ಬೆಳಗಾವಿ: ರಾಜ್ಯದ ನಗರೀಕರಣ ಪ್ರಕ್ರಿಯೆಗೆ ಮತ್ತೊಂದು ವೇಗ ನೀಡುವಂತೆ, ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ. 6 ಜಿಲ್ಲೆಗಳ 12 ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಸಭೆಯಲ್ಲಿ ಅನುಮೋದನೆ ದೊರೆತಿದೆ. ಇದರ ಭಾಗವಾಗಿ ಬೆಳಗಾವಿ ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯತಿಗಳು ಕೂಡ ಪಟ್ಟಣ ಪಂಚಾಯತಿಗಳಾಗಿ ಘೋಷಿಸಲ್ಪಟ್ಟಿವೆ.
ಪುರಸಭೆ ಈಗ ನಗರಸಭೆ
ಇದರ ಜೊತೆಗೆ, ಬೆಳಗಾವಿಯ ಒಂದು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆರಿಸಲಾಗಿದ್ದು, ಜಿಲ್ಲೆಯಲ್ಲಿ ನಗರೀಕರಣದ ವ್ಯಾಪ್ತಿಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಬೆಳಗಾವಿಯ 4 ಹೊಸ ಪಟ್ಟಣ ಪಂಚಾಯತಿಗಳು
ಪಟ್ಟಣ ಪಂಚಾಯತಿಗಳಾಗಿ ಘೋಷಣೆಗೊಂಡ ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯತಿಗಳು:
ಅಂಕಲಿ
ಸುರೇಬಾನ
ಮನಿಹಾಳ
ಕಟಕೋಳ
ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ, ವ್ಯಾಪಾರ ಚಟುವಟಿಕೆ, ವಸತಿ ವಿಸ್ತರಣೆ ಹಾಗೂ ಮೂಲಸೌಕರ್ಯದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಗ್ರಾಮಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೆರಿಸಲು ಸರ್ಕಾರ ತೀರ್ಮಾನಿಸಿದೆ.
ಪುರಸಭೆ- ನಗರಸಭೆ: ಬೆಳಗಾವಿಗೆ ಹೆಚ್ಚುವರಿ ಸೌಲಭ್ಯ
ಬೆಳಗಾವಿಯ ಒಂದು ಪುರಸಭೆ ಈಗ ನಗರಸಭೆಯ ಸ್ಥಾನಮಾನ ಪಡೆದಿದ್ದು, ಇದರ ಮೂಲಕ ಹೆಚ್ಚಿನ ನಗರಾಭಿವೃದ್ಧಿ ನಿಧಿ,
ಮೂಲಸೌಕರ್ಯ ಸುಧಾರಣೆ, ರಸ್ತೆ, ಚರಂಡಿ, ನೀರು, ವಿದ್ಯುತ್ ಯೋಜನೆಗಳಿಗೆ ಹೆಚ್ಚುವರಿ ಅನುದಾನ, ಉತ್ತಮ ನಗರಾಡಳಿತ
ಇವು ಸಾಧ್ಯವಾಗುತ್ತದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.
ರಾಜ್ಯ ಮಟ್ಟದ ಇತರೆ ಮಹತ್ವದ ತೀರ್ಮಾನಗಳು
ಸಚಿವ ಸಂಪುಟ ಸಭೆಯಲ್ಲಿ ನಗರಾಭಿವೃದ್ಧಿ ನಿರ್ಣಯಗಳ ಜೊತೆಗೆ ಇನ್ನೂ ಎರಡು ಪ್ರಮುಖ ತಿದ್ದುಪಡಿ ವಿಧೇಯಕಗಳಿಗೂ ಅನುಮೋದನೆ ನೀಡಲಾಗಿದೆ.ಔಷಧ ಮತ್ತು ಸೌಂದರ್ಯವರ್ಧಕಗಳ ತಿದ್ದುಪಡಿ ವಿಧೇಯಕ,ಸಿನಿ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ತಿದ್ದುಪಡಿ ವಿಧೇಯಕ,ಈ ಎರಡೂ ವಿಧೇಯಕಗಳು ಸಂಬಂಧಿತ ಕ್ಷೇತ್ರಗಳಲ್ಲಿ ಆಡಳಿತ ಸುಧಾರಣೆ ಮತ್ತು ನಿಯಂತ್ರಣ ಬಲಪಡಿಸುವುದಕ್ಕೆ ಪ್ರಮುಖವಾಗಿವೆ.



















