ಅಮೀನಗಡ ಪಪಂ
೪೮ ಕ್ರಮಬದ್ಧ, ೭ ತಿರಸ್ಕೃತ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯಿತಿಗೆ ನಡೆಯುವ ಚುನಾವಣೆಗೆ ಡಿ.೧೬ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆದಿದ್ದು ೪೮ ನಾಮಪತ್ರ ಕ್ರಮಬದ್ಧವಾಗಿವೆ.
ಡಿ.೨೭ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.೧೫ರಂದು ಅಂತಿಮ ದಿನವಾಗಿತ್ತು. ೧೬ ವಾರ್ಡ್ಗಳಿಂದ ೫೫ ನಾಮಪತ್ರ ಸಲ್ಲಿಕೆ ಆಗಿದ್ದವು. ಗುರುವಾರ ನಾಮಪತ್ರ ಪರಿಶೀಲನೆ ಕಾರ್ಯ ನಡೆದು ೭ ನಾಮಪತ್ರಗಳು ತಿರಸ್ಕೃತಗೊಂಡು ೪೮ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಕಾರಿ ವಿ.ಸಿ.ಹೆಬ್ಬಳ್ಳಿ, ಐ.ಬಿ.ಕಡಬಗಟ್ಟಿ ಘೋಷಿಸಿದರು. ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಇದ್ದರು.
ನಾಮಪತ್ರಗಳ ಪರಿಶೀಲನೆ ಕಾರ್ಯ ಪಪಂ ಕಚೇರಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ ೩ರ ವರೆಗೆ ನಡೆಯಿತು. ಕೆಲ ವಾರ್ಡ್ಗಳಿಗೆ ಸಲ್ಲಿಸಿದ ನಾಮಪತ್ರ ಪರಿಶೀಲನೆ ಕಾರ್ಯ ಶೀಘ್ರ ಪೂರ್ಣಗೊಂಡರೆ ವಾರ್ಡ್-೧, ೧೨ ಹಾಗೂ ೧೬ರ ನಾಮಪತ್ರ ಪರಿಶೀಲನೆ ಕಾರ್ಯ ತೀವ್ರ ವಿಳಂಬವಾಯಿತು.
ವಾರ್ಡ್-೧ರಲ್ಲಿ ಬಿಜೆಪಿ ಅಭ್ಯರ್ಥಿ ಎರಡು ಸ್ಥಳದಲ್ಲಿ ಮತದಾರರಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ತಕರಾರು ಸಲ್ಲಿಸಿದ್ದರಿಂದ ಪರಿಶೀಲನೆ ಕಾರ್ಯ ಕೊಂಚ ಗೊಂದಲದಿಂದ ಕೂಡಿತ್ತು. ನಂತರ ಬಿಜೆಪಿ ಅಭ್ಯರ್ಥಿ ಸೂಕ್ತ ದಾಖಲೆ ಸಲ್ಲಿಸಿದ್ದರಿಂದ ಇಬ್ಬರೂ ಅಭ್ಯರ್ಥಿಗಳ ಸಮ್ಮುಖದಲ್ಲಿ ನಾಮಪತ್ರಗಳು ಕ್ರಮಬದ್ಧವೆಂದು ತೀರ್ಮಾನಿಸಲಾಯಿತು.
ವಾರ್ಡ್-೧೬ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ತನ್ನ ಘೋಷಣಾ ಪತ್ರದಲ್ಲಿ ತಪ್ಪು ಮಾಹಿತಿ ಸಲ್ಲಿಸಿದ್ದಾರೆಂದು ಬಿಜೆಪಿ ಅಭ್ಯರ್ಥಿ ಪರಿಶೀಲನೆಗೆ ಮನವಿ ಮಾಡಿದರು. ಒಂದೆರಡು ಗಂಟೆ ವಿಳಂಬವಾದರೂ ಕೊನೆಯಲ್ಲಿ ಎಲ್ಲ ನಾಮಪತ್ರಗಳು ಕ್ರಮಬದ್ಧವೆಂದು ಘೋಷಿಸಿದರು.
ಡಿ.೧೮ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದ್ದು ಅಂದೇ ಚುನಾವಣೆ ಕಣದಲ್ಲಿ ಉಳಿಯುವವರ ಸ್ಟಷ್ಟ ಚಿತ್ರಣ ದೊರೆಯಲಿದೆ. ರಾಷ್ಟಿಯ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ಪಕ್ಷೇತರರಾಗಿಯೂ ನಾಮಪತ್ರ ಸಲ್ಲಿಸಿದ್ದರಿಂದ ಆ ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಲಿದ್ದು ಇನ್ನುಳಿದ ಪಕ್ಷೇತರರು ಬಹುತೇಕ ಕಣದಲ್ಲಿ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.