ನಿಮ್ಮ ಸುದ್ದಿ ಬಾಗಲಕೋಟೆ
ಅಪಘಾತದಲ್ಲಿ ಗಾಯಗೊಂಡು ಪ್ರಾಣಾಪಾಯದಲ್ಲಿದ್ದ ಶ್ವಾನವೊಂದಕ್ಕೆ ಸಕಾಲದಲ್ಲಿ ಆಹಾರ, ಚಿಕಿತ್ಸೆ ಕೊಡಿಸಿ ಮರುಜೀವ ನೀಡಿದ ಘಟನೆ ನಗರದಲ್ಲಿ ನಡೆದಿದೆ.
ಚಲನಚಿತ್ರ ನಿರ್ಮಾಪಕ, ಪ್ರಾಣಿಪ್ರಿಯ ಘನಶಾಂ ಭಾಂಡಗೆ ಈ ಘಟನೆಯಲ್ಲಿ ಮಾನವೀಯತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನವನಗರ ಬೈಪಾಸ್ ರಸ್ತೆಯ ಯಮನೂರಪ್ಪನ ದರ್ಗಾ ಬಳಿ ಎರಡು ದಿನಗಳ ಹಿಂದೆ ಅಪಘಾತಕ್ಕೆ ಸಿಲುಕಿದ್ದ ಬೀದಿನಾಯಿ ಮರಿಯೊಂದು ಹಿಂದಿನ ಕಾಲುಗಳಿಗೆ ಒಳಪೆಟ್ಟಾಗಿ ಅರೆಪ್ರಜ್ಞಾವಸ್ಥೆಯಲ್ಲಿ ನರಳಾಡುತ್ತಿತ್ತು.
ಲಾಕ್‌ಡೌನ್ ನಿಯಮ ಜಾರಿಯಲ್ಲಿರುವುದರಿಂದ ಜನರ ಸಂಚಾರವೂ ಕಡಿಮೆಯಿದ್ದ ಈ ಸ್ಥಳಕ್ಕೆ ಕೆಲವು ಕ್ಷಣಗಳ ನಂತರ ಅನಿರೀಕ್ಷಿತವಾಗಿ ಆಗಮಿಸಿದ ಘನಶಾಂ, ಹತ್ತಿರ ಹೋಗಿ ಶ್ವಾನ ಉಸಿರಾಡುತ್ತಿರುವುದನ್ನು ಗಮನಿಸಿದರು. ಅದನ್ನು ಹತ್ತಿರದ ಕೆಂಚಮ್ಮ ದೇವಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ನೀರು ಕುಡಿಸಿದರು.
ತಕ್ಷಣ ಚೇತರಿಸಿಕೊಳ್ಳದಿದ್ದಾಗ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಡಾ.ಈರಣ್ಣ ಜಿಗಜಿನ್ನಿ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಡಾ.ಜಿಗಜಿನ್ನಿ, ನಾಯಿ ಮರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸದ್ಯ ನಾಯಿಮರಿ ಚೇತರಿಸಿಕೊಳ್ಳುತ್ತಿದೆ.
ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರುಮಾಡಿದ ಭಾಂಡಗೆ ಅವರಿಗೆ ಕಣ್ಣೀರಿನಿಂದಲೇ ನಾಯಿಮರಿ ಕೃತಜ್ಞತೆ ಸಲ್ಲಿಸುತ್ತಿದೆ. ಇದನ್ನು ಕಂಡ ಪ್ರಾಣಿಪ್ರಿಯರು ಭಾಂಡಗೆ ಅವರ ಕಳಕಳಿಕೆ, ಸಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಕಾಳಜಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.