋಪಿಸಿ ಆಕ್ರೋಶಗೊಂಡು ಯುವಕನ ಮನೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಅದೃಷ್ಠಾವಶಾತ್ ಬೆಂಕಿ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕೆಲೂರ ಗ್ರಾಮದ ಯುವಕ ರಂಜಿತ್ ಕುಂಚಗನೂರ ಹಾಗೂ ಅದೇ ಗ್ರಾಮದ ಬಸಮ್ಮ ಮಾದರ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಬಸಮ್ಮನ್ನು ಬೇರೊಬ್ಬ ಯುವಕನಿಗೆ ಮದುವೆ ಮಾಡಿ ಕೊಡಲಾಗಿತ್ತು. ಕಳೆದ ೫ ತಿಂಗಳ ಹಿಂದೆ ಪತಿಯನ್ನು ತೊರೆದ ಬಸಮ್ಮ ಪ್ರಿಯಕರ ರಂಜಿತ್‌ನೊಂದಿಗೆ ಜೀವನ ನಡೆಸುವುದಾಗಿ ಕೆಲೂರ ಗ್ರಾಮಕ್ಕೆ ಬಂದಿದ್ದಳು.
ವಿಷಯ ತಿಳಿದ ಗ್ರಾಮದ ಹಿರಿಯರು ಇಬ್ಬರಿಗೂ ಮದುವೆ ಮಾಡುವುದಾಗಿ ನಿಶ್ಚಯಿಸಿದ್ದಲ್ಲದೆ ಪತಿಗೆ ವಿಚ್ಛೆದನಕ್ಕೆ ಮುಂದಾಗಿದ್ದಳು. ಜತೆಗೆ ಕೆಲೂರ ಗ್ರಾಮದ ಯುವಕನ ಜಮೀನಿನ ಮನೆಯಲ್ಲಿ ಇಬ್ಬರೂ ವಾಸವಾಗಿದ್ದರು.
ಆದರೆ ಶುಕ್ರವಾರ ಬೆಳಗಿನ ಜಾವ ಯುವಕನ ತೋಟದ ಮನೆಯಲ್ಲಿ ಬಸಮ್ಮ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದರಿಂದ ಆಕ್ರೋಶಗೊಂಡ ಮಹಿಳೆ ಕುಟುಂಬಸ್ಥರು ಮಗಳ ಸಾವಿಗೆ ರಂಜಿತ್ ಹಾಗೂ ಕುಟುಂಬಸ್ಥರೇ ಕಾರಣ ಎಂದು ಗ್ರಾಮದಲ್ಲಿರುವ ಅವರ ಮನೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಮಧ್ಯಾಹ್ನ ೨ಕ್ಕೆ ಈ ಘಟನೆ ನಡೆದಿದ್ದು ಬೆಂಕಿಯನ್ನು ಕಂಡ ಇಡೀ ಗ್ರಾಮಸ್ಥರು ಸ್ಥಳದಲ್ಲಿ ಜಮಾವಣೆಗೊಂಡಿದ್ದಾರೆ. ಗಾಬರಿಗೊಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಮನೆಯ ಹೊರ ಆವರಣದಲ್ಲಿ ಬೆಂಕಿ ಹಚ್ಚಿದ್ದರಿಂದ ಸಂಪೂರ್ಣ ಕರಲಾಗಿದ್ದು ಹೊಗೆ ಸುತ್ತಲಿನ ಪ್ರದೇಶದಲ್ಲೆಲ್ಲ ಆವರಿಸಿತ್ತು.
ಸದ್ಯ ರಂಜಿತ್ ಹಾಗೂ ಕುಟುಂಬಸ್ಥರು ನಾಪತ್ತೆಯಾಗಿದ್ದು ಗ್ರಾಮಕ್ಕೆ ಎಸ್‌ಪಿ ಲೋಕೇಶ ಜಗಲಾಸರ್, ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ, ಸಿಪಿಐ ಕೆ.ಹೊಸಕೇರಪ್ಪ, ಎಸ್‌ಐ ಎಂ.ಜಿ.ಕುಲಕರ್ಣಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ರಂಜಿತ್ ಹಾಗೂ ಕುಟುಂಬಸ್ಥರಿಗಾಗಿ ಶೋಧನೆ ಆರಂಭಿಸಿದ್ದಾರೆ. ಘಟನೆಗೆ ಸಂಬಂದಿಸಿದಂತೆ ಬಸಮ್ಮಳ ತಂದೆ ಷಣ್ಮುಖಪ್ಪ ಮಾದರ ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.