ನಿಮ್ಮ ಸುದ್ದಿ ಬೆಳಗಾವಿ
ರಾಜ್ಯದಲ್ಲಿ ಸದ್ಯಕ್ಕೆ ಮಿತ್ರ ಮಂಡಳಿ ಹಾಗೂ ಬಿಜೆಪಿ ಸರಕಾರದ ಆಡಳಿತವಿದ್ದು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸರಕಾರದಲ್ಲಿನ ೧೭ ಶಾಸಕರ ರಾಜೀನಾಮೆ ಕೊಡಿಸಿ ಉಪಚುನಾವಣೆ ನಡೆಸಿದ ಬಳಿಕ ಈಗ ರಾಜ್ಯದಲ್ಲಿ ಬಿಜೆಪಿ ಹಾಗೂ ಮಿತ್ರಮಂಡಳಿ ಸರಕಾರ ಆಡಳಿತ ನಡೆಸುತ್ತಿದೆ. ಇವೆರಡರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಸಿಎಂ ಹಾಗೂ ಮಂತ್ರಿಗಳು ಸೇರಿದಂತೆ ಶಾಸಕರಲ್ಲಿ ಸಮನ್ವಯತೆಯ ಕೊರತೆ ಇದೆ. ಕೊರೊನಾ ಕಾಲಘಟ್ಟದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹರಿಹಾಯ್ದರು.
ಬೆಳಗಾವಿಯಲ್ಲಿ ನಡೆಯಲಿರುವ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಿಗೆ ಎಲ್ಲೆಡೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಅವರ ಗೆಲುವಿಗಾಗಿ ಕಾಂಗ್ರೆಸ್‌ನ ಎಲ್ಲರೂ ಸೇರಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಅಂತರದಲ್ಲಿ ಸತೀಶ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಪರ್ವವೇ ಹರಿಸುತ್ತೇವೆ ಎಂದು ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರ ೨೦೧೪ರಲ್ಲಿ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಪ್ರತಿ ವರ್ಷ ೨ ಕೋಟಿ ಯುವಕರಿಗೆ ಉದ್ಯೋಗ, ವಿದೇಶದಲ್ಲಿನ ಕಪ್ಪು ಹಣ ವಾಪಸ್ ತರುವುದು ಎಲ್ಲ ಭರವಸೆಗಳು ಹುಸಿಯಾಗಿವೆ. ಜನ ಕೇಂದ್ರದ ಆಡಳಿತ ನೀತಿಯಿಂದ ಭ್ರಮ ನಿರಸನಗೊಂಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ದಿವಾಳಿಯಲ್ಲಿದ್ದು ಕೋವಿಡ್ ನೆಪ ಹೇಳುತ್ತಿರುವುದು ಸರಿಯಲ್ಲ ಎಂದರು.
ಪ್ರಧಾನಿಯ ಅಚ್ಛೇದಿನ್ ಘೋಷಣೆ ಶ್ರೀಮಂತರಿಗೆ ಮಾತ್ರ ಮೀಸಲಾಗಿದೆ. ಅದು ಅದಾನಿ, ಅಂಬಾನಿಗೆ ಮಾತ್ರ ಎಂಬAತಾಗಿದೆ. ಕೇಂದ್ರದಲ್ಲಿ ನಮ್ಮ ಪಕ್ಷದ ಸರಕಾರವಿದ್ದಾಗ ಯಾವುದೇ ದರ ಹೆಚ್ಚಳವಾಗಿದ್ದಿಲ್ಲ. ಇದೀಗ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಇದು ಅಚ್ಚೇ ದಿನವೇ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು.