ಪಲ್ಲೆಕೆಲೆ: ಕ್ರಿಕೆಟ್ನ ಸಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳು ಈ ಬಾರಿಯ ಏಷ್ಯಾಕಪ್ನ(Asia Cup 2023) ಮೊದಲ ಪಂದ್ಯವನ್ನು ಆಡಲು ಸಜ್ಜಾಗಿವೆ. ಶನಿವಾರ ನಡೆಯುವ ಉಭಯ ತಂಡಗಳ ಈ ಪಂದ್ಯಕ್ಕೆ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Pallekele International Cricket Stadium) ಅಣಿಯಾಗಿದೆ. ಈ ಪಂದ್ಯಕ್ಕೆ ಇತ್ತಂಡಗಳ ಸಂಭಾವ್ಯ ಆಡುವ ಬಳಗ, ಪಿಚ್ ರಿಪೋರ್ಟ್ ಮತ್ತು ಈ ಮೈದಾನದ ಏಕದಿನ ಇತಿಹಾಸದ ಎಲ್ಲ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸ್ಪರ್ಧಾತ್ಮಕ ಸ್ಕೋರ್‌ಗಳಿಗೆ ಹೆಸರುವಾಸಿಯಾಗಿದೆ. ಅಲ್ಲಿ ಮೊದಲು ಫೀಲ್ಡಿಂಗ್ ಮಾಡುವ ತಂಡವು ಸಾಮಾನ್ಯವಾಗಿ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದೆ. ಏಕೆಂದರೆ ಇದುವರೆಗೆ ಇಲ್ಲಿ ಆತಿಥ್ಯ ವಹಿಸಿರುವ 34 ಪಂದ್ಯಗಳ ಪೈಕಿ 19 ಬಾರಿ ಚೇಸಿಂಗ್ ಮಾಡಿದ ತಂಡಗಳು ಗೆದ್ದಿವೆ. ಗುರುವಾರ ನಡೆದಿದ್ದ ಪಂದ್ಯದಲ್ಲೂ ಚೇಸಿಂಗ್ ನಡೆಸಿದ ಲಂಕಾ ತಂಡ ಗೆದ್ದು ಬೀಗಿತ್ತು. ಹೀಗಾಗಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.
ಸ್ಪಿನ್ನರ್ಗಳಿಗೆ ಸ್ವರ್ಗ
ಇಲ್ಲಿನ ಪಿಚ್ ಸಾಮಾನ್ಯವಾಗಿ ಇನಿಂಗ್ಸ್ ಆರಂಭದಲ್ಲಿ ತ್ವರಿತವಾಗಿ ಬೌಲರ್‌ಗಳಿಗೆ ಹೆಚ್ಚಿನ ಅನುಕೂಲ ನೀಡಿತ್ತದೆ. ಅದರಲ್ಲೂ ಸ್ಪಿನ್ ಬೌಲರ್‌ಗಳಿಗೆ ಇದು ಹೇಳಿ ಮಾಡಿಸಿದಂತಿದೆ. ಇದುವರೆಗೆ ನಡೆದ ಪಂದ್ಯಗಳಲ್ಲಿ ಇಲ್ಲಿ ಸ್ಪಿನ್ನರ್ಗಳೇ ಹೆಚ್ಚಿನ ವಿಕೆಟ್ ಪಡೆದಿದ್ದಾರೆ. ಹೀಗಾಗಿ ಅನುಭವಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಹೆಚ್ಚಿನ ಹಿಡಿತ ಸಾಧಿಸುವ ನಿರೀಕ್ಷೆಯಿದೆ.
246 ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್
2018 ರಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 7 ವಿಕೆಟ್ಗೆ 363 ಗಳಿಸಿತ್ತು. ಇದು ಈ ಮೈದಾನದಲ್ಲಿ ದಾಖಲಾದ ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ಕಡಿಮೆ ಮೊತ್ತದ ಕೆಟ್ಟ ದಾಖಲೆ ಜಿಂಬಾಬ್ವೆ ತಂಡದ ಹೆಸರಿನಲ್ಲಿದೆ. ಕಳೆದ ವರ್ಷ ಜಿಂಬಾಬ್ವೆ ತಂಡ 70 ರನ್‌ಗಳಿಗೆ ಆಲೌಟ್ ಆಗಿತ್ತು. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 246 ಆಗಿದೆ. ಈ ಸ್ಟೇಡಿಯಂನಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವೈಯಕ್ತಿಕ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ಅಫಘಾನಿಸ್ತಾನ ತಂಡದ ವಿರುದ್ಧ ಇಬ್ರಾಹಿಂ ಜದ್ರಾನ್ ಹೆಸರಿನಲ್ಲಿದೆ. ಕಳೆದ ವರ್ಷ ಲಂಕಾ ವಿರುದ್ಧ 162 ರನ್ ಗಳಿಸಿದ್ದರು.
ಮುಖಾಮುಖಿ
ಏಕದಿನ ಬಲಾಬಲದ ಲೆಕ್ಕಾಚಾರದಲ್ಲಿ ಪಾಕಿಸ್ತಾನ ತಂಡ ಮುಂದಿದೆ. ಭಾರತ ಮತ್ತು ಪಾಕ್ ಇದುವರೆಗೆ 132 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 55 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 73 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 4 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಹೀಗಾಗಿ ಪಾಕ್ ಬಲಿಷ್ಠವಾಗಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್(ವಿಕೆಟ್ ಕೀಪರ್).
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್.