ನವದೆಹಲಿ: ಮೊಬೈಲ್ ಫೋನ್ ತಯಾರಿಕೆಗೆ ಬಳಸಲಾಗುವ ಬಿಡಿಭಾಗಗಳ ಆಮದು ಸುಂಕ ಶೇ. 15ರಿಂದ ಶೇ. 10ಕ್ಕೆ ಇಳಿಸಲಾಗಿದೆ. ಇದರೊಂದಿಗೆ ಭಾರತದಲ್ಲಿ ಸ್ಮಾರ್ಟ್ಫೋನ್ ತಯಾರಿಕಾ ಉದ್ಯಮ ಪ್ರಬಲಗೊಳ್ಳಲಿದ್ದು, ಉತ್ಪಾದನಾ ವೆಚ್ಚ ಕಡಿಮೆಗೊಳ್ಳುವುದರಿಂದ ಚೀನಾ, ವಿಯೆಟ್ನಾಂ ಮೊದಲಾದ ದೇಶಗಳಿಗೆ ಸ್ಪರ್ಧೆಯೊಡ್ಡಲು ಭಾರತೀಯ ತಯಾರಕರಿಗೆ ಸಾಧ್ಯವಾಗಲಿದೆ.
ಮೊಬೈಲ್ ಬಿಡಿಭಾಗಗಳ ಆಮದಿಗೆ ವಿಧಿಸಲಾಗುವ ಸುಂಕವನ್ನು ಕಡಿಮೆಗೊಳಿಸಬೇಕೆಂಬ ಕೂಗು ಸಾಕಷ್ಟು ಕಾಲದಿಂದ ಈ ಉದ್ಯಮದವರಿಂದ ಕೇಳುತ್ತಾ ಬಂದಿತ್ತು. ಇದೀಗ ಸರ್ಕಾರ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಂಡಿದ್ದು, ಭಾರತದಲ್ಲಿ ಈಗೀಗ ಮೊಬೈಲ್ ಫೋನ್ ತಯಾರಿಕೆ ಪ್ರಮಾಣ ಹೆಚ್ಚುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು 11 ಬಿಲಿಯನ್ ಡಾಲರ್ನಷ್ಟಿತ್ತು.
ಆಮದು ಸುಂಕ ಕಡಿಮೆಗೊಳಿಸಿದರೆ ಮತ್ತು ಕೆಲ ವಿಭಾಗಗಳಲ್ಲಿ ಸುಂಕವನ್ನೇ ಹಿಂಪಡೆದರೆ ಮುಂದಿನ ಎರಡು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು 39 ಬಿಲಿಯನ್ ಡಾಲರ್ ಆಗಬಹುದು ಎಂದು ಇಂಡಿಯನ್ ಸೆಲ್ಯೂಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಸಂಸ್ಥೆ ಹೇಳಿದೆ. ಅಂದರೆ ಎರಡು ವರ್ಷದಲ್ಲಿ ರಫ್ತು ಮೂರು ಪಟ್ಟು ಹೆಚ್ಚಾಗುವ ಸಂಭವನೀಯತೆ ಇದೆ.
ಆ್ಯಪಲ್, ಸ್ಯಾಮ್ಸುಂಗ್ ಮತ್ತಿತರ ಪ್ರಮುಖ ಕಂಪನಿಗಳು ಭಾರತದಲ್ಲಿ ಮೊಬೈಲ್ ತಯಾರಿಕೆ ಮಾಡುತ್ತಿದ್ದು, ಸ್ಯಾಮ್ಸುಂಗ್ ಬಹಳ ವರ್ಷಗಳಿಂದ ಭಾರತದಲ್ಲಿ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಮಾಡುತ್ತಿದೆ. ಚೀನಾದಲ್ಲಿ ಹೆಚ್ಚು ಅಸ್ತಿತ್ವದಲ್ಲಿದ್ದ ಆ್ಯಪಲ್ನ ಐಫೋನ್ ಪ್ರೊಡಕ್ಷನ್ ಈಗ ಭಾರತಕ್ಕೆ ಹಂತ ಹಂತವಾಗಿ ವರ್ಗವಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.